Advertisement

ಸಹಜ ಸ್ಥಿತಿಯತ್ತ Manipur : ಸಚಿವ ಶಾ ಭೇಟಿ

11:15 PM May 30, 2023 | Team Udayavani |

ಇಂಫಾಲ: ಹಿಂಸಾಚಾರಪೀಡಿತ ಮಣಿಪುರದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ. ರಾಜ್ಯದಲ್ಲಿ ಶಾಂತಿ ಸ್ಥಾಪನೆಯ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭೇಟಿ ನೀಡಿದ್ದು, ಮಂಗಳವಾರ ಕಾನೂನು ಮತ್ತು ಸುವ್ಯವಸ್ಥೆಯ ಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಗಲಭೆ ನಡೆದಿದ್ದ ಕೆಲವು ಪ್ರದೇಶಗಳಲ್ಲಿ ಒಂದಾಗಿರುವ ಚುರ್‌ಚಾಂದ್‌ಪುರಕ್ಕೆ ಶಾ ಭೇಟಿ ನೀಡಿ ದರು. ಈ ವೇಳೆ ಅಮಿತ್‌ ಶಾ ಅವರು ಚರ್ಚ್‌ ಮುಖಂ ಡರು, ಕುಕಿ ಸಮುದಾಯದ ಬುದ್ಧಿಜೀವಿಗಳನ್ನು ಭೇಟಿ ಯಾಗಿ ಮಾತುಕತೆ ನಡೆಸಿದರು. ಈ ವೇಳೆ ಗಲಭೆಗೆ ಮೂಲ ಕಾರಣ ಮತ್ತು ಶಾಂತಿ ಸ್ಥಾಪನೆ ನಿಟ್ಟಿನಲ್ಲಿ ಕೈಗೊಳ್ಳ ಬೇಕಾದ ಶಾಶ್ವತ ಕ್ರಮಗಳ ಕುರಿತು ಚರ್ಚಿಸಿದರು.

Advertisement

ಮೈಥೇಯಿ ಮತ್ತು ಕುಕಿ ಜನಾಂಗದ ನಡುವೆ ಪದೇ ಪದೆ ಘರ್ಷಣೆಗಳಿಗೆ ಈಶಾನ್ಯ ರಾಜ್ಯ ಸಾಕ್ಷಿಯಾಗಿದೆ. ಇತ್ತೀಚೆಗೆ ನಡೆದ ಗಲಭೆಯಲ್ಲಿ ಇದುವರೆಗೂ 80 ಮಂದಿ ನಾಗರಿಕರು ಮೃತಪಟ್ಟಿದ್ದಾರೆ.

ತಲಾ 10 ಲಕ್ಷ ರೂ. ಪರಿಹಾರ: ಗಲಭೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ಹಾಗೂ ಕುಟುಂಬದ ಒಬ್ಬರಿಗೆ ಉದ್ಯೋಗ ಕಲ್ಪಿಸುವುದಾಗಿ ಸರಕಾರ ಘೋಷಿಸಿದೆ. ಈ ಪರಿಹಾರ ಹಣದ ಪೈಕಿ ಶೇ.50ರಷ್ಟು ಕೇಂದ್ರ ಸರಕಾರ ಹಾಗೂ ಉಳಿದ ಅರ್ಧದಷ್ಟು ಹಣವನ್ನು ಮಣಿಪುರ ಸರಕಾರ ಭರಿಸಲಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಮಣಿಪುರ ಸಿಎಂ ಬಿರೇನ್‌ ಸಿಂಗ್‌ ಅವರ ನಡುವೆ ಸೋಮವಾರ ತಡರಾತ್ರಿ ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಮಹಿಳಾ ಮುಖಂಡರ ಭೇಟಿ: ಮಂಗಳವಾರ ಚುರಚಾಂದ್‌ಪುರದಲ್ಲಿ ಮಣಿಪುರದ ಹಲವು ಮಹಿಳಾ ಮುಖಂಡರು, ವಿವಿಧ ನಾಗರಿಕ ಸಂಘಟನೆಗಳ ಪ್ರಮುಖರೊಂದಿಗೆ ಮಾತುಕತೆ ನಡೆಸಿದ ಅಮಿತ್‌ ಶಾ ಅವರು, ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಟೊಂಕ ಕಟ್ಟಿ ನಿಲ್ಲುವಂತೆ ಮನವಿ ಮಾಡಿದರು. “ಮಣಿಪುರವು ಸಹಜ ಸ್ಥಿತಿಗೆ ಮರಳಬೇಕು. ರಾಜ್ಯದಲ್ಲಿ ಶಾಂತಿ ನೆಲೆಸಲು ಮತ್ತು ಸಮೃದ್ಧಿಯಿಂದಿರಲು ಒಗ್ಗಟ್ಟಾಗಿ ಶ್ರಮಿಸಲು ನಾವೆಲ್ಲರೂ ಬದ್ಧರಾಗಿದ್ದೇವೆ’ ಎಂದು ಅಮಿತ್‌ ಶಾ ಟ್ವೀಟ್‌ ಮಾಡಿದ್ದಾರೆ.
ಇದೇ ವೇಳೆ ಮಣಿಪುರದಿಂದ ಬಂದು ಮಿಜೋರಾಂನಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರ ಪರಿಹಾರಕ್ಕಾಗಿ ಕೇಂದ್ರ ಸರಕಾರ ತುರ್ತಾಗಿ 5 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಬೇಕು ಎಂದು ಮಿಜೋರಾಂ ಸರಕಾರ ಮನವಿ ಮಾಡಿದೆ.

ಮಣಿಪುರದಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟು ಸಂಪೂರ್ಣವಾಗಿ ಶಮನವಾಗಿಲ್ಲ. ಆದರೆ ಮತ್ತೆ ಸಹಜ ಸ್ಥಿತಿಗೆ ತರುವ ನಿಟ್ಟಿನಲ್ಲಿ ಭದ್ರತಾ ಪಡೆಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಶೀಘ್ರ ಶಾಂತಿ ನೆಲೆಸಲಿದೆ ಎಂಬ ವಿಶ್ವಾಸವಿದೆ.
ಜ| ಅನಿಲ್‌ ಚೌಹಾಣ್‌, ರಕ್ಷಣ ಪಡೆಗಳ ಮುಖ್ಯಸ್ಥ

Advertisement

ರಾಷ್ಟ್ರಪತಿ ಮಧ್ಯಪ್ರವೇಶಕ್ಕೆ ಆಗ್ರಹ
ಗಲಭೆಪೀಡಿತ ಮಣಿಪುರ ಸಹಜ ಸ್ಥಿತಿಗೆ ಮರಳುವಂತೆ ಮಾಡುವ ನಿಟ್ಟಿನಲ್ಲಿ ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಬೇಕೆಂದು ಕಾಂಗ್ರೆಸ್‌ನ ಉನ್ನತ ನಾಯಕರು ಮನವಿ ಮಾಡಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಾಯಕರು ಮಂಗಳವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದರು. ಸೇವೆಯಲ್ಲಿರುವ ಅಥವಾ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಉನ್ನತ ಸಮಿತಿಯಿಂದ ಮಣಿಪುರ ಗಲಭೆಯ ಸಂಪೂರ್ಣ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಅಲ್ಲದೇ ಮಣಿಪುರದಲ್ಲಿ ಶಾಂತಿ ನೆಲೆಸುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ತುರ್ತು ಕ್ರಮಗಳ ಪಟ್ಟಿಯ ಬೇಡಿಕೆಯನ್ನು ರಾಷ್ಟ್ರಪತಿಗಳಿಗೆ ಕಾಂಗ್ರೆಸ್‌ ನಾಯಕರು ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next