ಲಾಕ್‌ಡೌನ್‌ನಲ್ಲಿ ಸಾಕಷ್ಟು ಕಿರುಚಿತ್ರ, ಆಲ್ಬಂಗಳು ಬಂದಿವೆ. ಈಗ ಕನ್ನಡ ಚಿತ್ರರಂಗದ ಹಿರಿಯ ಸಂಗೀತ ನಿರ್ದೇಶಕ ವಿ.ಮನೋಹರ್ ಲಾಕ್‌ಡೌನ್‌ನಲ್ಲಿ ಒಂದು ಸಿನಿಮಾವನ್ನೇ ಮಾಡಿ ಮುಗಿಸಿದ್ದಾರೆ. ಅದು ಕೇವಲ 45 ನಿಮಿಷದ ಸಿನಿಮಾ ಎಂಬುದು ವಿಶೇಷ. ಈಗಾಗಲೇ ಯೂಟ್ಯೂಬ್ನಲ್ಲಿ ಆ ಚಿತ್ರ ಬಿಡುಗಡೆಯಾಗಿದೆ. ಇದೊಂದು ಸಂಗೀತಮಯ ಚಿತ್ರವಾಗಿದ್ದು, ಇದರಲ್ಲಿ 20 ಹಾಡುಗಳಿವೆ. ಹಾಡಿಂದ ಪ್ರಾರಂಭವಾಗಿ ಹಾಡಲ್ಲಿ ಮುಗಿಯುತ್ತದೆ.
ವಿ.ಮನೋಹರ್ ಅವರೇ ಹಾಡು ಬರೆದು ರಾಗ ಸಂಯೋಜನೆ ಮಾಡಿ, ಅದಕ್ಕೆ ಸಂಗೀತ ಜೋಡಿಸಲು ಅವರ ಗೆಳೆಯರಿಗೆ ನೀಡಿದ್ದಾರೆ. ಹಾಡುಗಳಿಗೆ 9 ಮಂದಿ ಪ್ರೋಗ್ರಾಮಿಂಗ್ ಮಾಡಿದ್ದಾರೆ. ಎಲ್ಲಾ ಓಕೆ, ಈ ಸಿನಿಮಾದ ಕಥೆ ಏನು ಎಂದು ನೀವು ಕೇಳಬಹುದು. ವಿ.ಮನೋಹರ್ ಹೇಳುವಂತೆ, ಲಾಕ್‌ಡೌನ್ ಸಮಯದಲ್ಲಿ ಇಂದ್ರಿಯಗಳು, ಹೊಟ್ಟೆಯ ಅವಯವಗಳು ತಮ್ಮ-ತಮ್ಮ ಕಷ್ಟ-ಸುಖವನ್ನು ಹೇಳಿಕೊಳ್ಳುತ್ತವೆ.
ಪ್ರತಿ ಅಂಗಾಂಗ ಇಲ್ಲಿ ಮನುಷ್ಯ ರೂಪದಲ್ಲಿ ಅಭಿನಯಿಸುತ್ತವೆ. ಉದಾಹರಣೆಗೆ ಎರಡು ಕಣ್ಣುಗಳ ಪಾತ್ರ ಇಬ್ಬರು ಹುಡುಗಿಯರು ಮಾಡಿದ್ದಾರೆ. ಎರಡು ಕಿವಿಗಳ ಪಾತ್ರ ಕೂಡ ಇನ್ನಿಬ್ಬರು ಹುಡುಗಿಯರು ಮಾಡಿದ್ದಾರೆ. ನಾಲಿಗೆ ಪಾತ್ರ ಶುಭರಕ್ಷಾ ಮಾಡಿದ್ದಾರೆ. ಮೂಗು ಪಾತ್ರ ಮೂಗು ಸುರೇಶ್, ಹಲ್ಲುಗಳ ಆಗಿ ಮೈಸೂರು ರಮಾನಂದ ಮತ್ತು ರಂಗನಾಥ್ ಮಾಡಿದ್ದಾರೆ ಎಂದು ವಿವರ ಕೊಡುತ್ತಾರೆ.
ಮುಂದುವರೆದ ಮಾತನಾಡುವ ಅವರು, ಈ ಇಂದ್ರಿಯಗಳ ಮತ್ತು ಹೊಟ್ಟೆ ಒಳಗಿನ ಅವಯವಗಳ ಮೀಟಿಂಗ್ ಅನ್ನು ಕೋವಿಡ್ 19 ನೋಡುತ್ತಾನೆ. ಕೋವಿಡ್ 19 ಪಾತ್ರ ಮಿಮಿಕ್ರಿ ದಯಾನಂದ್ ಮಾಡಿದ್ದಾರೆ. ಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್ ಮೆದುಳಿನ ಪಾತ್ರ ಮಾಡಿದ್ದಾರೆ. ಚಿತ್ರದಲ್ಲಿ 23 ಕಲಾವಿದರು ಇದರಲ್ಲಿ ಪಾತ್ರ ಮಾಡಿದ್ದಾರೆ. 14 ಮಂದಿ ಗಾಯಕ-ಗಾಯಕಿಯರು ಒಂಬತ್ತು ಮಂದಿ ಸಂಗೀತಗಾರರು ಇದಕ್ಕೆ ದುಡಿದಿದ್ದಾರೆ.