ಹೊಸದಿಲ್ಲಿ: ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಹಾರ್ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ದಿಲ್ಲಿ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಕಠೊರ ಅಪರಾಧಿಗಳು ಇರುವ ವಿಭಾಗದಲ್ಲಿಯೇ ಮಾ.20ರವರೆಗೆ ಇರಬೇಕಾಗಿದೆ. ಸದ್ಯ ಅವರು ಕಾರಾಗೃಹ ಸಂಖ್ಯೆ 1ರಲ್ಲಿ ಇರುವ ಹಿರಿಯ ನಾಗರಿಕರ ವಿಭಾಗದಲ್ಲಿ ಇದ್ದಾರೆ ಎಂದು ಅಧಿ ಕಾರಿಗಳು ತಿಳಿಸಿದ್ದಾರೆ.
ಜೈಲಿನ ನಿಯಮದ ಅನ್ವಯ ದೊರೆಯುವ ಸೌಲಭ್ಯ ಮಾತ್ರ ಒದಗಿಸಲಾಗಿದೆ. ಅವರಿಗೆ ಸೋಮವಾರ ರಾತ್ರಿಯ ಊಟಕ್ಕೆ ಅನ್ನ, ದಾಲ್, ಚಪಾತಿ ನೀಡಲಾಗಿತ್ತು ಎಂದು ಜೈಲಧಿಕಾರಿಗಳು ಹೇಳಿದ್ದಾರೆ.
ಐದು ಗಂಟೆ ವಿಚಾರಣೆ: ಈ ನಡುವೆ ಮಂಗಳವಾರ ಇ.ಡಿ. ಅಧಿಕಾರಿಗಳು ಅಬಕಾರಿ ನೀತಿ ಅಕ್ರಮಕ್ಕೆ ಸಂಬಂಧಿಸಿದಂತೆ 5 ಗಂಟೆಗಳ ಕಾಲ ಸಿಸೋಡಿಯಾರಿಂದ ಮಾಹಿತಿ ಪಡೆದು ಕೊಂಡಿದ್ದಾರೆ. ಈ ನಡುವೆ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಪುತ್ರಿಎಲ್‌ಸಿ ಕೆ. ಕವಿತಾ ನಿಕಟ ವರ್ತಿ ಉದ್ಯಮಿ ಅರುಣ್ ಪಿಳ್ಳೆ ಅವರನ್ನು ಇ.ಡಿ. ಬಂಧಿಸಿದೆ
ಪ್ರಧಾನಿ ವಿರುದ್ಧ ಆಕ್ರೋಶ: ಕರ್ನಾಟಕದಲ್ಲಿ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ವಿರುದ್ಧ ಭ್ರಷ್ಟಾಚಾರದ ಆರೋಪ ಇರುವುದರಿಂದ ಪ್ರಧಾನಿ ನರೇಂದ್ರ ಮೋದಿ ಲಂಚ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವ ವಿಚಾರ ಮಾತನಾಡಬಾರದು ಎಂದು ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. ಅವರನ್ನೂ ಇನ್ನೂ ಬಂಧಿಸಲಾಗಿಲ್ಲ. ಆದರೆ ಮನೀಶ್ ಸಿಸೋಡಿಯಾ ನಿವಾಸದಲ್ಲಿ ಶೋಧದ ವೇಳೆ ಏನು ಸಿಗದೇ ಇದ್ದರೂ ಅವರನ್ನು ಸಿಬಿಐ ಬಂಧಿಸಿ ಕಾರಾಗೃಹಕ್ಕೆ ತಳ್ಳಿದೆ ಎಂದು ಅರವಿಂದ ಕೇಜ್ರಿವಾಲ್ ದೂರಿದ್ದಾರೆ.