Advertisement

ಸೊರಗಿದ್ದ ಮಣ್ಣಪಳ್ಳಕ್ಕೆ ಪುನಃಶ್ಚೇತನ ಭಾಗ್ಯ : ಬೋಟಿಂಗ್‌, ಫ‌ುಡ್‌ಕೋರ್ಟ್‌ಗೆ ಯೋಜನೆ

11:34 PM Jan 07, 2023 | Team Udayavani |

ಮಣಿಪಾಲ: ನಗರ ವ್ಯಾಪ್ತಿ ಜನರಿಗೆ ಸುಂದರ ವಿಹಾರ ತಾಣವಾಗಿರುವ ಮಣ್ಣಪಳ್ಳ ಕೆರೆ ಹಲವು ವರ್ಷಗಳಿಂದ ಸೂಕ್ತ ನಿರ್ವಹಣೆ ಇಲ್ಲದೆ ದುಃಸ್ಥಿತಿಯಲ್ಲಿದ್ದು, ಹಲವು ವರ್ಷಗಳ ಬಳಿಕ ಕೊನೆಗೂ ಮಣ್ಣಪಳ್ಳವನ್ನು ಅಭಿವೃದ್ಧಿಗೊಳಿಸಲು ಜಿಲ್ಲಾಡಳಿತ ಮುಂದಾಗಿದೆ. ಟೆಂಡರ್‌ ಪ್ರಕ್ರಿಯೆ ಆರಂಭವಾಗಿದ್ದು, ಶೀಘ್ರದಲ್ಲೇ ಮಣ್ಣಪಳ್ಳ ಪರಿಸರ ವ್ಯವಸ್ಥಿತ ಸ್ವರೂಪ ಪಡೆಯಲಿದೆ.

Advertisement

ಕೆರೆ ಪರಿಸರದಲ್ಲಿ ಅಗತ್ಯ ಮೂಲ ಸೌಕರ್ಯವನ್ನು ಕಲ್ಪಿಸಿ, ಸುರಕ್ಷೆ ಮತ್ತು ಸ್ವತ್ಛತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ಪ್ರಾಕೃತಿಕವಾಗಿ ನಿರ್ಮಾಣಗೊಂಡ ದೊಡ್ಡ ಕೆರೆ ಯನ್ನು ಈ ಹಿಂದೆ ನಗರಾಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿ ಪಡಿಸಿತ್ತು. ಕೆರೆಯಲ್ಲಿ ವರ್ಷಪೂರ್ತಿ ಇರುವ ನೀರು ಕಣ್ಮನ ಸೆಳೆಯುತ್ತದೆ. ಮಣಿಪಾಲ, ಉಡುಪಿ ಸುತ್ತಮುತ್ತಲಿನ ಜನಕ್ಕೆ ಇಲ್ಲಿನ ವಾಯು ವಿಹಾರ ಅಚ್ಚುಮೆಚ್ಚು. ಈ ಹಿಂದೆ ಇಲ್ಲಿ ವಾಕಿಂಗ್‌ ಟ್ರ್ಯಾಕ್‌ ಸಹಿತ ಬೋಟಿಂಗ್‌ ವ್ಯವಸ್ಥೆ ರೂಪಿಸಿ ಅಭಿವೃದ್ಧಿಪಡಿಸಲಾಗಿತ್ತು.

ಕೋವಿಡ್‌ ದಿನಗಳ ಅನಂತರ ಮಣ್ಣಪಳ್ಳ ಸಂಪೂರ್ಣ ನಿರ್ವಹಣೆಯಿಂದ ವಂಚಿತವಾಗಿತ್ತು. ರಾತ್ರಿ ಅಪರಿಚಿತರಿಂದ ಅಕ್ರಮ ಕೂಟ, ಹೊರಗಿನಿಂದ ತ್ಯಾಜ್ಯ ತಂದು ಇಲ್ಲಿ ಸುರಿಯುವುದು, ಅಲ್ಲಲ್ಲಿ ತ್ಯಾಜ್ಯ ಕೊಂಪೆಯಿಂದ ಸೃಷ್ಟಿಯಾಗಿ ಸರಿಯಾಗಿ ನಿರ್ವಹಣೆ ಇಲ್ಲದೆ ಮಣ್ಣಪಳ್ಳ ಸೊರಗಿತ್ತು. ಈ ಬಗ್ಗೆ ಉದಯವಾಣಿ “ಸುದಿನ’ ಸರಣಿ ವರದಿ ಮೂಲಕ ಮಣ್ಣಪಳ್ಳ
ದುಃಸ್ಥಿತಿಯನ್ನು ಪ್ರಕಟಿಸಿತ್ತು.

ಮಣ್ಣಪಳ್ಳದಲ್ಲಿ ಏನೇನು ಚಟುವಟಿಕೆ, ಅಭಿವೃದ್ಧಿ?
ಮುಂದಿನ ದಿನಗಳಲ್ಲಿ ಬೋಟಿಂಗ್‌ ವ್ಯವಸ್ಥೆ ಮರು ಆರಂಭಿಸಲಾಗುತ್ತದೆ. ಒಂದು ಮುಖ್ಯ ರೆಸ್ಟೋರೆಂಟ್‌, ಫ‌ುಡ್‌ಕೋರ್ಟ್‌ ಮಾದರಿಯ ತಿಂಡಿ, ತಿನಿಸು, ಪಾನಿಯಗಳನ್ನು ಹೊಂದಿರುವ ಆಹಾರ ಮಳಿಗೆ. ಶೌಚಗೃಹ ದುರಸ್ತಿಗೊಳಿಸಲಾಗುತ್ತದೆ. ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿ ಸ ಲಾ ಗು ವುದು. ಸುರಕ್ಷತೆ ದೃಷ್ಟಿಯಿಂದ ಕೆರೆಯ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಕೆ, ದೀಪಗಳ ವ್ಯವಸ್ಥೆ, ಎರಡು ಪ್ರವೇಶದ್ವಾರಗಳನ್ನು ಮಾತ್ರ ಇರಿಸಿ, ಕಾವಲು ಸಿಬಂದಿ ನೇಮಕ ಮಾಡಲಾಗುತ್ತದೆ.

ಕೆರೆ ಕಲುಷಿತವಾಗುವುದನ್ನು ತಡೆಗಟ್ಟಿರಿ
ಮಣಿಪಾಲದ ಕೊಳಚೆ ನೀರು ಮಳೆ ನೀರು ಸಾಗುವ ತೋಡಿನ ಮೂಲಕ ಮಣ್ಣಪಳ್ಳ ಒಡಲು ಸೇರುತ್ತಿರುವುದು ಆತಂಕಕಾರಿಯಾಗಿದೆ. ಮಣ್ಣಪಳ್ಳಕ್ಕೆ ಸಂಪರ್ಕಿಸುವ ಮಳೆ ನೀರು ಕಾಲುವೆ ಯಲ್ಲಿ ಅಪಾರ ಪ್ರಮಾಣದಲ್ಲಿ ತ್ಯಾಜ್ಯ ನೀರು ಕೆರೆಗೆ ಸೇರುತ್ತಿದೆ. ಜತೆಗೆ ಪ್ಲಾಸ್ಟಿಕ್‌ ಬಾಟಲಿ, ತಿಂಡಿ ಕವರ್‌ಗಳು ನೀರಿಗೆ ಸೇರುತ್ತಿರುವುದು ಕಳವಳಕಾರಿಯಾಗಿದೆ.
ಕೆರೆಯನ್ನೇ ನಂಬಿದ ಜಲಚರಗಳಿಗೆ ಕಂಟಕವಾಗುತ್ತಿದೆ. ಇಲ್ಲಿಗೆ ವಿದೇಶಗಳಿಂದ ವಿವಿಧ ಜಾತಿಯ ಪಕ್ಷಿಗಳು ವಲಸೆ ಬರುತ್ತವೆ. ತ್ಯಾಜ್ಯ ನೀರು, ಪ್ಲಾಸ್ಟಿಕ್‌ ತ್ಯಾಜ್ಯದಿಂದ ಅವುಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀಳಲಿದೆ.

Advertisement

ಟೆಂಡರ್‌ ಪ್ರಕ್ರಿಯೆ
ಮಣ್ಣಪಳ್ಳ ಅಭಿವೃದ್ಧಿಗಾಗಿ ಯೋಜನೆ ರೂಪಿಸಿ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ. ಹಂತಹಂತವಾಗಿ ಮಣ್ಣಪಳ್ಳ ಅಭಿವೃದ್ಧಿಗೊಳಿಸುವ ಜತೆಗೆ ಬೋಟಿಂಗ್‌, ಫ‌ುಡ್‌ಕೋರ್ಟ್‌ ಸಹಿತ ವಿವಿಧ ಚಟುವಟಿಕೆಗಳನ್ನು ಆರಂಭಿಸಲಾಗುವುದು. ಟೆಂಡರ್‌ ಪಡೆದವರು ಸೂಕ್ತ ರೀತಿಯಲ್ಲಿ ನಿರ್ವಹಣೆ, ಮೂಲ ಸೌಕರ್ಯವನ್ನು ಕಲ್ಪಿಸಲುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ.
-ಕೂರ್ಮಾ ರಾವ್‌ ಎಂ., ಜಿಲ್ಲಾಧಿಕಾರಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next