Advertisement

ಇಫಿ ಚಿತ್ರೋತ್ಸವ : ಫಿಲ್ಮ್‌ ಬಜಾರ್ ನಲ್ಲಿ ಕಂಗೊಳಿಸಿದ ‘ನೀವಿನ್ನೂ ನೋಡದ ಮಣಿಪುರʼ!

03:42 PM Nov 25, 2022 | Team Udayavani |

ಪಣಜಿ: 53 ನೇ ಇಫಿ ಭಾಗವಾಗಿ ಎನ್‌ಎಫ್‌ ಡಿಸಿಯ ಫಿಲ್ಮ್‌ ಬಜಾರ್‌ ನಲ್ಲಿ ಮಣಿಪುರ ರಾಜ್ಯದ ವಾರ್ತಾ ಇಲಾಖೆ ಹಾಗೂ ಮಣಿಪುರ ಫಿಲ್ಮ್‌ ಡೆವಲಪ್‌ ಮೆಂಟ್‌ ಸೊಸೈಟಿ ಪ್ರಸ್ತುತಪಡಿಸಿದ “ನೀವಿನ್ನೂ ನೋಡದ ಮಣಿಪುರʼ ಈ ಬಾರಿಯ ವಿಶೇಷವೆನಿಸಿತು.

Advertisement

ಪ್ರತಿ ಬಾರಿ ಉತ್ತರ ಪ್ರದೇಶ, ಮಹಾರಾಷ್ಟ್ರದ ಸರಕಾರಗಳು ತಮ್ಮ ಪ್ರವಾಸೋದ್ಯಮ ತಾಣಗಳ ಕುರಿತು ಇಂಥ ಬಜಾರ್‌ ಗಳಲ್ಲಿ ಸಿನಿಮಾ ಮಂದಿಗೆ ಪರಿಚಯಿಸಲೆತ್ನಿಸುವುದು ಸಹಜ. ಈಶಾನ್ಯ ಭಾರತದಿಂದ ಬರುವುದೇ ಕಡಿಮೆ. ಈ ಬಾರಿ ಇದಕ್ಕೆ ಅಪವಾದವೆಂಬಂತೆ ಮೊದಲ ಬಾರಿಗೆ ಮಣಿಪುರದ ಸಿನಿಮಾ ಹಾಗೂ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸಲು ಮಣಿಪುರದ ಪೆವಿಲಿಯನ್ ಏರ್ಪಡಿಸಲಾಗಿತ್ತು.

ಇದರೊಂದಿಗೆ ಈ ಬಾರಿ ಇಫಿ ಚಲನಚಿತ್ರೋತ್ಸವದಲ್ಲಿ ಮಣಿಪುರ ಸಿನಿಮಾದ ಸುವರ್ಣ ವರ್ಷಾಚರಣೆಯೂ ನಡೆಯುತ್ತಿದೆ. 1972 ರಲ್ಲಿ ಮೊದಲ ಮಣಿಪುರ ಸಿನಿಮಾ ಮಾತಂಗಿ ಮಣಿಪುರ್‌ ಬಿಡುಗಡೆಯಾಗಿತ್ತು. ದೇಬ್‌ ಕುಮಾರ್‌ ಬೋಸ್‌ ಈ ಸಿನಿಮಾವನ್ನು ನಿರ್ದೇಶಿಸಿದ್ದರು. ಹಾಗಾಗಿ ಮಣಿಪುರಕ್ಕೆ ಎಲ್ಲಿಲ್ಲದ ಮಹತ್ವ ಬಂದಿತ್ತು.

ಮಣಿಪುರದಲ್ಲಿ ಸಿನಿಮಾ ಮಾಡುವವರಿಗೆ, ಅಲ್ಲಿನ ತಾಣಗಳನ್ನು ದೃಶ್ಯೀಕರಿಸುವವರಿಗೆ ಎಲ್ಲ ರೀತಿಯ ಪೂರಕ ಸಹಕಾರ ಒದಗಿಸಲು ಮಣಿಪುರ ಸರಕಾರ ನಿರ್ಧರಿಸಿದೆ. ಮಣಿಪುರ ಸರಕಾರದ ಈ ಬಾರಿಯ ಥೀಮ್‌ “ನೀವಿನ್ನೂ ನೋಡದ ಮಣಿಪುರ’. ಹೊಸ ಸಿನಿಮಾ ನಿರ್ದೇಶಕರು, ನಿರ್ಮಾಪಕರಿಗೆ ಮಣಿಪುರದ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಪ್ರಾಕೃತಿಕ ಪರಂಪರೆಯನ್ನು ವಿವರಿಸಿ ತಮ್ಮ ಚಿತ್ರಗಳ ಚಿತ್ರೀಕರಣಕ್ಕೆ ಆಯ್ಕೆ ಮಾಡಿಕೊಳ್ಳುವಂತೆ ಮಾಡುವುದು ಇದರ ಮೂಲ ಉದ್ದೇಶ ಈ ಪೆವಿಲಿಯನ್‌ ದ್ದಾಗಿತ್ತು.

ಮಣಿಪುರದ ಪ್ರಾಕೃತಿಕ ಲೋಕತಕ್‌ ಲೇಕ್‌, ಕೈಬುಲ್‌ ಲಾಮ್ಜಾವೊ- ಜಗತ್ತಿನಲ್ಲೇ ಏಕೈಕ ತೇಲುವ ರಾಷ್ಟ್ರೀಯ ಅಭಯಾರಣ್ಯ, ಜಗತ್ತಿನಲ್ಲೇ ಬರೀ ಮಹಿಳೆಯರಿಂದ ನಡೆಯುವ ಇಮಾ ಮಾರ್ಕೆಟ್‌ ಎಲ್ಲದರ ಬಗ್ಗೆಯೂ ಆಸಕ್ತರಿಗೆ ಮಾಹಿತಿ ಒದಗಿಸಲಾಯಿತು.

Advertisement

ಸೊಸೈಟಿಯ ಕಾರ್ಯದರ್ಶಿ ಸುಂಝು ಬಚಸ್ಪತಿಮಾಯುಂ, ಕಥೆ ಹೇಳುವ ಬೃಹತ್‌ ಪರಂಪರೆ ಮಣಿಪುರದಲ್ಲಿದೆ. ಖೊಂಗ್ಜೊಂ ಪರ್ವ ಹಲವಾರು ಶತಮಾನಗಳಿಂದ ಇಂದಿಗೂ ಹರಿದು ಬಂದಿರುವ ಹಾಡುಗಳ ಜಾನಪದ ಪರಂಪರೆ ಮತ್ತಿತರ ಸಂಗತಿ ಕುರಿತು ವಿವರಿಸಲಾಯಿತು.

2020 ರಲ್ಲಿ ಮಣಿಪುರ ಸರಕಾರವೂ ನೂತನ ಸಿನಿಮಾ ನೀತಿಯನ್ನು ಜಾರಿಗೊಳಿಸಿದೆ. ಈ ಮೂಲಕ ಸ್ಥಳೀಯರ ಹಾಗೂ ಸಿನಿಮಾ ನಿರ್ಮಾಣದಲ್ಲಿ ಭಾಗಿಯಾಗುವ ಎಲ್ಲರ ಹಿತವನ್ನು ಕಾಯುವುದು ಈ ನೀತಿಯ ಉದ್ದೇಶ ಎಂದು ವಿವರಿಸಿದರು.

ಇದರೊಂದಿಗೆ ಬಿಹಾರ, ಪಂಜಾಬ್‌, ಉತ್ತರ ಪ್ರದೇಶ, ಉತ್ತರಾಖಂಡ್‌, ಮಹಾರಾಷ್ಟ್ರ, ತಮಿಳುನಾಡು, ಜಾರ್ಖಂಡ್‌, ಮಧ್ಯಪ್ರದೇಶ, ಗುಜರಾತ್‌, ಛತ್ತೀಸ್‌ ಗಡ, ದಿಲ್ಲಿ, ಪುದುಚರಿಯ ದೇಶಗಳು ಫಿಲ್ಮ್‌ ಬಜಾರ್‌ ನಲ್ಲಿ ಫೆವಿಲಿಯನ್‌ ಗಳನ್ನು ನಿರ್ಮಿಸಿದ್ದವು.

ಕರ್ನಾಟಕದ್ದೇನೂ ಕಾಣಲೇ ಇಲ್ಲ

ಫಿಲ್ಮ್‌ ಬಜಾರ್ ನಲ್ಲಿ ಈ ಬಾರಿಯೂ ಕರ್ನಾಟಕದ ಪ್ರವಾಸೋದ್ಯಮ ಇಲಾಖೆಯಾಗಲೀ, ಸಿನಿ ಉದ್ಯಮಕ್ಕೆ ಸಂಬಂಧಿಸಿದ ಯಾವುದೇ ಪೆವಿಲಿಯನ್‌ ಆಗಲೀ, ಮಾಹಿತಿಯಾಗಲೀ ಇರಲಿಲ್ಲ. ಕರ್ನಾಟಕದಲ್ಲಿ ಉಳಿದೆಲ್ಲ ರಾಜ್ಯ ಹಾಗೂ ವಿದೇಶಗಳಿಗಿಂತ ಒಳ್ಳೆಯ ತಾಣಗಳಿವೆ. ಐತಿಹಾಸಿಕ, ಸಾಂಸ್ಕೃತಿಕ, ಧಾರ್ಮಿಕ, ಪಾರಂಪರಿಕ, ಅರಣ್ಯ, ಜಲಪಾತ ಹಾಗೂ ಸಮುದ್ರ ತೀರಗಳಿವೆ. ವಿಶೇಷವಾಗಿ ಪಡುಬಿದ್ರಿ ಸಮುದ್ರ ತೀರಕ್ಕೆ ಪ್ರತಿಷ್ಠಿತ ಬ್ಲ್ಯೂ ಟ್ಯಾಗ್ ಗೌರವ ಸಿಕ್ಕಿದೆ. ಇವೆಲ್ಲವುಗಳನ್ನು ಸರಿಯಾಗಿ ಪ್ರೊಮೋಷನ್‌ ಮಾಡಿದರೆ ಪ್ರವಾಸಿಗರು ಹಾಗೂ ಸಿನಿಮಾ ಮಂದಿಯ ಸಂಖ್ಯೆ ಹೆಚ್ಚಾಗಬಹುದು. ಸುಮಾರು ಹತ್ತು ಸಾವಿರ ಮಂದಿಗಳು ಭಾಗವಹಿಸುವಂತೆ ಮಾಡಬಹುದು. ಆದರೆ ಫಿಲ್ಮ್‌ ಬಜಾರ್‌ ನಲ್ಲಿ ಯಾವುದೂ ಕಾಣ ಬರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next