ಬೆಂಗಳೂರು: ಆಧುನಿಕ ತಂತ್ರಜ್ಞಾನವನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಆರೋಗ್ಯಕರ ಜೀವನ ಶೈಲಿಯನ್ನು ರೂಢಿಸಿಕೊಳ್ಳಲು ಜನತೆ ಮುಂದಾಗಬೇಕು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸೂಖ್ ಮಾಂಡವೀಯ ಹೇಳಿದ್ದಾರೆ.
ಬೊಜ್ಜು, ಸ್ಥೂಲಕಾಯ ಸಮಸ್ಯೆಗಳ ಕುರಿತು ಗುರುವಾರದಿಂದ ನಗರದಲ್ಲಿ ಆರಂಭವಾಗಿರುವ ಮೂರು ದಿನಗಳ ಅಂತರರಾಷ್ಟ್ರೀಯ ತಜ್ಞ ವೈದ್ಯರ ಒಸಿಕಾನ್ 2022 ಸಮ್ಮೇಳನವನ್ನು ವರ್ಚುವಲ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ತಂತ್ರಜ್ಞಾನದಲ್ಲಿ ವ್ಯಾಪಕ ಅಭಿವೃದ್ಧಿಯಾಗುತ್ತಿದ್ದು, ದಿನನಿತ್ಯ ಬಗೆ ಬಗೆಯ ಸಂಶೋಧನೆಗಳು ನಡೆಯುತ್ತಿವೆ. ಇದರ ಜತೆ ಅನಾರೋಗ್ಯಕರ ಜೀವನ ಶೈಲಿಯೂ ಸಹ ಹೆಚ್ಚಾಗುತ್ತಿದೆ. ಹೀಗಿರುವಾಗ ತಂತ್ರಜ್ಞಾನ ಆರೋಗ್ಯಪೂರ್ಣ ಬದುಕಿಗೆ ನಾಂದಿಯಾಗಬೇಕು ಎಂದರು.
ಜೀವನ ಶೈಲಿಯಲ್ಲಿ ಸಕಾರಾತ್ಮಕ ಬದಲಾವಣೆ ತರುವ ಉದ್ದೇಶದಿಂದಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸದೃಢ ಭಾರತ ಫಿಟ್ ಇಂಡಿಯಾ ಅಭಿಯಾನಕ್ಕೆ ಒತ್ತು ನೀಡಿದ್ದಾರೆ. ವ್ಯಕ್ತಿಗತವಾಗಿ ದೈಹಿಕ ಸದೃಢತೆ ಹೊಂದಿದ್ದರೆ ಸಾಕಷ್ಟು ಲಾಭಗಳಿವೆ. ದೇಶ ಶಕ್ತಿಶಾಲಿಯಾಗುತ್ತದೆ. ಸಮೃದ್ಧವಾಗುತ್ತದೆ. ಆದರೆ, ಒಮ್ಮೆ ಸ್ಥೂಲಕಾಯ ಸಮಸ್ಯೆಗಳಿಗೆ ಒಳಗಾದರೆ ಅನಾರೋಗ್ಯದ ಬಾಗಿಲು ತೆರೆದಂತಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೋವಿಡ್ ಸಂದರ್ಭದಲ್ಲಿ ಸ್ಥೂಲಕಾಯದವರಿಗೆ ಹೆಚ್ಚಿನ ಸಮಸ್ಯೆಗಳು ಎದುರಾಗಿತ್ತು. ಇದನ್ನು ಅಂಕಿ ಅಂಶಗಳೇ ದೃಢಪಡಿಸುತ್ತವೆ. ಹೀಗಾಗಿಯೇ ನಾವು ಸೂಕ್ತ ಆರೋಗ್ಯ ನಿರ್ವಹಣೆ, ಜೀವನ ಪದ್ಧತಿಯಲ್ಲಿ ಬದಲಾವಣೆ ಹೊಂದಬೇಕಾಗಿದೆ. ದಿನನಿತ್ಯ ವ್ಯಾಯಾಮಕ್ಕೆ ಒತ್ತು ನೀಡಬೇಕು. ಸಂಸತ್ ಅಧಿವೇಶನ ಇದ್ದರೆ ಸ್ವತಃ ತಾವೂ ಸೇರಿದಂತೆ ಹಲವು ಮಂದಿ ಸಂಸದರು ಸೈಕಲ್ ಮೂಲಕ ಸಂಸತ್‌ಗೆ ತೆರಳುತ್ತೇವೆ. ವಿಪರ್ಯಾಸವೆಂದರೆ ದೈಹಿಕ ಸದೃಢತೆಗೆ ಹೆಸರಾಗಿರುವ ನಮ್ಮ ಹಳ್ಳಿಗಳಲ್ಲಿ ರೈತರು ತಮ್ಮ ಹೊಲಗಳಿಗೆ ತೆರಳಲು ದ್ವಿಚಕ್ರ ವಾಹನ ಬಳಸುತ್ತಿ¨ªಾರೆ. ಕಳವಳಕಾರಿ ಸಂಗತಿ ಎಂದರೆ ದೇಶದಲ್ಲಿ ಶೇ 31.6 ರಷ್ಟು ಮಂದಿ ಸ್ಥೂಲಕಾಯದಿಂದ ಬಳಲುತ್ತಿದ್ದು, ಇದನ್ನು ನೋಡಿದರೆ ನಮ್ಮ ಮುಂದೆ ಇದು ಬಹುದೊಡ್ಡ ಸಮಸ್ಯೆಯಾಗಿ ನಿಂತಿದೆ. ಅಪಾಯದ ಗಂಟೆ ಭಾರಿಸುತ್ತಿದೆ ಎಂದು ಡಾ. ಮನ್ಸುಖ್ ಮಾಂಡವೀಯ ಹೇಳಿದರು.
ತಂತ್ರಜ್ಞಾನ ನಮ್ಮ ಅಂಗೈಯಲ್ಲಿದೆ. ಪ್ರತಿದಿನ ನಾವು ಎಷ್ಟು ಕ್ಯಾಲರಿ ಬರ್ನ್ ಮಾಡಿದ್ದೇವೆ ಎನ್ನುವುದನ್ನು ನಾವೇ ನೋಡಿಕೊಳ್ಳಬಹುದು. ಎಲ್ಲರೂ ಸ್ಥೂಲಕಾಯದಿಂದ ಮುಕ್ತರಾಗಲು ಸಾಧ್ಯವಿದೆ. ಬೊಜ್ಜು, ಸ್ಥೂಲಕಾಯ ಸಮಸ್ಯೆಗಳ ಕುರಿತು ಹೆಚ್ಚು ಜನ ಜಾಗೃತಿ ಮೂಡಬೇಕು. ಜನರಲ್ಲಿ ವ್ಯಾಯಾಮ, ಯೋಗ, ಉತ್ತಮ ಆಹಾರ, ವಿಹಾರ, ವಿಚಾರಗಳ ಬಗ್ಗೆ ತಿಳಿವಳಿಕೆ ನೀಡಬೇಕು ಎಂದು ಮಾಂಡವೀಯ ತಿಳಿಸಿದರು.