ನವದೆಹಲಿ: ಲೋಕಸಭೆ ಚುನಾವಣೆಯ ಫಲಿತಾಂಶಕ್ಕೂ ಮುನ್ನವೇ ಮಣಿಪುರದಲ್ಲಿ ಬಿಜೆಪಿಗೆ ಆಘಾತ ಎದುರಾಗಿದೆ. ಮಣಿಪುರದ ಬಿಜೆಪಿ ನೇತೃತ್ವದ ಸರ್ಕಾರದ ಮಿತ್ರಪಕ್ಷವಾಗಿರುವ ನಾಗಾ ಪೀಪಲ್ಸ್ ಫ್ರಂಟ್(ಎನ್‌ಪಿಎಫ್) ಈಗ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್ ಪಡೆಯಲು ನಿರ್ಧರಿಸಿದೆ. ಎನ್‌ಪಿಎಫ್ ನಾಯಕ, ಮಾಜಿ ಸಿಎಂ ಟಿ.ಆರ್.ಝೆಲಿಯಾಂಗ್ ಶನಿವಾರ ಈ ಕುರಿತು ಟ್ವೀಟ್ ಮಾಡಿದ್ದು, “ಪಕ್ಷದ ಪದಾಧಿಕಾರಿಗಳು ಮತ್ತು ಶಾಸಕರ ಜತೆಗೆ ಸಮಾಲೋಚನೆ ನಡೆಸಿದ ಬಳಿಕ ನಾವು ಸರ್ಕಾರಕ್ಕೆ ನೀಡಿದ ಬೆಂಬಲ ವಾಪಸ್ ಪಡೆಯಲು ನಿರ್ಧರಿಸಿದ್ದೇವೆ. ಲೋಕಸಭೆ ಚುನಾವಣೆ ಫಲಿ ತಾಂಶ ಬಂದ ಬಳಿಕ ಸಿಎಂ ಬಿರೇನ್‌ಸಿಂಗ್ ನೇತೃತ್ವದ ಸರ್ಕಾರದಿಂದ ನಮ್ಮ ನಾಲ್ವರು ಶಾಸಕರು ಹೊರಬರಲಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ. ಆದರೆ, ಇದರಿಂದ ಸರ್ಕಾರ ಕ್ಕೇನೂ ಅಪಾಯವಿಲ್ಲ ಎಂದು ಬಿಜೆಪಿ ಹೇಳಿಕೊಂಡಿದೆ. 60 ಸದಸ್ಯಬಲದ ವಿಧಾನಸಭೆಯಲ್ಲಿ 40 ಸದಸ್ಯರನ್ನು ಬಿಜೆಪಿ ಹೊಂದಿದೆ. ನಾಲ್ವರು ಹೊರಹೋದರೂ ನಮ್ಮಲ್ಲಿ 36 ಮಂದಿ ಉಳಿಯುತ್ತಾರೆ ಎಂದೂ ಬಿಜೆಪಿ ತಿಳಿಸಿದೆ.