ಮುಂಬಯಿ: ಮಾಲಿವುಡ್‌ನಲ್ಲಿ(Mollywood) ಈ ವರ್ಷ 100 ಕೋಟಿಗೂ ಹೆಚ್ಚು ಗಳಿಕೆ ಕಂಡು ʼಮಂಜುಮ್ಮೆಲ್ ಬಾಯ್ಸ್ʼ(Manjummel Boys) ಸಿನಿಮಾ ಮೋಡಿ ಮಾಡಿದೆ.
ಸಿನಿಮಾ ಹಿಟ್ ಆದ ಬಳಿಕ ನಿರ್ದೇಶಕ ಚಿದಂಬರಂ (Director Chidambaram) ಅವರಿಗೆ ಬೇಡಿಕೆ ಹೆಚ್ಚಾಗಿದೆ. ಸಿನಿಮಾದ ಬಗೆಗಿನ ಅವರ ಅಭಿರುಚಿ ನೋಡಿ ಬಾಲಿವುಡ್‌ನ ಖ್ಯಾತ ನಿರ್ಮಾಣ ಸಂಸ್ಥೆ ಅವರೊಂದಿಗೆ ಕೈಜೋಡಿಸಿದೆ.
ಬಾಲಿವುಡ್‌ನ ದೊಡ್ಡ ನಿರ್ಮಾಣ ಸಂಸ್ಥೆ ʼಫ್ಯಾಂಟಮ್ ಸ್ಟುಡಿಯೋಸ್ʼ (Phantom Studios) ನಡಿಯಲ್ಲಿ ಚಿದಂಬರಂ ತನ್ನ ಮೊದಲ ಹಿಂದಿ ಸಿನಿಮಾವನ್ನು ಮಾಡಲಿದ್ದಾರೆ. ಚಿದಂಬರಂ ಅವರನ್ನು ಫ್ಯಾಂಟಮ್ ಸ್ಟುಡಿಯೋಸ್ʼ ಆತ್ಮೀಯವಾಗಿ ಬರಮಾಡಿಕೊಂಡಿದೆ.
ಈ ಬಗ್ಗೆ ʼಫ್ಯಾಂಟಮ್ ಸ್ಟುಡಿಯೋಸ್ʼನ ಸಿಇಒ ಸೃಷ್ಟಿ ಬೆಹ್ಲ್ ಮಾತನಾಡಿ, “ಚಿದಂಬರಂ ಅವರನ್ನು ಫ್ಯಾಂಟಮ್ ಕುಟುಂಬಕ್ಕೆ ಸ್ವಾಗತಿಸಲು ನಾವು ಸಂತೋಷಪಡುತ್ತೇವೆ. ನಮ್ಮದು ಸೃಜನಾತ್ಮಕ ಆಧಾರಿತ ಕಂಪನಿಯಾಗಿದ್ದು, ಫ್ಯಾಂಟಮ್‌ನೊಂದಿಗೆ ಅತ್ಯುತ್ತಮ ಕೆಲಸಗಳನ್ನು ಮಾಡಲು ನಿರ್ದೇಶಕರಿಗೆ ಮುಕ್ತ ಅಧಿಕಾರವನ್ನು ನೀಡುತ್ತೇವೆ. ಈ ಹೊಸ ಜಗತ್ತಿನಲ್ಲಿ ಭಾಷೆ ಸಿನಿಮಾ ತಯಾರಕರಿಗೆ ನಿರ್ಬಂಧವನ್ನು ಹಾಕುವುದಿಲ್ಲ. ನಾವು ಹಿಂದಿ ಚಿತ್ರರಂಗಕ್ಕೆ ಭಾಷಾವಾರು ಗಡಿಗಳನ್ನು ಮೀರಿ ಹೊಸ ಹೊಸ ಪ್ರತಿಭೆಯನ್ನು ತರಲು ಉದ್ದೇಶಿದ್ದೇವೆ. ಇದಕ್ಕಾಗಿ ನಮ್ಮೊಂದಿಗೆ ಸಹಕರಿಸಲು ಚಿದಂಬರಂ ಆದರ್ಶ ವ್ಯಕ್ತಿಯಾಗಿದ್ದಾರೆ. ಚಿದಂಬರಂ ಅವರ ದೃಷ್ಟಿಕೋನ, ಕಥೆ ಹೇಳುವ ರೀತಿಗೆ ನಮ್ಮ ಫ್ಯಾಂಟನ್ ಸ್ಟುಡಿಯೋಸ್ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ” ಎಂದು ʼಬಾಲಿವುಡ್ ಹಂಗಾಮʼಕ್ಕೆ ತಿಳಿಸಿದ್ದಾರೆ.
ಹಿಂದಿ ಚಿತ್ರರಂಗಕ್ಕೆ ಕಾಲಿಡುತ್ತಿರುವ ಸಂತಸದ ಬಗ್ಗೆ ಮಾತನಾಡಿರುವ ನಿರ್ದೇಶಕ ಚಿದಂಬರಂ, “ಹಿಂದಿ ಚಿತ್ರರಂಗಕ್ಕೆ ಹೆಜ್ಜೆ ಇಡಲು ನಾನು ತುಂಬಾ ಉತ್ಸುಕನಾಗಿದ್ದೇನೆ. ʼಮಂಜುಮ್ಮೆಲ್ ಬಾಯ್ಸ್ʼ ಯಾವಾಗಲೂ ವಿಶೇಷವಾಗಿರುತ್ತದೆ. ನನ್ನ ಮೊದಲ ಹಿಂದಿ ಚಲನಚಿತ್ರಕ್ಕಾಗಿ ಫ್ಯಾಂಟಮ್ ಸ್ಟುಡಿಯೋಸ್‌ನೊಂದಿಗೆ ಕೈಜೋಡಿಸುತ್ತಿರುವುದಕ್ಕೆ ತುಂಬಾ ಉತ್ಸುಕನಾಗಿದ್ದೇನೆ” ಎಂದು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಚಿದಂಬರಂ ಅವರ ಮೊದಲ ಹಿಂದಿ ಸಿನಿಮಾದ ಹೆಚ್ಚಿನ ಮಾಹಿತಿ ಲಭಿಸಲಿದೆ.