Advertisement

Mansoon: ರಾಜ್ಯಕ್ಕೆ ಮುಂಗಾರು ಪ್ರವೇಶ… ದಕ್ಷಿಣ ಕರ್ನಾಟಕದ ಬಹುತೇಕ ಕಡೆ ಮುಂಗಾರು ಮಳೆ

10:28 PM Jun 02, 2024 | Team Udayavani |

ಬೆಂಗಳೂರು: ನಿರೀಕ್ಷೆಯಂತೆ ರವಿವಾರ ರಾಜ್ಯಕ್ಕೆ ಮುಂಗಾರು ಪ್ರವೇಶಿಸಿದ್ದು, ದಕ್ಷಿಣ ಕರ್ನಾಟಕದ ಬಹುತೇಕ ಭಾಗವನ್ನು ಮುಂಗಾರು ಆವರಿಸಿದೆ. ಮುಂದಿನ 2 – 3 ದಿನಗಳಲ್ಲಿ ರಾಜ್ಯದ ಉಳಿದ ಭಾಗಗಳಿಗೂ ಮುಂಗಾರು ವ್ಯಾಪಿಸುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆಯು ತಿಳಿಸಿದೆ.

Advertisement

ಬೆಂಗಳೂರು ನಗರ ಸಹಿತ ದಕ್ಷಿಣ ಕರ್ನಾಟಕದ ಬಹುತೇಕ ಭಾಗಕ್ಕೆ ಮುಂಗಾರು ಪ್ರವೇಶಿಸಿದೆ. ಕರ್ನಾಟಕದ ಉಳಿದ ಭಾಗದಲ್ಲಿ ಮುಂಗಾರು ಮಳೆಯು 2-3 ದಿನಗಳಲ್ಲಿ ಪ್ರವೇಶವಾಗುವ ಅನುಕೂಲಕರ ಪರಿಸ್ಥಿತಿಗಳು ನಿರ್ಮಾಣಗೊಂಡಿವೆ. ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಮುಂದಿನ ಜೂ. 6ರ ವರೆಗೆ ಹಗುರದಿಂದ ವ್ಯಾಪಕವಾಗಿ ಮಳೆಯಾಗುವ ಸಾಧ್ಯತೆ ಇದೆ. 40ರಿಂದ 50 ಕಿ.ಮೀ. ವೇಗದಲ್ಲಿ ಬಿರುಗಾಳಿಯೂ ಬೀಸಲಿದೆ. ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ, ಕೊಪ್ಪಳ, ಬಾಗಲಕೋಟೆ, ಹಾಸನ, ಮೈಸೂರು, ಮಂಡ್ಯ, ಕೊಡಗು ಜಿಲ್ಲೆಗಳ ಕೆಲವು ಕಡೆ ಇನ್ನೂ ಎರಡು ಮೂರು ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಹಳದಿ ಅಲರ್ಟ್‌ ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ಜೂ. 6ರ ವರೆಗೆ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ತಜ್ಞ ಸಿ.ಎಸ್‌. ಪಾಟೀಲ್‌ ತಿಳಿಸಿದ್ದಾರೆ.

ಈ ನಡುವೆ ಶನಿವಾರ ರಾತ್ರಿ ಹಾಗೂ ರವಿವಾರ ಹಳೆ ಮೈಸೂರು ಭಾಗದ ಹಲವೆಡೆ ಮಳೆಯಾಗಿದೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ಶನಿವಾರ ರಾತ್ರಿ ಬಿದ್ದ ಭಾರೀ ಮಳೆಗೆ 15ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ನೆಲಕ್ಕುರುಳಿದ್ದು, ಹತ್ತಾರು ಗ್ರಾಮಗಳಲ್ಲಿ ಇಡೀ ರಾತ್ರಿ ವಿದ್ಯುತ್‌ ಸರಬರಾಜು ಇಲ್ಲದೇ ಕಗ್ಗತ್ತಲಾಗಿದ್ದವು.

ವಾಲಿದ ಪುರಾತನ ದೇಗುಲ
ಮಂಡ್ಯ ಜಿಲ್ಲೆ ಕಿಕ್ಕೇರಿ ಪಟ್ಟಣ ಸಹಿತ ಹಲವೆಡೆ ಶನಿವಾರ ತಡರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಕಿಕ್ಕೇರಿಯಲ್ಲಿ ಶಿಥಿಲಾವಸ್ಥೆ ತಲುಪಿರುವ ಹೊಯ್ಸಳರ ಕಾಲದಲ್ಲಿ ನಿರ್ಮಿಸಿರುವ ಪುರಾತನ ಜನಾರ್ದನ ದೇಗುಲ ಒಂದು ಕಡೆ ವಾಲಿದೆ. ಸುಂದರ ಶಿಲಾ ಬಾಲಿಕೆಯರನ್ನೊಳಗೊಂಡ ದೇಗುಲ ಯಾವುದೇ ಕ್ಷಣದಲ್ಲೂ ಬೀಳುವ ಅಪಾಯದಲ್ಲಿದ್ದು, ನೆರೆಯ ನಿವಾಸಿಗಳಲ್ಲಿ ಆತಂಕ ಸೃಷ್ಟಿಯಾಗಿದೆ.

ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಹನಗೋಡು ಸುತ್ತಮುತ್ತ ಭಾರೀ ಬಿರುಗಾಳಿ ಸಹಿತ ಮಳೆಗೆ ನೂರಾರು ಮರಗಳು ನೆಲಕ್ಕುರುಳಿವೆ. ಮನೆಗಳ ಮೇಲೆ ಮರ ಬಿದ್ದಿದೆ. ಹೊಲಗಳು ಕೆರೆಯಂತಾಗಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯುಂಟಾಗಿದೆ. ಕಿರಂಗೂರು-ಹರಳಹಳ್ಳಿ ರಸ್ತೆ ಬಂದಾಗಿದೆ. ವಿದ್ಯುತ್‌ ಕಂಬಗಳು ಉರುಳಿ ಬಿದ್ದು ಸಂಪರ್ಕ ಕಡಿತಗೊಂಡಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾನುವಾರ ಸಾಧಾರಣ ಮಳೆಯಾಗಿದೆ.

Advertisement

ಕೆಆರ್‌ಎಸ್‌ ಜಲಾಶಯಕ್ಕೆ ನಾಲ್ಕು ಅಡಿ ನೀರು
ಕಳೆದ 25 ದಿನಗಳಿಂದ ಪೂರ್ವ ಮುಂಗಾರು ಕಾವೇರಿ ಕೊಳ್ಳದ ವ್ಯಾಪ್ತಿಯಲ್ಲಿ ಉತ್ತಮವಾಗಿದ್ದರಿಂದ ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯಕ್ಕೆ ನಾಲ್ಕು ಅಡಿಯಷ್ಟು ನೀರು ಹರಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next