Advertisement

ತೀರ್ಥಹಳ್ಳಿ: ಕಾರ್ಮಿಕರಿಗೆ ಕೆಲಸಕ್ಕೆ ಅವಕಾಶ ಮಾಡಿಕೊಡದಿದ್ದಲ್ಲಿ ಉಗ್ರ ಹೋರಾಟ

11:31 AM Nov 03, 2022 | sudhir |

ತೀರ್ಥಹಳ್ಳಿ: ಮೇಲಿನ ಕುರುವಳ್ಳಿ ಸರ್ವೆ ನಂ75 ರಲ್ಲಿ ಕಾರ್ಮಿಕರು ಸಲ್ಲಿಸಿರುವ ಟೆಂಡರ್ ಅರ್ಜಿ ವಿಲೇವಾರಿ ಮಾಡಿ ಕಾನೂನುಬದ್ಧವಾಗಿ ಕಾರ್ಮಿಕರಿಗೆ ಕೆಲಸಕ್ಕೆ ಅವಕಾಶ ಮಾಡಿಕೊಡದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಮೇಲಿನ ಕುರುವಳ್ಳಿ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಪಿ ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.

Advertisement

ಈ ಕುರಿತು ಮಾತನಾಡಿದ ಅವರು, ಮೇಲಿನ ಕುರುವಳ್ಳಿ ಬಂಡೆ ಕಾರ್ಮಿಕರ ಹೆಸರು ಹೇಳಿಕೊಂಡು ಕೆಲವರು ಬರೀ ರಾಜಕೀಯ ಲಾಭ ಮಾಡಿಕೊಳ್ಳುತ್ತಿದ್ದಾರೆ ಹೊರತು ಕಾರ್ಮಿಕರಿಗೆ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯಗಳು ಇಂದಿಗೂ ಸಿಗುತ್ತಿಲ್ಲ, ಆದರೆ ಇತ್ತೀಚೆಗೆ ಕಾರ್ಮಿಕರೇ ಮಾಲೀಕರಾಗಿರುವ ಅವಕಾಶ ಒದಗಿ ಬಂದು ಈ ರಾಜಕೀಯ ಪಕ್ಷದ ಹಿಂಬಾಲಕರುಗಳು ಲಾಬಿಗಾಗಿ ಆಳುವ ನಾಯಕರುಗಳೇ ತಡೆ ಒಡ್ಡಿರುವುದು ವಿಪರ್ಯಾಸ.

ಗ್ರಾಮದ ಕಲ್ಲು ಕ್ವಾರಿಯಲ್ಲಿ ಕಲ್ಲು ಒಡೆಯುವ,ಕಲ್ಲು ಹೊರುವ ಹಮಾಲಿಗಳಿಗೆ, ಜಲ್ಲಿ ಒಡೆಯುವ, ಬಂಡೆ ಕ್ಲೀನಿಂಗ್ ಮಾಡುವ ಬಡ ಮಹಿಳೆಯರಿಗೆ, ಜೀವನ ಭದ್ರತೆ ಇಲ್ಲ ಈ ಅಸಂಘಟಿತ ವಲಯ ಇಂದಿಗೂ ಸಂಕಷ್ಟದಲ್ಲಿವೆ. ಒಂದು ಹೊತ್ತಿನ ಊಟಕ್ಕೂ ಪರದಾಡಬೇಕಾದ ಪರಿಸ್ಥಿತಿ, ಬದುಕು ಮೂರಾಬಟ್ಟೆಯಾಗಿದೆ.

ಇತ್ತೀಚೆಗೆ ರಾಜ್ಯ ಸರ್ಕಾರದ ಭೂ ಮತ್ತು ಗಣಿ ವಿಜ್ಞಾನ ಇಲಾಖೆ ವತಿಯಿಂದ ಮೇಲಿನ ಕುರುವಳ್ಳಿಯ ಸರ್ವೆ ನಂಬರ್ 75ರ 6 ಎಕರೆ ಗಣಿ ಪ್ರದೇಶವನ್ನು 3ಬ್ಲಾಕ್ ಗಳಾಗಿ ಮಾಡಿ ಪಾರಂಪಾರಿಕವಾಗಿ, ಸಾಂಪ್ರದಾಯಿಕವಾಗಿ ಕಲ್ಲು ಒಡೆದು ಕೆಲಸಮಾಡುವ ಕಾರ್ಮಿಕರಿಗಾಗಿಯೇ ಮೀಸಲಿಟ್ಟು,ತಹಶೀಲ್ದಾರ್ ಅವರಿಂದ ಕಾರ್ಮಿಕ ಎಂದು ದೃಢೀಕರಿಸಿದ ಪ್ರಮಾಣ ಪತ್ರ ಪಡೆದು,ಶಿವಮೊಗ್ಗ ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಹಿರಿಯ ಅಧಿಕಾರಿ ಅವರ ಹೆಸರಿಗೆ ಒಂದು ಸಾವಿರ ಮುಖಬೆಲೆಯ ಡಿಡಿಯನ್ನು ಪಡೆದು,ಬಾಕ್ಸ್ ಟೆಂಡರ್ ಗೆ ಕಾರ್ಮಿಕರಿಂದ ಅರ್ಜಿ ಪಡೆದಿದ್ದು ಇಂದಿಗೆ ಸುಮಾರು 8 ತಿಂಗಳುಗಳು ಕಳೆದಿದೆ.

ಇದನ್ನೂ ಓದಿ : ಆಳಂದ ಪಟ್ಟಣದ ಫೋಟೋ ಸ್ಟುಡಿಯೊದಲ್ಲಿ ಕಳ್ಳತನ: 5 ಲಕ್ಷ ರೂ. ಬೆಲೆ ಬಾಳುವ ವಸ್ತು ಲೂಟಿ

Advertisement

ಶಿವಮೊಗ್ಗ ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅಧಿಕಾರಿಗಳು ಈವರೆಗೂ ಕಾರ್ಮಿಕರು ಸಲ್ಲಿಸಿರುವ ಅರ್ಜಿಯನ್ನು ವಿಲೇವಾರಿ ಮಾಡಿಸದೆ ಕಾರ್ಮಿಕರಿಗೆ ಈ ಬಂಡೆಯಲ್ಲಿ ನ್ಯಾಯಯುತವಾಗಿ ಕಾನೂನುಬದ್ಧವಾಗಿ ಕೆಲಸ ಮಾಡುವುದಕ್ಕೆ ಅವಕಾಶ ಕಲ್ಪಿಸಿಕೊಡದೆ,ಬಡ ಕಾರ್ಮಿಕರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸಕ್ಕೆ ಮುಂದಾಗಿರುವುದಲ್ಲದೆ, ಇಂದು ಕಾರ್ಮಿಕರು ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ಹೇಳಿದರು.

ಇದೇ ಕಲ್ಲು ಒಡೆಯುವ ವೃತ್ತಿಯನ್ನು ನಂಬಿ ಬದುಕುತ್ತಿರುವ ಎಲ್ಲ ರೀತಿಯ ಕಾರ್ಮಿಕ ಕುಟುಂಬಗಳು ಬೀದಿಗೆ ಬರುವಂತೆ ರಾಜಕೀಯ ಒತ್ತಡಕ್ಕೆ ಮಣಿದು ಲಾಬಿ, ಹಾಗೂ ದಂಧೆ ಮಾಡುವವರ ಜೊತೆ ಅಧಿಕಾರಿಗಳು ಶಾಮೀಲಾಗಿ ಕಾರ್ಮಿಕರಿಗೆ ಈ ಕಲ್ಲು ಕ್ವಾರೆಯನ್ನು ಕೈತಪ್ಪಿಸಲು ಸಂಚು ಮಾಡಿದ್ದಾರೆ, ಈ ಕೂಡಲೇ ಕಾನೂನಾತ್ಮಕವಾಗಿ ಬಡ ಕಾರ್ಮಿಕರು ಸಲ್ಲಿಸಿರುವ ಅರ್ಜಿಯನ್ನು ವಿಲೇವಾರಿ ಮಾಡಿ ಬಡ ಕಾರ್ಮಿಕರಿಗೆ ಸರ್ವೆ ನಂಬರ್ 75ರ ಕಲ್ಲುಕ್ವಾರೆ ಕಾನೂನುಬದ್ಧವಾಗಿ ಟೆಂಡರ್ ಕರೆದಿರುವ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾನೂನಾತ್ಮಕವಾಗಿ ಕಾರ್ಮಿಕರಿಗೆ ಕೆಲಸ ಮಾಡಲು ಅವಕಾಶ ಕಲ್ಪಿಸಿ ಕೊಡದೆ ಇದ್ದಲ್ಲಿ ಮೇಲಿನಕುರುವಳ್ಳಿ ಹಿತರಕ್ಷಣಾ ವೇದಿಕೆಯಿಂದ ಉಗ್ರ ಪ್ರತಿಭಟನೆ ಕೈಗೊಳ್ಳಲಾಗುವುದು ಎಂಬುದಾಗಿ ಅಧ್ಯಕ್ಷರಾದ ಪಿ. ಮಂಜುನಾಥ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next