ಹಲಸಿನ ಹಣ್ಣು ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ … ಮಲೆನಾಡು ಮತ್ತು ಕರಾವಳಿಯ ಪ್ರದೇಶದಲ್ಲಿ ವ್ಯಾಪಕವಾಗಿ ಬೆಳೆಯುವ ಹಲಸಿನ ಹಣ್ಣು ಏಪ್ರಿಲ್ ,ಮೇ ತಿಂಗಳು ಬಂತೆಂದರೆ ಸಾಕು ಮಾರುಕಟ್ಟೆಗಳಲ್ಲಿ ಹಲಸಿನ ಹಣ್ಣುಗಳದ್ದೇ ಕಾರುಬಾರು.
ಹಲಸಿನ ಹಣ್ಣು ಹೊರಗಿನಿಂದ ನೋಡಲು ಆಕರ್ಷಕವಲ್ಲ ಆದರೆ ಸುಲಿದಿಟ್ಟರೆ ಹೊಂಬಣ್ಣದ ಹಲಸಿನ ಹಣ್ಣು ಬಾಯಲ್ಲಿ ನೀರೂರಿಸುತ್ತದೆ ಸುವಾಸನೆ ಭರಿತ ಪರಿಮಳ ನಮ್ಮನ್ನು ಹಲಸಿನ ಹಣ್ಣಿನತ್ತ ಆಕರ್ಷಿಸುತ್ತದೆ . ಹಲಸಿನಲ್ಲಿ ಹಲವಾರು ಔಷಧೀಯ ಗುಣಗಳಿವೆ ಹಾಗೂ ಹಲಸಿನ ಹಣ್ಣಿಂದ ಹಲವು ವಿಧದ ತಿಂಡಿ ತಿನಿಸುಗಳನ್ನು ಮಾಡಬಹುದು.
ಹಲಸಿನ ಔಷಧೀಯ ಗುಣ:
1. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಿಟಮಿನ್ ಸಿಯನ್ನು ಒಳಗೊಂಡಿರುವ ಹಲಸಿನ ಹಣ್ಣು ಬ್ಯಾಕ್ಟೀರಿಯಾ ಸೋಂಕಿನಿಂದ ನಮ್ಮನ್ನು ಸಂರಕ್ಷಿಸುತ್ತದೆ. ಬಿಳಿ ರಕ್ತ ಕಣಗಳ ಉತ್ಪತ್ತಿಯನ್ನು ವರ್ಧಿಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
2. ಹಲಸಿನ ಸೇವನೆಯಿಂದ ಹೊಟ್ಟೆಯಲ್ಲಿ ಆಲ್ಸರ್ ಮತ್ತು ಜೀರ್ಣಕ್ರಿಯೆ ಸಮಸ್ಯೆಗಳನ್ನು ದೂರ ಮಾಡುತ್ತದೆ.
3. ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿ ಹಲಸಿನ ಹಣ್ಣಿನಲ್ಲಿರುವ ಪೊಟ್ಯಾಸಿಯಂ ಕಾರಣವಾಗಿದೆ.
4. ಹಲಸಿನ ಹಣ್ಣಿನ ಬೇರುಗಳು ಅಸ್ತಮಾದಿಂದ ಬಳಲುತ್ತಿರುವವರಿಗೆ ರಾಮಬಾಣ. ಈ ಬೇರಿನಿಂದ ಕಷಾಯ ಮಾಡಿ ಕುಡಿದರೆ ಅಸ್ತಮಾದಿಂದ ದೂರವಿರಬಹುದು.
5. ಹಲಸಿನ ಹಣ್ಣಿನಲ್ಲಿ ಅಧಿಕ ನಾರಿನಂಶ ಇರುವುದರಿಂದ ಮಲಬದ್ಧತೆ ನಿವಾರಕವಾಗುವುದು.
6. ಹಲಸಿನಲ್ಲಿರುವ ಕ್ಯಾಲ್ಸಿಯಂ ಮತ್ತು ಮೆಗ್ನೆಷಿಯಂನೊಂದಿಗೆ ಕಾರ್ಯವಹಿಸಿ ಮೂಳೆಯನ್ನು ಬಲಪಡಿಸುತ್ತದೆ.
ಹಲಸಿನ ಹಣ್ಣಿನ ವೈವಿಧ್ಯ:
ಹಲಸಿನ ಹಣ್ಣಿನಿಂದ ಸಾಮಾನ್ಯವಾಗಿ ಹಪ್ಪಳ, ಸಂಡಿಗೆ, ಚಿಪ್ಸ್, ಹಲ್ವ, ಹೋಳಿಗೆ, ಕಡಬು/ಇಡ್ಲಿ, ಮುಳಕ, ಪಾಯಸ, ದೋಸೆ…ಹೀಗೆ ತಿನಿಸುಗಳ ಪಟ್ಟಿ ಬೆಳೆಯುತ್ತಲ್ಲೇ ಹೋಗುತ್ತದೆ.
ಮಳೆಗಾಲದ ಸಮಯದಲ್ಲಿ ಏನಾದರೂ ತಿನಿಸು ಮಾಡಿ ತಿನ್ನಬೇಕೆಂದು ಮನಸ್ಸು ಸದಾ ಹಂಬಲಿಸುತ್ತದೆ. ಈ ನಿಟ್ಟಿನಲ್ಲಿ ನಿಮಗಾಗಿ ಮುಳಕ ಮತ್ತು ಕಡಬು/ಇಡ್ಲಿ ಮಾಡುವುದು ಹೇಗೆ ? ಎಂಬುದು ಇಲ್ಲಿದೆ…
ಹಲಸಿನ ಹಣ್ಣಿನ ಮುಳಕ:
ಬೇಕಾಗುವ ಸಾಮಾಗ್ರಿಗಳು:
3 ಕಪ್ ಹಲಸಿನ ಹಣ್ಣಿನ ಕೊಚ್ಚಲು(ಕೊಚ್ಚಿದ ಹಣ್ಣು)
1 ಕಪ್ ಬೆಳ್ತಿಗೆ ಅಕ್ಕಿ
3 ಚಮಚ ತುರಿದ ತೆಂಗಿನ ಕಾಯಿ ತುರಿ
2 ಚಮಚ ಎಳ್ಳು
1/2 ಲೋಟ ಬೆಲ್ಲ
ಕಾಳು ಮೆಣಸಿನ ಪುಡಿ 1 ಚಮಚ
ಕರಿಯಲಿಕ್ಕೆ ಎಣ್ಣೆ
ಏಲಕ್ಕಿ 4
ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
ಮೊದಲು ಅಕ್ಕಿಯನ್ನು ಒಂದೆರಡು ಗಂಟೆಗಳ ವರೆಗೆ ನೀರಿನಲ್ಲಿ ನೆನೆಸಿಡಬೇಕು ಬಳಿಕ ನೆನೆಸಿದ ಅಕ್ಕಿಯನ್ನು ಬಸಿದು ಹಲಸಿನ ಹಣ್ಣಿನ ತೊಳೆಯ ಕೊಚ್ಚಲಿನೊಟ್ಟಿಗೆ ಅಕ್ಕಿ ಬೆರಸಿ ನೀರು ಮುಟ್ಟಿಸದೆ ನುಣ್ಣಗೆ ರುಬ್ಬಿರಿ, ತೆಗೆಯುವ ವೇಳೆ ತೆಂಗಿನ ತುರಿ, ಏಲಕ್ಕಿ ಹಾಕಿ 2 ಸುತ್ತು ರುಬ್ಬಿರಿ. ಒರಳಿನಿಂದ ತೆಗೆದ ಹಿಟ್ಟಿಗೆ ಎಳ್ಳು ,ಕಾಳು ಮೆಣಸಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು. ತದನಂತರ ಬಾಣಲೆಗೆ ಎಣ್ಣೆ ಹೊಯ್ದು ಒಲೆಯ ಮೇಲಿಟ್ಟು ಕಾದ ನಂತರ ಒದ್ದೆ ಕೈಯಿಂದ ಹಿಟ್ಟಿನ ಸಣ್ಣ-ಸಣ್ಣ ಉಂಡೆ ಮಾಡಿ ಎಣ್ಣೆಯಲ್ಲಿ ಬಿಡಿ ಒಂದು ಸಲಕ್ಕೆ 5ರಿಂದ 8 ಮುಳಕಗಳನ್ನು ಕರಿದು ತೆಗೆಯಿರಿ. ಬಿಸಿ ಬಿಸಿ ಹಲಸಿನ ಹಣ್ಣಿನ ಮುಳಕ ತಿನ್ನಲು ರೆಡಿ…
ಹಲಸಿನ ಹಣ್ಣಿನ ಕಡಬು/ಇಡ್ಲಿ:
ಬೇಕಾಗುವ ಸಾಮಗ್ರಿಗಳು:
6 ಕಪ್ ಹಲಸಿನ ಹಣ್ಣಿನ ಕೊಚ್ಚಲು
1 ಕಪ್ ಬೆಳ್ತಿಗೆ ಅಕ್ಕಿ
1/2 ತೆಂಗಿನ ಕಾಯಿ ತುರಿ
1/2 ಕಪ್ ಬೆಲ್ಲ
ಏಲಕ್ಕಿ ಪುಡಿ 1/2 ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
ಅಕ್ಕಿಯನ್ನು ಒಂದೆರಡು ಗಂಟೆಗಳ ವರೆಗೆ ನೀರಿನಲ್ಲಿ ನೆನೆಸಿಡಬೇಕು ಬಳಿಕ ನೆನೆಸಿದ ಅಕ್ಕಿಯನ್ನು ಬಸಿದು ಅದರೊಟ್ಟಿಗೆ ಹಲಸಿನ ಹಣ್ಣಿನ ಕೊಚ್ಚಲು ಮತ್ತು ತೆಂಗಿನ ಕಾಯಿ ತುರಿಯನ್ನು ಹಾಕಿ ನೀರು ಮುಟ್ಟಿಸದೆ, ಸ್ವಲ್ಪ ತರಿತರಿಯಾಗಿ ರುಬ್ಬಿರಿ ತೆಗೆಯುವ ವೇಳೆ ರುಚಿಗೆ ತಕ್ಕಷ್ಟು ಉಪ್ಪು ,ಬೆಲ್ಲ ಮತ್ತು ಏಲಕ್ಕಿ ಪುಡಿಯನ್ನು ಹಾಕಿ ಎರಡು ಸುತ್ತು ರುಬ್ಬಿರಿ.
ಕಡುಬಿನ ಹಿಟ್ಟನ್ನು ಇಡ್ಲಿಯಂತೆ ಮಾಡಿಯೂ ಬೇಯಿಸಬಹುದು ಇಲ್ಲವೇ ಬಾಳೆ ಎಲೆ ,ಉಪ್ಪಿಗೆ ಮರದ ಎಲೆ(ಉಪ್ಪಳಿಗೆ ಎಲೆ) ಅಥವಾ ಸಾಗುವಾನಿ ಎಲೆಯಲ್ಲಿ ಇಟ್ಟು ಬೇಯಿಸಬಹದು. ಇಡ್ಲಿಯಂತೆ ಮಾಡಿ ಬೇಯಿಸುವುದಾದರೆ ಸುಮಾರು ಅರ್ಧ ಗಂಟೆ ಬೇಯಿಸಬೇಕು. ಬಾಳೆ ಎಲೆ /ಉಪ್ಪಿಗೆ ಮರದ ಎಲೆ(ಉಪ್ಪಳಿಗೆ ಎಲೆ) /ಸಾಗುವಾನಿ ಎಲೆಯಲ್ಲಿ ಮಾಡಿದರೆ ಒಂದು ತಾಸು ಬೇಯಿಸಬೇಕು.
– ಶ್ರೀರಾಮ್ ನಾಯಕ್