ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಹಗರಣವನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಬಗೆದಷ್ಟೂ ಅಕ್ರಮ ಬಯಲಾಗುತ್ತಿದೆ. ಆರೋಪಿ ಮನ್ಸೂರ್ ಖಾನ್, ಈಜು ಕೊಳದಲ್ಲಿ 303 ಕೆ.ಜಿ. ನಕಲಿ ಚಿನ್ನದ ಗಟ್ಟಿ ಅಡಗಿಸಿಟ್ಟಿದ್ದ ಎಂಬ ಮಾಹಿತಿ ಈಗ ಹೊರಬಂದಿದೆ! ಐಎಂಎ ಮಾಲೀಕ ಮನ್ಸೂರ್ ಖಾನ್ ಹೂಡಿಕೆದಾರರಿಂದ ಹಣ ಹೂಡಿಕೆ ಮಾಡಿಸಲು ನಕಲಿ ಚಿನ್ನದ ಗಟ್ಟಿಗಳನ್ನು ಅಸ್ತ್ರವನ್ನಾಗಿ ಮಾಡಿಕೊಂಡಿದ್ದ ಎಂಬ ಸಂಗತಿ ಬಹಿರಂಗವಾಗಿದೆ. ಎಸ್‌ಐಟಿ ವಿಚಾರಣೆ ವೇಳೆ ಮನ್ಸೂರ್ ಈ ಸ್ಫೋಟಕ ಮಾಹಿತಿ ಬಗ್ಗೆ ಬಾಯ್ಬಿಟ್ಟಿದ್ದಾನೆ.
ಈ ಮಾಹಿತಿ ಆಧರಿಸಿ ರಿಚ್‌ಮಂಡ್ ಟೌನ್‌ನಲ್ಲಿರುವ ಮನ್ಸೂರ್‌ಗೆ ಸೇರಿದ 6ನೇ ಮಹಡಿಯ ಸ್ವಿಮ್ಮಿಂಗ್ ಫೂಲ್‌ನ ಮೋಟಾರು ಕಿಂಡಿಯಲ್ಲಿ ಬಚ್ಚಿಡಲಾಗಿದ್ದ ಬರೋಬ್ಬರಿ 303 ಕೆ.ಜಿ ನಕಲಿ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದೆ. ಮನ್ಸೂರ್ ಖಾನ್ ದೇಶ ಬಿಟ್ಟು ಪರಾರಿಯಾಗುವ ಕೆಲವೇ ದಿನಗಳ ಮುನ್ನ ನಕಲಿ ಚಿನ್ನ ಬಿಸ್ಕತ್‌ಗಳನ್ನು ತನ್ನ ಆಪ್ತ ವಸೀಂ ಮೂಲಕ ಅಲ್ಲಿಗೆ ಸ್ಥಳಾಂತರಿದ್ದ ಎಂದು ಎಸ್‌ಐಟಿ ತಿಳಿಸಿದೆ.
ತಾಮ್ರಕ್ಕೆ ಚಿನ್ನಲೇಪನ!: ಹಲವು ವರ್ಷಗಳ ಹಿಂದೆ ಆರೋಪಿ ಮನ್ಸೂರ್ ಖಾನ್ ತಾಮ್ರದಲ್ಲಿ ಬಿಸ್ಕತ್‌ಗಳು ಹಾಗೂ ಸಣ್ಣದಾದ ಗಟ್ಟಿಗಳನ್ನು ಮಾಡಿಸಿದ್ದಾನೆ. ಅದಕ್ಕೆ ಚಿನ್ನಲೇಪವನ್ನು ಮಾಡಿಸಿದ್ದಾನೆ. ಈ ನಕಲಿ ಚಿನ್ನದ ಬಿಸ್ಕತ್‌ಗಳನ್ನು ಐಎಂಎ ಜ್ಯುವೆಲರಿ ಶಾಪ್‌ನಲ್ಲಿಟ್ಟುಕೊಂಡಿದ್ದ. ಕಂಪೆನಿಯಲ್ಲಿ ಹಣ ಹೂಡಿಕೆ ಮಾಡಲು ಬರುವವರಿಗೆ ಈ ನಕಲಿ ಚಿನ್ನವನ್ನು ತೋರಿಸಿ ನೀವು ಹೂಡುವ ಹಣ ಚಿನ್ನದ ವಹಿವಾಟಿಗೆ ಬಳಕೆಯಾಗಲಿದೆ ಎಂದು ನಂಬಿಸಿ ಕೋಟ್ಯಾಂತರ ರೂ. ಹಣ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದ. ನಕಲಿ ಚಿನ್ನದ ವಿಚಾರ ಮನ್ಸೂರ್ ಖಾನ್ ಹಾಗೂ ನಿರ್ದೇಶಕ ವಸೀಂಗೆ ಹೊರತುಪಡಿಸಿ ಮತ್ಯಾರಿಗೂ ಈ ವಿಚಾರ ಗೊತ್ತಿರಲಿಲ್ಲ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ಆ.30ರವರೆಗೆ ವಸೀಂ ಕಸ್ಟಡಿಗೆ: ಐಎಂಎ ನಿರ್ದೇಶಕರಲ್ಲಿ ಒಬ್ಬನಾದ ವಸೀಂ ಈ ಹಿಂದೆಯೂ ಎಸ್‌ಐಟಿಯಿಂದ ಬಂಧಿತನಾಗಿದ್ದ. ಆದರೆ, ನಕಲಿ ಚಿನ್ನದ ಬಗ್ಗೆ ಮಾಹಿತಿ ನೀಡಿರಲಿಲ್ಲ. ತನಿಖೆ ಮುಂದುವರಿದಂತೆ ಮನ್ಸೂರ್ ಸೂಚನೆ ಮೇರೆಗೆ ರಿಚ್‌ಮಂಡ್ ರಸ್ತೆಯ ಅಪಾರ್ಟ್‌ಮೆಂಟ್‌ನಲ್ಲಿ ಚಿನ್ನ ಬಚ್ಚಿಟ್ಟಿದ್ದ ಮಾಹಿತಿ ಆಧರಿಸಿ ಪುನಃ ಬಂಧಿಸಿದ್ದು, ನಕಲಿ ಚಿನ್ನ ಜಪ್ತಿ ಮಾಡಲಾಗಿದೆ.
ಆರೋಪಿಗಳಿಬ್ಬರೂ ಇನ್ನೂ ಹಲವು ಅಕ್ರಮಗಳನ್ನು ಎಸಗಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಹೀಗಾಗಿ, ಹೆಚ್ಚಿನ ವಿಚಾರಣೆ ಸಲುವಾಗಿ ನ್ಯಾಯಾಲಯದ ಅನುಮತಿ ಪಡೆದು ವಸೀಂನನ್ನು ಆ.30ರವರೆಗೆ ಕಸ್ಟಡಿಗೆ ಪಡೆಯಲಾಗಿದೆ ಎಂದು ಎಸ್‌ಐಟಿ ಮೂಲಗಳು ಹೇಳಿವೆ.
ನಕಲಿ-ಅಸಲಿ: “ನನ್ನ ಬಳಿ ಚಿನ್ನದ ಗಟ್ಟಿಗಳಿವೆ’ ಎಂದು ಮನ್ಸೂರ್ ಖಾನ್ ತನ್ನ ಬಂಧನಕ್ಕೆ ಮುಂಚೆ ವೀಡಿಯೋದಲ್ಲಿ ಹೇಳಿಕೆ ನೀಡಿದ್ದ. ಇದೀಗ ನಕಲಿ ಚಿನ್ನ ಸಿಕ್ಕಿರುವ ವಿಚಾರ ಗ್ರಾಹಕರಲ್ಲಿ ಶಂಕೆ ಮೂಡುವಂತೆ ಮಾಡಿದೆ. ಅಸಲಿ ಚಿನ್ನ ಜಪ್ತಿಯಾದರೆ ಹೂಡಿಕೆ ಹಣ ವಾಪಸ್ ಬರುವ ನಿರೀಕ್ಷೆ ಇತ್ತು. ಆದರೆ ಇದೀಗ ನಕಲಿ ಚಿನ್ನ ಆಗಿರುವುದರಿಂದ ಹಣ ವಾಪಸ್ ಬರುತ್ತದೋ, ಇಲ್ಲವೋ ಎಂಬ ಆತಂಕ ಹೆಚ್ಚಾಗಿದೆ. ಅಸಲಿ ಚಿನ್ನವನ್ನು ಬೇರೆಡೆ ಸಾಗಿಸಿ ನಕಲಿ ಚಿನ್ನ ಏಕೆ ಇಟ್ಟಿರಬಾರದು ಎಂಬ ಶಂಕೆಯೂ ಹೂಡಿಕೆದಾರರಲ್ಲಿ ವ್ಯಕ್ತವಾಗಿದೆ ಎನ್ನಲಾಗಿದೆ.