Advertisement

ಮನ್ಸೂರ್‌ ಆಡಿಯೋ: ಅಸಲಿಯತ್ತೇನು?

11:15 PM Jun 11, 2019 | Team Udayavani |

ಬೆಂಗಳೂರು: ಐಎಂಐ ಸಂಸ್ಥಾಪಕ ಮನ್ಸೂರ್‌ ಖಾನ್‌ ಮಾತನಾಡಿದ್ದಾರೆ ಎನ್ನಲಾದ ಆಡಿಯೋವೊಂದು ಮಂಗಳವಾರ ವೈರಲ್‌ ಆಗಿದೆ. ಸೋಮವಾರ ವೈರಲ್‌ ಆಗಿದ್ದ ಆಡಿಯೋದಲ್ಲಿ ಇದು ನನ್ನ ಕೊನೆಯ ಸಂದೇಶ ಎಂದು ಹೇಳಿದ್ದ ಮನ್ಸೂರ್‌, ಮಂಗಳವಾರ ವೈರಲ್‌ ಆಗಿರುವ ಆಡಿಯೋದಲ್ಲಿ ಬದುಕಿರುವುದಾಗಿ ಹೇಳಿದ್ದು, ಜೂ.15ರೊಳಗೆ ಹೂಡಿಕೆದಾರರ ಹಣ ವಾಪಸ್‌ ನೀಡುವುದಾಗಿ ತಿಳಿಸಿದ್ದಾರೆ.

Advertisement

ಎರಡು ಪ್ರತ್ಯೇಕ ಆಡಿಯೋಗಳಲ್ಲಿ ಮನ್ಸೂರ್‌ ಎನ್ನಲಾದ ವ್ಯಕ್ತಿ ನೀಡಿರುವ ಭಿನ್ನ ಹೇಳಿಕೆಯಿಂದ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ವ್ಯವಸ್ಥಿತವಾಗಿ ಆಡಿಯೋ ಬಿಡುಗಡೆ ಮೂಲಕ ಆರೋಪಿಗಳು ಜನರ ದಿಕ್ಕುತಪ್ಪಿಸಲು ಯತ್ನಿಸಿರುವ ಬಗ್ಗೆಯೂ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಆಡಿಯೋದಲ್ಲಿರುವ ಧ್ವನಿ ಮನ್ಸೂರ್‌ನದ್ದೇ ಎಂಬುದು ಖಚಿತವಾಗಲು ಧ್ವನಿಪರೀಕ್ಷೆ ನಡೆಯಬೇಕಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಆಡಿಯೋದಲ್ಲೇನಿದೆ?: “ನಾನು ಮನ್ಸೂರ್‌ ಖಾನ್‌, ಐಎಂಎ ಗ್ರೂಪ್‌ ಆಫ್ ಕಂಪನೀಸ್‌ನ ಸಂಸ್ಥಾಪಕ. ದೇವರ ದಯೆಯಿಂದ ನಾನು ಜೀವಂತವಾಗಿದ್ದು, ಬೆಂಗಳೂರಲ್ಲೇ ಇದ್ದೇನೆ. ನಾನು ಆತ್ಮಹತ್ಯೆ ಮಾಡಿಕೊಂಡಿದ್ದೇನೆ, ನನ್ನ ಕುಟುಂಬ ಪರಾರಿಯಾಗಿದೆ ಎಂಬ ಸುದ್ದಿ ಹಬ್ಬಿಸಿದ್ದರ ಹಿಂದೆ ದೊಡ್ಡ ಪಿತೂರಿ ಇದೆ. ನಾನು ಎಲ್ಲರ ಹಣವನ್ನು ವಾಪಸ್‌ ಕೊಡುತ್ತೇನೆ, ಯಾರೂ ಆತಂತಪಡುವ ಅಗತ್ಯವಿಲ್ಲ. ನನ್ನನ್ನು ಓಡಿಸುವ ಪಿತೂರಿಯಲ್ಲಿ ಶಿವಾಜಿನಗರದ ಶಾಸಕ ರೋಷನ್‌ ಬೇಗ್‌, ಶಕೀಲ್‌ ಅಹ್ಮದ್‌ ಮತ್ತಿತರರ ಕೈವಾಡವಿದೆ.

ನಾನು ಜನರಿಂದ ಹೂಡಿಕೆ ಮಾಡಿಸಿಕೊಂಡಿರುವ ಹಣವನ್ನು ಜ್ಯುವೆಲ್ಲರಿ ಮತ್ತು ಫಾರ್ಮಾ ವ್ಯವಹಾರದಲ್ಲಿ ತೊಡಗಿಸಿದ್ದೇನೆ. ಎಲ್ಲರಿಗೂ ಅವರ ಹಣವನ್ನು ವಾಪಸ್‌ ಕೊಡುತ್ತೇನೆ ಇಂದು ಸಂಜೆ (ಜೂ.10) ಸಮದ್‌ ಹೌಸ್‌ನಲ್ಲಿ ಸಭೆ ಕರೆದಿದ್ದೇನೆ. ರಾಹಿಲ್‌ ಅನ್ನುವವರು ಸಭೆಯಲ್ಲಿ ಇರುತ್ತಾರೆ. ಎಲ್ಲರ ಅಹವಾಲುಗಳನ್ನು ಅವರು ಆಲಿಸುತ್ತಾರೆ. ಜೂ.15ರ ತನಕ ಎಲ್ಲರ ಹಣವನ್ನು ವಾಪಸ್‌ ಕೊಡುತ್ತೇನೆ. ಮೊದಲು ದೊಡ್ಡ ಹೂಡಿಕೆದಾರರ ಹಣವನ್ನು ವಾಪಸ್‌ ಕೊಡುತ್ತೇನೆ. ಅದಾದ ಮೇಲೆ ಕ್ರಮೇಣವಾಗಿ ಸಣ್ಣ ಹೂಡಿಕೆದಾರರ ಹಣ ವಾಪಸ್‌ ಕೊಡುತ್ತೇನೆ. ನಾನು ಎಲ್ಲೂ ಹೋಗಿಲ್ಲ, ಬೆಂಗಳೂರಲ್ಲೇ ಇದ್ದೇನೆ. ನನ್ನನ್ನು ಓಡಿಸಲು ಪ್ರಭಾವಿ ವ್ಯಕ್ತಿಗಳು ಪಿತೂರಿ ನಡೆಸಿದ್ದಾರೆ.’

Advertisement

Udayavani is now on Telegram. Click here to join our channel and stay updated with the latest news.

Next