Advertisement

ಜಿ20 ಅಧ್ಯಕ್ಷತೆ ಜಾಗತಿಕ ಒಳಿತಿಗಾಗಿ ಬಳಕೆಯಾಗಲಿ: ಪ್ರಧಾನಿ ಮೋದಿ

08:17 PM Nov 27, 2022 | Team Udayavani |

ನವದೆಹಲಿ: ಶಾಂತಿ, ಏಕತೆ, ಪರಿಸರ ಮತ್ತು ಸುಸ್ಥಿರ ಅಭಿವೃದ್ಧಿಯ ಸವಾಲುಗಳಿಗೆ ಭಾರತದ ಬಳಿ ಪರಿಹಾರವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Advertisement

ಪ್ರಬಲ ಜಿ20 ಅಧ್ಯಕ್ಷತೆಯನ್ನು ವಹಿಸಿಕೊಳ್ಳಲು ಭಾರತವು ಸಜ್ಜಾಗುತ್ತಿರುವಂತೆಯೇ, ಭಾನುವಾರ ನಡೆದ ಮನ್‌ ಕಿ ಬಾತ್‌ ರೇಡಿಯೋ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, ತನ್ನ ಅಧ್ಯಕ್ಷತೆಯ ಅವಧಿಯಲ್ಲಿ ದೇಶವು ಜಾಗತಿಕ ಒಳಿತಿನತ್ತ ಗಮನ ಹರಿಸಬೇಕು ಎಂದು ಕರೆ ನೀಡಿದರು.

ಡಿ.1ರಂದು ಭಾರತವು ಇಂಡೋನೇಷ್ಯಾದಿಂದ ಜಿ20 ಅಧ್ಯಕ್ಷತೆಯನ್ನು ಅಧಿಕೃತವಾಗಿ ವಹಿಸಿಕೊಳ್ಳಲಿದೆ. ಇದು ಭಾರತಕ್ಕೆ ಸಿಕ್ಕಿರುವ ಅತಿದೊಡ್ಡ ಅವಕಾಶ ಎಂದು ಬಣ್ಣಿಸಿರುವ ಪ್ರಧಾನಿ ಮೋದಿ, ಜಿ20ಗೆ ಭಾರತವು “ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಎಂಬ ಥೀಮ್‌ ನೀಡಿದೆ. ಇದು “ವಸುದೈವ ಕುಟುಂಬಕಂ’ಗೆ ಭಾರತದ ಬದ್ಧತೆಯನ್ನು ತೋರಿಸಿದೆ ಎಂದೂ ಮೋದಿ ಹೇಳಿದರು.

ನೇಕಾರನ ಗಿಫ್ಟ್:
ತೆಲಂಗಾಣದ ನೇಕಾರ ಹರಿಪ್ರಸಾದ್‌ ಎಂಬವರು ವಿಶಿಷ್ಟವಾದ ಉಡುಗೊರೆಯಂದನ್ನು ನಮಗೆ ಕಳುಹಿಸಿಕೊಟ್ಟಿದ್ದಾರೆ. ತಮ್ಮ ಕೈಯ್ಯಲ್ಲೇ ನೇಯ್ದಿರುವಂಥ “ಜಿ20 ಲೋಗೋ’ವನ್ನು ಅವರು ಕಳುಹಿಸಿದ್ದು, ಅದನ್ನು ನೋಡಿ ನನಗೆ ಅಚ್ಚರಿಯಾಯಿತು. ಎಲ್ಲೋ ದೂರದಲ್ಲಿ ಕುಳಿತಿರುವ ವ್ಯಕ್ತಿಯೂ ಜಿ20ಯಂಥ ಶೃಂಗದೊಂದಿಗೆ ಕನೆಕ್ಟ್ ಆಗಿರುವುದು ಅತ್ಯಂತ ಖುಷಿಯ ವಿಚಾರ ಎಂದೂ ಮೋದಿ ಹೇಳಿದರು.

ಇದೇ ವೇಳೆ, ಭಾರತವು ಡ್ರೋನ್‌ ತಂತ್ರಜ್ಞಾನದಲ್ಲಿ ಕಾಣುತ್ತಿರುವ ಅಭಿವೃದ್ಧಿ, ದೇಶದ ಸಂಗೀತ ಉಪಕರಣಗಳ ರಫ್ತು ಹೆಚ್ಚಳ, ಭಾರತದ ಭಜನೆ, ಕೀರ್ತನೆ, ಸಂಗೀತದ ಬಗ್ಗೆ ವಿದೇಶದಲ್ಲಿ ಹೆಚ್ಚುತ್ತಿರುವ ಆಸಕ್ತಿ ಸೇರಿದಂತೆ ಹಲವು ವಿಚಾರಗಳ ಕುರಿತು ಮೋದಿ ಮಾತನಾಡಿದರು.

Advertisement

ಹೊಸ ಯುಗ ಆರಂಭಿಸಿದ ವಿಕ್ರಂ-ಎಸ್‌
“ವಿಕ್ರಂ-ಎಸ್‌ ರಾಕೆಟ್‌ ಉಡಾವಣೆಯು ಭಾರತದ ಖಾಸಗಿ ಬಾಹ್ಯಾಕಾಶ ವಲಯದಲ್ಲಿ ಹೊಸ ಯುಗವನ್ನು ಆರಂಭಿಸಿದೆ’ ಎಂದೂ ಪ್ರಧಾನಿ ಮೋದಿ ಬಣ್ಣಿಸಿದ್ದಾರೆ. ನ.18ರಂದು ಇಡೀ ದೇಶವೇ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದ್ದನ್ನು ನೋಡಿದರು.

ಖಾಸಗಿ ಕಂಪನಿ ನಿರ್ಮಿಸಿದ ರಾಕೆಟ್‌ ಅನ್ನು ಮೊದಲ ಬಾರಿಗೆ ಭಾರತ ಉಡಾವಣೆ ಮಾಡಿತು. ಅದು ಶ್ರೀಹರಿಕೋಟದಿಂದ ನಭಕ್ಕೆ ಚಿಮ್ಮುತ್ತಿದ್ದಂತೆ ಭಾರತೀಯರೆಲ್ಲರೂ ಹೆಮ್ಮೆಪಟ್ಟರು. ಈ ರಾಕೆಟ್‌ನ ಕೆಲವು ಪ್ರಮುಖ ಭಾಗಗಳನ್ನು 3ಡಿ ಪ್ರಿಂಟಿಂಗ್‌ ಮೂಲಕ ಸಿದ್ಧಪಡಿಸಲಾಗಿದೆ. ವಿಕ್ರಂ-ಎಸ್‌ ಯೋಜನೆಗೆ ಇಟ್ಟ “ಪ್ರಾರಂಭ್‌’ ಎಂಬ ಹೆಸರು ಕೂಡ ಅದಕ್ಕೆ ಸರಿಯಾಗಿ ಹೊಂದಾಣಿಕೆಯಾಗುತ್ತದೆ ಎಂದೂ ಮೋದಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next