ಹೊಸದಿಲ್ಲಿ: ಈಶಾನ್ಯ ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರದ ವಿರುದ್ಧ ಮಣಿಪುರದ ಕುಕಿ ಸಮುದಾಯದವರು ಬುಧವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಕಾರರು ‘ಕುಕಿ ಜೀವ ಉಳಿಸಿ’ ಎಂಬ ಸಂದೇಶಗಳಿರುವ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಿದ್ದರು.
ಪ್ರತಿಭಟನಾಕಾರರಲ್ಲಿ ನಾಲ್ವರಿಗೆ ಮಾತ್ರ ಸಭೆಗಾಗಿ ಗೃಹ ಸಚಿವರ ನಿವಾಸದೊಳಗೆ ಪ್ರವೇಶಿಸಲು ಅವಕಾಶ ನೀಡಲಾಯಿತು ಮತ್ತು ಉಳಿದವರನ್ನು ಜಂತರ್ ಮಂತರ್‌ಗೆ ಸ್ಥಳಾಂತರಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಒಂದು ತಿಂಗಳ ಹಿಂದೆ ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸಾಚಾರದಲ್ಲಿ ಕನಿಷ್ಠ 98 ಜನರು ಸಾವನ್ನಪ್ಪಿದ್ದು 310 ಜನರು ಗಾಯಗೊಂಡಿದ್ದಾರೆ. ರಾಜ್ಯದ 272 ಪರಿಹಾರ ಶಿಬಿರಗಳಲ್ಲಿ ಒಟ್ಟು 37,450 ಜನರು ಆಶ್ರಯ ಪಡೆದಿದ್ದಾರೆ.
ಪರಿಶಿಷ್ಟ ಪಂಗಡದ (ಎಸ್‌ಟಿ) ಸ್ಥಾನಮಾನಕ್ಕಾಗಿ ಮೀಟೈ ಸಮುದಾಯದ ಬೇಡಿಕೆಯನ್ನು ಪ್ರತಿಭಟಿಸಲು ಬೆಟ್ಟದ ಜಿಲ್ಲೆಗಳಲ್ಲಿ ‘ಬುಡಕಟ್ಟು ಐಕ್ಯತಾ ಮೆರವಣಿಗೆ’ ಆಯೋಜಿಸಲಾಗಿದ್ದ ವೇಳೆ ಮೇ 3 ರಂದು ಮಣಿಪುರದಲ್ಲಿ ಮೊದಲ ಬಾರಿಗೆ ಘರ್ಷಣೆಗಳು ಪ್ರಾರಂಭವಾಗಿದ್ದವು. ಆ ಬಳಿಕ ಹಿಂಸಾಚಾರ ಭುಗಿಲೆದ್ದಿತ್ತು.