Advertisement

Manipur: ಎನ್‌ಕೌಂಟರ್‌ನಲ್ಲಿ 11 ಮಂದಿ ಕುಕಿ ಭಯೋತ್ಪಾದಕರ ಹತ್ಯೆಗೈದ ಸಿಆರ್‌ಪಿಎಫ್‌ ಯೋಧರು

10:20 PM Nov 11, 2024 | Team Udayavani |

ಇಂಫಾಲ: ಮಣಿಪುರದ ಜಿರಿಬಾಮ್ ಪ್ರದೇಶದಲ್ಲಿ ಸಿಆರ್‌ಪಿಎಫ್‌ (ಕೇಂದ್ರಿಯ ಮೀಸಲು ಪೊಲೀಸ್‌ ಪಡೆ)ನ ಎನ್‌ಕೌಂಟರ್‌ನಲ್ಲಿ 11 ಶಂಕಿತ ಕುಕಿ ಭಯೋತ್ಪಾದಕರು ಮೃತಪಟ್ಟಿದ್ದಾರೆ. ಮೂಲಗಳ ಪ್ರಕಾರ, ಎನ್‌ಕೌಂಟರ್‌ನಲ್ಲಿ ಒಬ್ಬ ಸಿಆರ್‌ಪಿಎಫ್ ಯೋಧ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ.

Advertisement

ಮಾಹಿತಿಯ ಪ್ರಕಾರ, ಶಿಬಿರದ ಮೇಲೆ ದಾಳಿ ಮಾಡಿದ ನಂತರ ಭಯೋತ್ಪಾದಕರ ವಿರುದ್ಧ ಸಿಆರ್‌ಪಿಎಫ್ ಕಾರ್ಯಾಚರಣೆ ಕೈಗೊಂಡಿದ್ದಾರೆ. ಕಳೆದ ವರ್ಷ ಮೇ ನಲ್ಲಿ ಮಣಿಪುರದಲ್ಲಿ ಇಂಫಾಲ್‌ನ ಮೈತೇಯಿ ಮತ್ತು ಸುತ್ತಮುತ್ತಲಿನ ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ಕುಕಿಗಳ ನಡುವಿನ ಜನಾಂಗೀಯ ಹಿಂಸಾಚಾರದಲ್ಲಿ 200ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಉದ್ವಿಗ್ನತೆ ಮತ್ತು ಹಿಂಸಾಚಾರದ ಘಟನೆಗಳು ಇನ್ನೂ ನಡೆಯುತ್ತಿವೆ. ಆದರೆ ಇದು ಕಳೆದ ಹಲವು ತಿಂಗಳಲ್ಲಿಯೇ ಭಯೋತ್ಪಾದಕರ ಹತ್ಯೆಯ ಅತಿದೊಡ್ಡ ಘಟನೆಯಾಗಿದೆ.

ಆಗಿದ್ದೇನು?

ಮೂಲಗಳ ಪ್ರಕಾರ ಶಂಕಿತ ಉಗ್ರರು ಸೋಮವಾರ ಮಧ್ಯಾಹ್ನ 3.30ರ ಸುಮಾರಿಗೆ ಜಿರಿಬಾಮ್ ಜಿಲ್ಲೆಯ ಬೊರೊಬೆಕರ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ್ದಾರೆ. ಶಂಕಿತ ಕುಕಿ ಉಗ್ರರು ಎರಡೂ ಕಡೆಯಿಂದ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ್ದರು. ಅದರ ನಂತರ ಈ ಎನ್ಕೌಂಟರ್ ಪ್ರಾರಂಭವಾದ  ಬಳಿಕ ಭದ್ರತಾ ಪಡೆಗಳು ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದರು.

ಸಿಆರ್‌ಪಿಎಫ್ ನೇತೃತ್ವದ ಭದ್ರತಾ ಪಡೆಗಳು ನಡೆಸಿದ ಪ್ರತಿದಾಳಿಯಲ್ಲಿ 11 ಶಂಕಿತ ಭಯೋತ್ಪಾದಕರು ಹತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪೊಲೀಸ್ ಠಾಣೆ ಬಳಿ ನಿರಾಶ್ರಿತರಿಗೆ ಪರಿಹಾರ ಶಿಬಿರವೂ ಇದೆ. ಈ ಶಿಬಿರವೂ ಭಯೋತ್ಪಾದಕರ ಗುರಿಯಾಗಿರಬಹುದು ಎಂದು ನಂಬಲಾಗಿದೆ.

ಉಗ್ರರ ದಾಳಿ: ಒಬ್ಬ ರೈತನಿಗೆ ಗಾಯ
ಮಣಿಪುರದಲ್ಲಿ ರೈತರ ಮೇಲಿನ ಉಗ್ರರ ಗುಂಡಿನ ದಾಳಿ ಸೋಮವಾರವೂ ಮುಂದುವರೆದಿದೆ. ಇಂಫಾಲ ಪೂರ್ವ ಜಿಲ್ಲೆಯ ಕಣಿವೆ ಪ್ರದೇಶಗಳ ಗದ್ದೆಗಳಲ್ಲಿ ದುಡಿಯುತ್ತಿದ್ದ ರೈತರ ಮೇಲೆ ಗುಡ್ಡಗಾಡು ಪ್ರದೇಶಗಳ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಒಬ್ಬ ರೈತ ಗಾಯಗೊಂಡಿದ್ದಾರೆ. ತಕ್ಷಣವೇ ಸ್ಥಳಕ್ಕಾಗಮಿಸಿದ ಭದ್ರತೆ ಪಡೆಗಳು ಉಗ್ರರನ್ನು ಹಿಮ್ಮೆಟ್ಟಿಸಿದ್ದಾರೆ. ಸತತ ಮೂರನೇ ದಿನ ಮಣಿಪುರದಲ್ಲಿ ಈ ಮಾದರಿಯ ದಾಳಿ ನಡೆದಿರುವ ಕಾರಣ ಈ ಪ್ರದೇಶದ ರೈತರು ಭತ್ತದ ಕೊಯ್ಲಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next