ಹೊಸದಿಲ್ಲಿ: ಈ ವರ್ಷದ ಗಣೇಶೋತ್ಸವಕ್ಕೆ ಪರಿಸರ ಸ್ನೇಹಿ ವಸ್ತುಗಳನ್ನೇ ಬಳಕೆ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ. ಜುಲೈ ತಿಂಗಳ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ರವಿವಾರ ಮಾತನಾಡಿದ ಅವರು, ಪ್ರಕೃತಿಗೆ ವಿರುದ್ಧವಾಗಿ ನಡೆದುಕೊಳ್ಳುವುದೇ ಮಾನವರ ಸಹಜಗುಣ ಎನ್ನುವಂತಾಗಿದೆ. ಮುಂದಿನ ಜನಾಂಗಕ್ಕಾಗಿ ಪ್ರಕೃತಿಯನ್ನು ಕಾಪಾಡುವುದು ಅಗತ್ಯ. ದೇಶದ ಹಲವು ಭಾಗಗಳಲ್ಲಿ ಧಾರಾಕಾರ ಮಳೆಯಾಗಿದೆ. ಇನ್ನು ಕೆಲವು ಭಾಗಗಳಲ್ಲಿ ಮಳೆಯೇ ಆಗಿಲ್ಲ. ಅದಕ್ಕೆ ಮಳೆಯನ್ನೇಕೆ ಶಪಿಸಬೇಕು? ಪ್ರಕೃತಿಯ ಜತೆಗೆ ನಾವು ಸಂಘರ್ಷಕ್ಕಿಳಿದಾಗ, ಪ್ರಕೃತಿ ಮಾತೆಯ ಕೋಪವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಈ ವರ್ಷದ ಗಣೇಶೋತ್ಸವದ ಸಂದರ್ಭದಲ್ಲಿ ಪರಿಸರ ಸ್ನೇಹಿ ವಸ್ತುಗಳನ್ನು ಬಳಕೆ ಮಾಡಿ. ಗಣೇಶನ ಮೂರ್ತಿಯಿಂದ ಹಿಡಿದು ಎಲ್ಲಾ ಅಲಂಕಾರಿಕ ವಸ್ತುಗಳೂ ಪ್ರಕೃತಿಗೆ ಪೂರಕವಾಗಿರಬೇಕು ಎಂದು ಹೇಳಿದ್ದಾರೆ. ಅದಕ್ಕಾಗಿಯೇ ನಗರಗಳಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ನೀಡುವಂತಾದರೆ ಸಂತೋಷವಾಗುತ್ತದೆ ಎಂದು ಸಲಹೆ ನೀಡಿದ್ದಾರೆ.
ಉತ್ತಮ ಆಡಳಿತ ಹಕ್ಕು: ಉತ್ತಮ ಆಡಳಿತವನ್ನು ಬಯಸುವುದು ಎಲ್ಲರ ಜನ್ಮಸಿದ್ಧ ಹಕ್ಕು ಎಂದು ಅವರು ಹೇಳಿದ್ದಾರೆ. ದೇಶದ ಪ್ರತಿಯೊಬ್ಬನೂ ಉತ್ತಮ ಆಡಳಿತವನ್ನು ಪಡೆದುಕೊಳ್ಳುವ ಹಕ್ಕು ಹೊಂದಿದ್ದಾರೆ. ಈ ಮೂಲಕ ಧನಾತ್ಮಕ ಅಭಿವೃದ್ಧಿಯ ಫಲಿತಾಂಶಗಳನ್ನು ಹೊಂದುವ ಅಧಿಕಾರ ಹೊಂದಿದ್ದಾರೆ ಎಂದು ಹೇಳಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕ್ ಅವರ ‘ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು’ ಉದ್ಘೋಷವನ್ನು ಬಳಸಿ ಪ್ರಧಾನಿ ಮೋದಿ, ‘ಉತ್ತಮ ಆಡಳಿತ ನಮ್ಮ ಜನ್ಮಸಿದ್ಧ ಹಕ್ಕು’ ಎಂದು ಹೇಳಿದ್ದಾರೆ.
ಸಾಧಕರಿಗೆ ಪ್ರಶಂಸೆ: ಪುಸ್ತಕಗಳಿಗೆ ಮತ್ತು ಅಧ್ಯಯನಕ್ಕೆ ಪರ್ಯಾಯವಿಲ್ಲ. ಶಾಂತಚಿತ್ತರಾಗಿ, ಆಂತರಿಕವಾಗಿ ಸಂತೋಷವಾಗಿರಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ. ಜೋಧ್ ಪುರದ ಚಿಂದಿ ಆಯುವವನ ಪುತ್ರ ಆಶಾರಾಮ್ ಚೌಧರಿ ಅಖೀಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಸ್) ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಎಂ.ಬಿ.ಬಿ.ಎಸ್.ಗೆ ಪ್ರವೇಶ ಪಡೆದುದಕ್ಕೆ ಪ್ರಧಾನಿ ಮೋದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.