ರಾಯಚೂರು: ಆರಾಧನೆ ವೇಳೆ ಮಂತ್ರಾಲಯದ ವಿದ್ಯುತ್ ದೀಪಗಳ ವೈಭವವನ್ನು ಎಷ್ಟು ನೋಡಿದರೂ ಸಾಲದು. ಆದರೆ, ಅಂತಹ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಆಗದವರು ನಿರಾಸೆ ಪಡುವುದು ಬೇಡ. ಇನ್ನು ಮುಂದೆ ಮಂತ್ರಾಲಯ ವರ್ಷವಿಡೀ ಬಣ್ಣ-ಬಣ್ಣದ ವಿದ್ಯುತ್ ದೀಪಗಳಿಂದ ಪ್ರಜ್ವಲಿಸಲಿದೆ.
2009ರಲ್ಲಿ ನೆರೆ ಬಂದು ಹೋದ ಬಳಿಕ ಸಂಪೂರ್ಣ ಕಳೆಗುಂದಿದ್ದ ಮಂತ್ರಾಲಯ, ಕೆಲವೇ ವರ್ಷಗಳಲ್ಲಿ ಊಹೆಗೂ ನಿಲುಕದ ರೀತಿಯಲ್ಲಿ ತಲೆ ಎತ್ತಿ ನಿಂತಿದೆ. ಆದರೆ, ನವ ಮಂತ್ರಾಲಯ ನಿರ್ಮಾಣದ ಕಾರ್ಯ ಮಾತ್ರ ಇಂದಿಗೂ ನಿಂತಿಲ್ಲ. ಭಕ್ತರಿಗೆ ಮಠದ ವೈಭವವನ್ನು ಮತ್ತಷ್ಟು ಉಣಬಡಿಸಲು ಮುಂದಾಗಿರುವ ಶ್ರೀಮಠ, ಶಾಶ್ವತ ವಿದ್ಯುತ್ ದೀಪಾಲಂಕಾರ ಮಾಡಿದೆ. ಇದರಿಂದ ರಾತ್ರಿ ಹೊತ್ತು ಮಂತ್ರಾಲಯದ ಚಿತ್ರಣ ಮತ್ತಷ್ಟು ವಿಜೃಂಭಿಸಲಿದೆ.
ಸಾಮಾನ್ಯವಾಗಿ ಆರಾಧನೆ ಬಿಟ್ಟರೆ ವಿಶೇಷ ದಿನಗಳಲ್ಲಿ ಮಾತ್ರ ಮಠಕ್ಕೆ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗುತ್ತದೆ. ಆದರೆ, ಈಚೆಗೆ ಮಠಕ್ಕೆ ಬರುವ ಭಕ್ತರ ಸಂಖ್ಯೆ ನೋಡಿದರೆ ಮಂತ್ರಾಲಯದಲ್ಲಿ ನಿತ್ಯ ಆರಾಧನೆ ಎನ್ನುವ ಭಾವನೆ ಮೂಡುತ್ತದೆ. ಈ ಕಾರಣಕ್ಕೆ ಭಕ್ತರೊಬ್ಬರು ರಾಯರ ಮಠಕ್ಕೆ ನಿತ್ಯ ದೀಪವೈಭವ ಜರುಗಲಿ ಎಂಬ ಕಾರಣಕ್ಕೆ ಈ ಸೇವೆ ಸಲ್ಲಿಸಿದ್ದಾರೆ. ಸಂಪೂರ್ಣ ವೆಚ್ಚವನ್ನು ಅವರೇ ಭರಿಸಿದ್ದಾರಂತೆ.
ಲೈಟಿಂಗ್ ಹೇಗಿರಲಿದೆ: ವರ್ಷದ 365 ದಿನಗಳಲ್ಲಿ ಎಲ್ಲ ದಿನವೂ ಒಂದೊಂದು ಬಣ್ಣದ ದೀಪಗಳನ್ನು ಹಾಕಬಹುದಾಗಿದೆ. ರಾಯರ ಬೃಂದಾವನದ ಸುತ್ತಲಿನ ಶಿಲಾಮಂಟಪ, ಹೊರಭಾಗದ ಮೇಲ್ಮೈ, ಮುಂಭಾಗದ ಚಿನ್ನದ ಗೋಪುರ, ಮುಖ್ಯದ್ವಾರ, ಕಾಳಿಂಗ ನರ್ತನ, ಮಂಚಾಲಮ್ಮ ದೇವಸ್ಥಾನ, ಸೆಂಟ್ರಲ್ ರಿಸೆಪ್ಶನ್ ಕಚೇರಿ ಸೇರಿ ವಿವಿಧೆಡೆ ದೀಪಗಳ ಅಳವಡಿಕೆ ಮಾಡಲಾಗಿದೆ. ಹಲವು ಬಣ್ಣಗಳಿಂದ ಕೂಡಿದ ಬಲ್ಬ್ಗಳಿಂದ ದಿನಕ್ಕೊಂದು ಮಾದರಿಯಲ್ಲಿ ಕಂಗೊಳಿಸಲಿದೆ ಶ್ರೀಮಠ. ಬಜಾಜ್ ಸಂಸ್ಥೆಗೆ ನಿರ್ವಹಣೆ ಹೊಣೆ ನೀಡಲಾಗಿದೆ. ಎಲ್ಲ ವಿದ್ಯುತ್‌ದೀಪಗಳ ನಿಯಂತ್ರಣಕ್ಕೆ ಪ್ರತ್ಯೇಕ ಕೋಣೆ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಇದು ಕೂಡ ಶೇ.80ರಷ್ಟು ಕಾಮಗಾರಿ ಮುಗಿದಿದ್ದು, ಆರಾಧನೆಗೆಲ್ಲ ಮುಕ್ತಗೊಳ್ಳಲಿದೆ.
ಭಕ್ತರೊಬ್ಬರು ಮಠಕ್ಕೆ ವಿಶೇಷ ವಿದ್ಯುತ್ ದೀಪಾಲಂಕಾರದ ಸೇವೆ ನೀಡಿದ್ದಾರೆ. ವರ್ಷವಿಡೀ ದಿನಕ್ಕೊಂದು ಬಣ್ಣದಲ್ಲಿ ಮಠವನ್ನು ಅಲಂಕರಿಸಬಹುದು. ಎಲ್ಲ ಕಾಲಕ್ಕೂ ಬರುವ ಭಕ್ತರಿಗಾಗಿ ಮಠವನ್ನು ಮತ್ತಷ್ಟು ಸುಂದರಗೊಳಿಸಲಾಗುತ್ತಿದೆ. ಬಜಾಜ್ ಸಂಸ್ಥೆಯವರು ಇದನ್ನು ನಿರ್ವಹಿಸುತ್ತಿದ್ದು, ಬಹುತೇಕ ಶೇ.80ರಷ್ಟು ದೀಪಗಳ ಅಳವಡಿಕೆ ಕಾರ್ಯ ಮುಗಿದಿದೆ.
– ಎಸ್.ಕೆ. ಶ್ರೀನಿವಾಸ್, ಶ್ರೀಮಠದ ವ್ಯವಸ್ಥಾಪಕ.
– ಸಿದ್ಧಯ್ಯಸ್ವಾಮಿ ಕುಕನೂರು