Advertisement

6 ತಿಂಗಳಲ್ಲಿ ಕಾರ್ಯಸಾಧ್ಯತಾ ವರದಿ: ಚಾರುಲತಾ

01:42 AM Feb 01, 2020 | mahesh |

ಮಂಗಳೂರು: ಪ್ರಸ್ತಾವಿತ ಮಣಿಪಾಲ-ಕೊಣಾಜೆ ಜ್ಞಾನ ಮತ್ತು ಆರೋಗ್ಯಪಥ (ಕಾರಿಡಾರ್‌) ಯೋಜನೆಯ ಅಭಿವೃದ್ಧಿ ಬಗ್ಗೆ ಸಮಗ್ರ ಅಧ್ಯಯನ ಹಾಗೂ ಭಾಗೀದಾರರ ಸಲಹೆಗಳನ್ನು ಆಧರಿಸಿ ಕಾರ್ಯ ಸಾಧ್ಯತಾ ವರದಿಯನ್ನು ಆರು ತಿಂಗಳೊಳಗೆ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ (ಕೆಯುಐಎಫ್‌ಡಿಸಿ)ದ ವ್ಯವಸ್ಥಾಪಕ ನಿರ್ದೇಶಕಿ ಚಾರುಲತಾ ತಿಳಿಸಿದ್ದಾರೆ.

Advertisement

ಯೋಜನೆಯ ಕಾರ್ಯಸಾಧ್ಯತಾ ವರದಿಗೆ ಪ್ರಾರಂಭಿಕವಾಗಿ ನಗರದ ಖಾಸಗಿ ಹೊಟೇಲ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಭಾಗೀದಾರರ ಕಾರ್ಯಾಗಾರದಲ್ಲಿ ಅವರು ಮಾತನಾ ಡಿದರು. ಯೋಜನೆಯ ದೃಷ್ಟಿಕೋನ ಮತ್ತು ಅಂಶಗಳ ವ್ಯಾಖ್ಯಾನ, ಪ್ರಚಲಿತ ಉಪಕ್ರಮಗಳು ಮತ್ತು ಸೌಲಭ್ಯಗಳು, ಪ್ರಸ್ತುತ ಇರುವ ಅವಕಾಶಗಳು, ಸಾಮರ್ಥ್ಯಗಳು ಮತ್ತು ಆವಿಷ್ಕಾರಗಳ ಬಗ್ಗೆ ಚರ್ಚೆ, ಆಯುಷ್ಮಾನ್‌ ಭಾರತ್‌ ಮತ್ತು ಸರ್ವರಿಗೂ ಶಿಕ್ಷಣದಂತಹ ವಿವಿಧ ಯೋಜನೆಗಳನ್ನು ಯೋಜನೆ ಯಡಿ ಸೇರಿಸಿಕೊಳ್ಳುವ ಬಗ್ಗೆ, ವೈದ್ಯ ಕೀಯ ಪ್ರವಾಸೋದ್ಯಮ ಮತ್ತು ಆರೋಗ್ಯದ ವಲಯದಲ್ಲಿರುವ ಅವಕಾಶಗಳ ಬಗ್ಗೆ, ಕಾರಿಡಾರನ್ನು ಜ್ಞಾನ ಮತ್ತು ಆರೋಗ್ಯ ವಲಯದಲ್ಲಿ ಜಾಗತಿಕ ಕೇಂದ್ರವಾಗಿಸಲು ಇರುವ ಅವಕಾಶಗಳ ಅನ್ವೇಷಣೆಯ ಚರ್ಚೆ ಕಾರ್ಯಾಗಾರದ ಕಾರ್ಯಸೂಚಿ ಎಂದವರು ತಿಳಿಸಿದರು.

ಉದ್ಘಾಟನೆ
ಕಾರ್ಯಾಗಾರವನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡಿ ಡಾ| ಟಿ.ಎಂ.ಎ. ಪೈ, ಟಿ.ಎ. ಪೈ, ಉಳ್ಳಾಲ ಶ್ರೀನಿವಾಸ ಮಲ್ಯ, ಡಾ| ನಾಗಪ್ಪ ಆಳ್ವ ಮುಂತಾದವರು ಬಹಳಷ್ಟು ಕಾರ್ಯ ಮಾಡಿದ್ದಾರೆ. ಮಣಿಪಾಲ-ಕೊಣಾಜೆ ಜ್ಞಾನ ಮತ್ತು ಆರೋಗ್ಯಪಥವು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಯಲ್ಲಿ ಮಹತ್ತರ ಯೋಜನೆ ಎಂದರು. ಶಾಸಕ ಯು.ಟಿ. ಖಾದರ್‌ ಮಾತ ನಾಡಿ, ಏಜೆನ್ಸಿ ನಿಗದಿಯಾಗಿ ಪೂರ್ವ ಭಾವಿ ಕ್ರಮಗಳನ್ನು ವಹಿಸಿರುವುದು ಯೋಜನೆಯ ಅನುಷ್ಠಾನದ ನಿಟ್ಟಿನಲ್ಲಿ ಆರಂಭಿಕ ಹೆಜ್ಜೆಯಾಗಿದೆ ಎಂದರು.

ಶಾಸಕ ಡಾ| ಭರತ್‌ ಶೆಟ್ಟಿ ಮಾತನಾಡಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಸೇವೆಯಲ್ಲಿ ಖಾಸಗಿ ಕ್ಷೇತ್ರ ಮಹತ್ತರ ಪಾತ್ರ ವಹಿಸಿದೆ ಎಂದರು.  ಅಧ್ಯಕ್ಷತೆ ವಹಿಸಿದ್ದ ಶಾಸಕ ವೇದ ವ್ಯಾಸ ಕಾಮತ್‌, ಯೋಜನೆಯ ಅನುಷ್ಠಾನದ ನಿಟ್ಟಿನಲ್ಲಿ ಅಧಿಕಾರಿಗಳು ಪೂರಕ ಕ್ರಮಗಳನ್ನು ತ್ವರಿತಗತಿಯಲ್ಲಿ ಕೈಗೊಳ್ಳಬೇಕು ಎಂದರು.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌, ಪಿಡಬ್ಲ್ಯುಸಿ ಎಜೆನ್ಸಿಯ ರವೀಂದ್ರ ಮುಂತಾದವರು ಉಪಸ್ಥಿತರಿದ್ದರು.

Advertisement

ಕಾರಿಡಾರ್‌ ಯೋಜನೆ
ರಾಜ್ಯ ಸರಕಾರವು ಮಣಿಪಾಲ-ಕೊಣಾಜೆ ಜ್ಞಾನ ಮತ್ತು ಆರೋಗ್ಯ ಪಥ ಯೋಜನೆಯ ಪ್ರಾರಂಭಿಕ ಚಟುವಟಿಕೆ ಕೈಗೆತ್ತಿಗೊಳ್ಳಲು ಕೆಯುಐಎಫ್‌ಡಿಸಿಗೆ ನಿರ್ದೇಶಿಸಿದೆ. ಯೋಜನೆಯಲ್ಲಿ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳಿಗೆ, ಉತ್ಪಾದನ ಘಟಕಗಳಿಗೆ ಮತ್ತು ಆರೋಗ್ಯಸೇವೆ ಒದಗಿಸುವ ಸಂಸ್ಥೆಗಳ ಅಭಿವೃದ್ಧಿಗೆ ಪೂರಕ ವಾತಾವರಣ ಕಲ್ಪಿಸಲು ಪ್ರಯತ್ನಿಸಲಾಗುತ್ತದೆ. ಸಾರ್ವಜನಿಕ ಮತ್ತು ಖಾಸಗಿ ವಲಯಗಳಿಂದ ಹೂಡಿಕೆ ನಿರೀಕ್ಷಿಸಿ ಉತ್ತಮ ಭೌತಿಕ ಮತ್ತು ಪೂರಕ ಮೂಲಸೌಕರ್ಯಗಳನ್ನು ಒಳಗೊಂಡು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next