Advertisement

ಮಂಜೇಶ್ವರ: ಪೊಲೀಸರಿಗೆ ಪಿಸ್ತೂಲು ತೋರಿಸಿ ಬೆದರಿಕೆ: ನಾಲ್ವರ ಬಂಧನ

07:13 PM Feb 23, 2023 | Team Udayavani |

ಮಂಜೇಶ್ವರ: ಚಾಲಕರಿಗೆ ಬಂದೂಕು ತೋರಿಸಿ ಬೆದರಿಸಿ ಲಾರಿಯನ್ನು ಅಪಹರಿಸಿದ ಗೂಂಡಾ ತಂಡದವರನ್ನು ಬಂಧಿಸಲು ಹೋದ ಪೊಲೀಸರ ಮೇಲೂ ಪಿಸ್ತೂಲು ತೋರಿಸಿ ಬೆದರಿಸಿದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಮೀಯಪದವಿನ ಪರಿಸರದ ಬೆಜ್ಜದಲ್ಲಿ ಗೂಂಡಾ ತಂಡ ಹಫ್ತಾ ವಸೂಲಿ ಮಾಡುವ ಹೆಸರಿನಲ್ಲಿ ಎರಡು ಲಾರಿ ಚಾಲಕರಿಗೆ ಪಿಸ್ತೂಲು ತೋರಿಸಿ ಬೆದರಿಸಿ ಅವರನ್ನು ಹೊರಕ್ಕೆ ಎಳೆದು ಲಾರಿಗಳನ್ನು ಅಪಹರಿಸಿದ್ದಾರೆ. ಆ ಬಗ್ಗೆ ಲಭಿಸಿದ ಮಾಹಿತಿ ಪ್ರಕಾರ ಮಂಜೇಶ್ವರ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಸಂತೋಷ್‌ ನೇತೃತ್ವದ ಪೊಲೀಸರು ತತ್‌ಕ್ಷಣ ಕಾರ್ಯನಿರತರಾಗಿ ಘಟನೆ ನಡೆದ ಸ್ಥಳಕ್ಕೆ ಧಾವಿಸಿ ಅಪಹರಿಸಿದ ಲಾರಿಯನ್ನು ಹಿಂಬಾಲಿಸಿದ್ದರು.

ಕುರುಡಪದವು ಕೊಮ್ಮಂಗಳಕ್ಕೆ ತಲುಪಿದಾಗ ಲಾರಿಯನ್ನು ತಡೆದಿದ್ದು, ಆ ವೇಳೆ ಅಲ್ಲಿಗೆ ಬಂದ ಆಲ್ಟೋ ಕಾರಿನಲ್ಲಿ ಅಪಹರಣಕಾರರು ಪರಾರಿಯಾಗಲೆತ್ನಿಸಿದ್ದಾರೆ. ಆಗ ಪೊಲೀಸರು ಅವರನ್ನು ಬಂಧಿಸಲು ಮುಂದಾಗಿದ್ದು, ಅವರು ಪೊಲೀಸರತ್ತ ಪಿಸ್ತೂಲು ತೋರಿಸಿ ಬೆದರಿಸಿ ಅಲ್ಲಿಂದ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಆದರೆ ಪೊಲೀಸರು ಅವರನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ. ಈ ತಂಡದಲ್ಲಿ ಏಳು ಮಂದಿ ಇರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಂಧಿತರಿಂದ ಒಂದು ಪಿಸ್ತೂಲು ಮತ್ತು 4 ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ತಂಡದ ನಾಯಕ ಪರಾರಿ
ಮಂಜೇಶ್ವರ ಕಡಂಬಾರು ಮೀಯಪದವಿನ ರಹೀಂ (25) ತಂಡದ ನಾಯಕನಾಗಿದ್ದು, ಆತ ತಪ್ಪಿಸಿಕೊಂಡಿದ್ದಾನೆ. ಮಹಾರಾಷ್ಟ್ರ ನಾಸಿಕ್‌ ಪಾಂಡ್ಯಾ ಜಲ್‌ಗಾವಿ ಶ್ರೀಕೃಷ್ಣ ನಗರದ ಬಳಿಯ ಮುಕುಂದ ನಗರದ ರಾಖೇಶ್‌ ಕಿಶೋರ್‌ ಭವೀಷ್ಯರ್‌ (30), ಕುಳೂರು ಚಿಗುರುಪಾದೆಯ ಮೊಹಮ್ಮದ್‌ ಸರ್ಫಾನ್ (25), ಹೈದರಾಲಿ ಮತ್ತು ಉಪ್ಪಳ ರೈಲ್ವೇ ಗೇಟ್‌ ಬಳಿಯ ಕಳಾಯಿ ಹೌಸ್‌ನ ಸಯಾಫ್‌ (22)ನನ್ನು ಪೊಲೀಸರು ಬಂಧಿಸಿದ್ದಾರೆ. ಆಲ್ಟೋ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next