Advertisement
ಮನೀಶಾ ಹುಟ್ಟಿದ್ದು 1996ರಲ್ಲಿ ಪಾಕಿಸ್ಥಾನದ ಸಿಂಧ್ ಪ್ರಾಂತ್ಯದ ಜಕುಬಾಬಾದ್‌ನಲ್ಲಿ. ತಂದೆ ಅಂಗಡಿಯೊಂದನ್ನು ಇಟ್ಟುಕೊಂಡು ವ್ಯಾಪಾರಿಯಾಗಿದ್ದವರು. ತಂದೆ-ತಾಯಿ ಜತೆ ನಾಲ್ಕು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗನಿದ್ದ ಕುಟುಂಬವದು. ಎಲ್ಲ ಸುಸೂತ್ರವಾಗಿ ನಡೆಯುತ್ತಿದೆ ಎನ್ನುವಷ್ಟರಲ್ಲಿ, ಮನೀಶಾ 13 ವರ್ಷದವರಿದ್ದಾಗಲೇ ಅವರ ತಂದೆ ತೀರಿಕೊಂಡರು. ಅನಂತರ ಅವರ ಅಮ್ಮನೇ ಮಕ್ಕಳ ಬದುಕಿನ ಜವಾಬ್ದಾರಿ ತೆಗೆದುಕೊಂಡು ಬದುಕು ನಡೆಸಲಾರಂಭಿಸಿದರು.
Related Articles
Advertisement
ಕಳೆದ ವರ್ಷ ಸಿಂಧ್ ಪ್ರಾಂತ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆದ ಮನೀಶಾ ಅದರಲ್ಲಿ ಉತ್ತೀರ್ಣರಾದರು. ಪರೀಕ್ಷೆಯಲ್ಲಿ ಉತ್ತೀರ್ಣರಾದ ಕೇವಲ 156 ಮಂದಿಯಲ್ಲಿ ಮನೀಶಾ ಕೂಡ ಒಬ್ಬರು. ಅದರಲ್ಲೂ 16ನೇ ರ್‍ಯಾಂಕ್ ಪಡೆದುಕೊಳ್ಳುವ ಮೂಲಕ ಕುಟುಂಬಕ್ಕೆ ಹೆಮ್ಮೆ ತಂದರು. ಆದರೆ ಈ ಸಾಧನೆ ಅನೇಕರಿಗೆ ಪ್ರಶ್ನೆ ಹುಟ್ಟಿಸಿದ್ದಂತೂ ಸುಳ್ಳಲ್ಲ. “ಹೆಣ್ಣಾಗಿರುವ ನೀನು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತೀಯೇ? ಅದು ಸಾಧ್ಯವೇ?’ ಎಂದು ಅನೇಕರು ಪ್ರಶ್ನಿಸಿದರು. ಇನ್ನೂ ಅನೇಕರು, “ಇವಳು ಹೆಚ್ಚು ದಿನ ಅಲ್ಲಿ ಕೆಲಸ ಮಾಡುವುದಕ್ಕೆ ಸಾಧ್ಯವೇ ಇಲ್ಲ’ ಎಂದು ಭವಿಷ್ಯವನ್ನೂ ನುಡಿದುಬಿಟ್ಟರು. ಒಟ್ಟಿನಲ್ಲಿ ಮನೀಶಾರ ಸಾಧನೆಯನ್ನು ಧನಾತ್ಮಕವಾಗಿ ಸ್ವೀಕರಿಸಿದವರಿಗಿಂತ ಋಣಾತ್ಮಕವಾಗಿ ಸ್ವೀಕರಿಸಿದವರೇ ಹೆಚ್ಚು. ಆದರೂ ಅದನ್ಯಾವುದನ್ನೂ ಲೆಕ್ಕಿಸದ ಮನೀಶಾ ಪೊಲೀಸ್ ಅಧಿಕಾರಿ ಆಗಿಯೇ ತೀರುತ್ತೇನೆಂದು ಪಣ ತೊಟ್ಟರು. ಅದಕ್ಕೆ ಅವರ ಕುಟುಂಬವೂ ಬೆಂಬಲ ನೀಡಿತು.ಈಗ ಮನೀಶಾ ಪಾಕಿಸ್ಥಾನದ ಅತ್ಯಂತ ಅಪರಾಧಗಳು ನಡೆಯುವ ಸ್ಥಳ ಎಂದು ಕುಖ್ಯಾತಿ ಪಡೆದಿರುವ ಲ್ಯಾರಿ ಪ್ರದೇಶದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ತರಬೇತಿ ಮುಗಿದ ಬಳಿಕ ಅವರು ಪಾಕಿಸ್ಥಾನಿ ಪೊಲೀಸ್ ಇಲಾಖೆಯ ಉಪ ವರಿಷ್ಠಾಧಿಕಾರಿ ಕುರ್ಚಿಯಲ್ಲಿ ಕೂರಲಿದ್ದಾರೆ. ಒಂದು ವೇಳೆ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಆ ಒಂದು ಅಂಕ ಮನೀಶಾಗೆ ಸಿಕ್ಕಿಬಿಟ್ಟಿದ್ದರೆ, ಬಹುಶಃ ಇಂದು ಅವರನ್ನು ಇಡೀ ಪ್ರಪಂಚವೇ ತಿರುಗಿ ನೋಡುವ ಪ್ರಮೇಯವೇ ಬರುತ್ತಿರಲಿಲ್ಲವೇನೋ? ಮನೀಶಾ ಮೊದಲಿನಿಂದಲೂ ಹೆಣ್ಣು-ಗಂಡು ಸಮಾನರೆಂದು ವಾದಿಸುತ್ತಾ ಬಂದವರು. ಅನ್ಯಾಯ ತಲೆ ಎತ್ತಿ ನಿಂತಿರುವಾಗ ಹೆಣ್ಣು ಮಕ್ಕಳೂ ಅದರ ವಿರುದ್ಧ ಧ್ವನಿ ಎತ್ತಬೇಕು ಎಂದು ನಂಬಿ ದವರು. ಹಾಗೆಯೇ ಅದರ ನಿಟ್ಟಿನಲ್ಲಿ ಹೆಜ್ಜೆ ಇಟ್ಟವರು ಕೂಡ. ಇದೀಗ ಪೊಲೀಸ್ ಇಲಾಖೆಯ ಹುದ್ದೆಯೇರಿರುವ ಮನೀಶಾಗೆ ಸಮಾಜದಲ್ಲಿ ಸಮಾನತೆ ತರಬೇಕೆಂಬ ದೊಡ್ಡ ಕನಸಿದೆ. ಆ ನಿಟ್ಟಿನಲ್ಲೇ ಕೆಲಸ ಮಾಡುವುದಾಗಿ ಅವರು ಹೇಳಿಕೊಂಡಿದ್ದಾರೆ. “ಇದುವರೆಗೂ ನನಗೆ ಸಮಾಜ ಹೇಳಿಕೊಟ್ಟಿದ್ದು ಹೆಣ್ಣಿಗಿರುವ ಕಟ್ಟುಪಾಡಿನ ಬಗ್ಗೆ ಮಾತ್ರವೇ. ಆದರೆ ಅವೆಲ್ಲವೂ ತಪ್ಪು ಎಂದು ಸಾಧಿಸಿ ತೋರಿಸಿದ್ದೇನೆ. ಸಮಾಜದಲ್ಲಿಯೂ ಬದಲಾವಣೆಯ ದಿನಗಳು ದೂರದಲ್ಲಿಲ್ಲ. ಆದಷ್ಟು ಬೇಗ ಸಮಾಜ ಬದಲಾಗುತ್ತದೆ. ಹೆಣ್ಣು ಗಂಡಿನಂತೆ ಎಲ್ಲ ಕ್ಷೇತ್ರದಲ್ಲೂ ಸಾಧಿಸಲಿದ್ದಾಳೆ’ ಎನ್ನುವುದು ಮನೀಶಾ ಅಚಲ ನಂಬಿಕೆಯ ಮಾತು. ಮನೀಶಾ ಈಗ ಪೊಲೀಸ್ ಇಲಾಖೆ ಸೇರಿದ್ದು, ಇದಕ್ಕೂ ಮೊದಲು ಅವರು ಖಾಸಗಿ ಅಕಾಡೆಮಿಯೊಂದರಲ್ಲಿ ತರಬೇತಿ ದಾರೆಯಾಗಿಯೂ ಕೆಲಸ ಮಾಡಿದ್ದಾರೆ. ಅಲ್ಲಿನ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬುವ ಕೆಲಸವನ್ನು ಅವರು ಮಾಡಿದ್ದಾರೆ. “ನನ್ನಿಂದಾಗಿ ಒಂದಿಷ್ಟು ಹೆಣ್ಣು ಮಕ್ಕಳು ಸ್ಫೂರ್ತಿ ಪಡೆದುಕೊಂಡು, ಸಮಾಜದಲ್ಲಿ ತಲೆ ಎತ್ತಿದರೆ, ಅದು ನಿಜಕ್ಕೂ ನನ್ನ ಸಾಧನೆಯಾಗುತ್ತದೆ’ ಎಂದಿದ್ದಾರೆ ಮನೀಶಾ. ಅಂದ ಹಾಗೆ ಪಾಕಿಸ್ಥಾನದಲ್ಲಿ ಪೊಲೀಸ್ ಇಲಾಖೆ ಅಥವಾ ಸೇನೆ ಸೇರಿದ ಹೆಣ್ಣು ಮಕ್ಕಳಲ್ಲಿ ಮನೀಶಾ ಮೊದಲಿನವರಲ್ಲ. ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿರುವ ಅನೇಕ ಕುಟುಂಬಗಳ ಹೆಣ್ಣು ಮಕ್ಕಳಿಗೆ ಇಂತಹ ಅವಕಾಶ ಸಿಕ್ಕಿದೆ. ಅಲ್ಪಸಂಖ್ಯಾಕ ಹಿಂದೂ ಧರ್ಮದವರಾದ ಪುಷ್ಪಾ ಕುಮಾರಿ ಸಿಂಧ್ ಪ್ರಾಂತ್ಯದಲ್ಲಿ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಅಲ್ಪಸಂಖ್ಯಾಕ ಮಧ್ಯಮ ವರ್ಗದ ಕುಟುಂಬದವರಾಗಿ, ಪೊಲೀಸ್ ಇಲಾಖೆಯ ಉಪ ವರಿಷ್ಠಾಧಿಕಾರಿ ಹುದ್ದೆಗೇರಿದ ಹಿರಿಮೆಯ ಗರಿ ಮನೀಶಾ ಅವರದ್ದು. ಪಾಕಿಸ್ಥಾನ ಭಾರತವಲ್ಲ. ವಿಶ್ವ ಆರ್ಥಿಕ ವೇದಿಕೆಯ ವರದಿಯ ಪ್ರಕಾರ, ಗೌರವಕ್ಕೆ ಧಕ್ಕೆ ತಂದರು ಎನ್ನುವ ಕಾರಣಕ್ಕೇ ಪ್ರತಿ ವರ್ಷ ಪಾಕಿಸ್ಥಾನದಲ್ಲಿ ಕನಿಷ್ಠ 5,000 ಹೆಣ್ಣು ಮಕ್ಕಳನ್ನು ಕೊಲೆ ಮಾಡಲಾಗುತ್ತಿದೆ. ಇಂತಹ ಕಠಿನ ಸನ್ನಿವೇಶವಿರುವ ರಾಷ್ಟ್ರದಲ್ಲಿ ಎಲ್ಲರ ವಿರೋಧ ಕಟ್ಟಿಕೊಂಡು ಪೊಲೀಸ್ ಇಲಾಖೆಗೆ ಧುಮುಕಿರುವ ಮನೀಶಾ ನಿಜಕ್ಕೂ ಆದರ್ಶವೇ ಸರಿ. – ಮಂದಾರ ಸಾಗರ