Advertisement

Manipal: ನಾಲ್ವರು ಅನುಪಮ ಸಾಧಕರಿಗೆ ಇಂದು ಹೊಸ ವರ್ಷದ ಪ್ರಶಸ್ತಿ ಪ್ರದಾನ

11:35 PM Jan 10, 2025 | Team Udayavani |

ಮಣಿಪಾಲ: ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌ (ಎಜಿಇ), ಮಣಿಪಾಲ್‌ ಅಕಾಡೆಮಿ ಆಫ್ ಹೈಯರ್‌ ಎಜುಕೇಶನ್‌ (ಮಾಹೆ), ಮಣಿಪಾಲ್‌ ಎಜುಕೇಶನ್‌ ಆ್ಯಂಡ್‌ ಮೆಡಿಕಲ್‌ ಗ್ರೂಪ್‌ (ಎಂಇಎಂಜಿ), ಮಣಿಪಾಲ್‌ ಮೀಡಿಯ ನೆಟ್‌ವರ್ಕ್‌ ಲಿ., (ಎಂಎಂಎನ್‌ಎಲ್‌), ಡಾ| ಟಿಎಂಎ ಪೈ ಫೌಂಡೇಶನ್‌ ವತಿಯಿಂದ ಈ ವರ್ಷ ನಾಲ್ವರು ಶ್ರೇಷ್ಠ ಸಾಧಕರಿಗೆ ನ್ಯೂ ಇಯರ್‌ ಅವಾರ್ಡ್‌(ಹೊಸವರ್ಷದ ಪ್ರಶಸ್ತಿ)ಅನ್ನು ಜ. 11ರ ಸಂಜೆ 5.30ಕ್ಕೆ ಕೆಎಂಸಿ ಗ್ರೀನ್ಸ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು. ಪ್ರಶಸ್ತಿ ಸ್ವೀಕರಿಸುವವರ ವಿವರ ಇಂತಿದೆ:

Advertisement

ನ್ಯಾ| ಪಿ. ವಿಶ್ವನಾಥ ಶೆಟ್ಟಿ
ಕಾನೂನು ಮತ್ತು ನ್ಯಾಯಾಂಗ ಕ್ಷೇತ್ರದಲ್ಲಿ ಹೊಸತನದ ಮಾರ್ಗ ಪ್ರವರ್ತಕರಾಗಿ ಭಾರತೀಯ ನ್ಯಾಯ ಕ್ಷೇತ್ರದಲ್ಲಿ ಉನ್ನತ ಹೆಸರು ಗಳಿಸಿರುವ ನ್ಯಾ| ಪಿ. ವಿಶ್ವನಾಥ ಶೆಟ್ಟಿ ಅವರು ಉಡುಪಿಯಲ್ಲಿ 1944ರ ಮೇ 2 ರಂದು ಜನಿಸಿದರು. ಸೈಂಟ್‌ ಮೇರಿಸ್‌ ಹಿ.ಪ್ರಾ. ಶಾಲೆ, ಬೋರ್ಡ್‌ ಹೈಸ್ಕೂಲ್‌, ಎಂಜಿಎಂ ಕಾಲೇಜು, ಕಾನೂನು ಕಾಲೇಜಿನಲ್ಲಿ ಶಿಕ್ಷಣ ಪೂರೈಸಿ ಅಡ್ವೊಕೇಟ್‌ ಜನರಲ್‌ ಆಗಿದ್ದ ತುಂಬೆ ಕೃಷ್ಣ ರಾವ್‌ ಮಾರ್ಗದರ್ಶನದಲ್ಲಿ 1966 ರಲ್ಲಿ ಕಾನೂನು ವೃತ್ತಿ ಅರಂಭಿಸಿ ದರು. 1971ರಲ್ಲಿ ಶೆಟ್ಟಿ – ಹೆಗ್ಡೆ ಅಸೋಸಿಯೇಟ್ಸ್‌ ಆರಂಭಿಸಿ ಸುಮಾರು 20 ಕಿರಿಯ ವಕೀಲರನ್ನು ಸಜ್ಜುಗೊಳಿಸಿದರು. 1971- 1978ರ ನಡುವೆ ಬೆಂಗಳೂರಿನ ಸರಕಾರಿ ಕಾನೂನು ಕಾಲೇಜಿ (ಈಗ ವಿಶ್ವವಿದ್ಯಾನಿಲಯ ಕಾನೂನು ಕಾಲೇಜು)ನಲ್ಲಿ ಅರೆಕಾಲಿಕ ಉಪ ನ್ಯಾಸಕರಾಗಿದ್ದರು. ಕರ್ನಾಟಕ ಸ್ಟೇಟ್‌ ಬಾರ್‌ ಕೌನ್ಸಿಲ್‌ನಲ್ಲಿ ನಾಲ್ಕು ಬಾರಿ ಸದಸ್ಯರಾಗಿ, 1989-91ರ ನಡುವೆ ಅಧ್ಯಕ್ಷರಾಗಿದ್ದರು. ರಾಷ್ಟ್ರೀಯ ಕಾನೂನು ಶಾಲೆ ಸ್ಥಾಪನೆಯಲ್ಲಿ ಪ್ರಧಾನ ಪಾತ್ರ ವಹಿಸಿ ಅದರ ಅಕಾಡೆಮಿಕ್‌ ಮತ್ತು ಕಾರ್ಯ ನಿರ್ವಾಹಕ ಮಂಡಳಿ ಸದಸ್ಯರಾಗಿದ್ದರು. ಬಾರ್‌ ಕೌನ್ಸಿಲ್‌ ಆಫ್‌ ಇಂಡಿಯಾ ದಲ್ಲಿ ಕರ್ನಾಟಕವನ್ನು ಪ್ರತಿನಿಧಿ ಸಿದ್ದಾರೆ. 1995ರಿಂದ 2006ರ ವರೆಗೆ ಹೈಕೋರ್ಟ್‌ ನ್ಯಾಯಾ ಧೀಶರಾಗಿ, ಕರ್ನಾಟಕ ನ್ಯಾಯಾಂಗ ಅಕಾಡೆಮಿ ಅಧ್ಯಕ್ಷರಾಗಿ, ಕರ್ನಾಟಕ ಕಾನೂನು ಸೇವಾ ಪ್ರಾ ಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ವಿವಿಧ ದೇಶಗಳಲ್ಲಿ ಅಂತಾ ರಾಷ್ಟ್ರೀಯ ಸಮಾವೇಶಗಳಲ್ಲಿ ಪಾಲ್ಗೊಂಡಿದ್ದಾರೆ. 2017ರಲ್ಲಿ ಕರ್ನಾಟಕ ಲೋಕಾಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ.

ತೆಕ್ಕಾರ್‌ ಯಶವಂತ ಪ್ರಭು
ಬ್ಯಾಂಕಿಂಗ್‌ ಕ್ಷೇತ್ರದ ಸಾಧಕ ಹಾಗೂ ಸಮಾಜ ಸೇವಕ ತೆಕ್ಕಾರ್‌ ಯಶವಂತ ಪ್ರಭು ಅವರು 1950ರ ಡಿ.30ರಂದು ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ಜನಿಸಿದರು. ಇವರು ತೆಕ್ಕಾರ್‌ ವೆಂಕಟೇಶ ಪ್ರಭು ಮತ್ತು ಶಾರದಾ ಪ್ರಭು ದಂಪತಿ ಪುತ್ರ. ಉಪ್ಪಿನಂಗಡಿಯ ಬೋರ್ಡ್‌ ಹಿ.ಪ್ರಾ. ಶಾಲೆ, ಬೋರ್ಡ್‌ ಪ್ರೌಢಶಾಲೆ, ಮಂಗಳೂರಿನ ಸಂತ ಅಲೋಶಿಯಸ್‌ ಕಾಲೇಜು, ಬೆಂಗಳೂರಿನ ಬಿಎಂಎಸ್‌ ಕಾನೂನು ಕಾಲೇಜಿನಲ್ಲಿ ಶಿಕ್ಷಣ ಗಳಿಸಿದರು. 1970ರಲ್ಲಿ ಕೆನರಾ ಬ್ಯಾಂಕ್‌ನಲ್ಲಿ ವೃತ್ತಿ ಆರಂಭಿಸಿ, ಜನರಲ್‌ ಮ್ಯಾನೇಜರ್‌ ಆದರು. 36 ವರ್ಷಗಳ ವೃತ್ತಿಪರ ಬದುಕಿನಲ್ಲಿ ಕಾರ್ಪೊರೇಶನ್‌ ಕ್ರೆಡಿಟ್‌, ಟ್ರೆಜರಿ, ವಿದೇಶ ವಿನಿಮಯ ಮತ್ತು ಅಂತಾರಾಷ್ಟ್ರೀಯ ವ್ಯವಹಾರ ಸೇರಿದಂತೆ ಎಲ್ಲ ಮುಖ್ಯ ವಿಭಾಗಗಳಲ್ಲಿ ಅನುಭವ ಪಡೆದಿದ್ದಾರೆ. ಕೆನರಾ ಬ್ಯಾಂಕ್‌ನ ಹಾಂಕಾಂಗ್‌ ಆಪರೇಶನ್ಸ್‌ನ ಮೇಲುಸ್ತುವಾರಿಯಾಗಿ 3 ವರ್ಷ ಸೇವೆ ಸಲ್ಲಿಸಿದ್ದಾರೆ. ಹೊಸದಿಲ್ಲಿಯಲ್ಲಿ ಬ್ಯಾಂಕ್‌ನ ವಲಯ ಕಚೇರಿಯ ಜವಾಬ್ದಾರಿ ನಿರ್ವಹಿಸಿದ್ದರು. ಮುಂಬ ಯಿಯ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯದ ಕಾರ್ಯ ನಿರ್ವಾಹಕ ನಿರ್ದೇ ಶಕರಾಗಿ ಮಹತ್ವದ ಸುಧಾ ರಣೆಗಳನ್ನು ತಂದರು. ಹೊಸದಿಲ್ಲಿಯ ಓರಿಯಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌ನ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕರಾಗಿ ಅನೇಕ ಉಪಕ್ರಮಗಳಲ್ಲಿ ಪ್ರಧಾನ ಪಾತ್ರ ವಹಿಸಿದರು. 2012 ರಲ್ಲಿ ಧನಲಕ್ಷ್ಮೀ ಬ್ಯಾಂಕ್‌ನ ಅಧ್ಯಕ್ಷರಾಗಿ ಮೂರು ವರ್ಷ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಪ್ರಭು ಅವರು ಅನೇಕ ಪ್ರತಿಷ್ಠಿತ ಕಂಪೆನಿಗಳ ಮಂಡಳಿಗಳಲ್ಲಿ ಸ್ವತಂತ್ರ ನಿರ್ದೇಶಕರಾಗಿ, ಅವುಗಳ ವಿತ್ತ ವಿಭಾಗಗಳಲ್ಲಿ ತಜ್ಞರಾಗಿ ಕ್ರಿಯಾಶೀಲರಾಗಿದ್ದಾರೆ.

ಡಾ| ವಸುಂಧರಾ ದೊರಸ್ವಾಮಿ
ಭರತನಾಟ್ಯ ಕ್ಷೇತ್ರದ ಅಪ್ರತಿಮ ಸಾಧಕರಾದ ಮೈಸೂರಿನ ವಸುಂಧರಾ ಪರ್ಫಾಮಿಂಗ್‌ ಆರ್ಟ್ಸ್ ಸೆಂಟರ್‌ (ವಿಪಿಎಸಿ)ನ ಸ್ಥಾಪಕರು ಮತ್ತು ನಿರ್ದೇಶಕಿ ಡಾ| ವಸುಂಧರಾ ದೊರಸ್ವಾಮಿ ಅವರು ಕೊರಿಯೋಗ್ರಾಫರ್‌ ಮತ್ತು ನಾಟ್ಯಶಿಕ್ಷಕರು. ಐದು ದಶಕಗಳಿಂದ ಕಲಾಕ್ಷೇತ್ರಕ್ಕೆ ಸಮರ್ಪಿಸಿ ಕೊಂಡಿರುವ ಅವರು ಭಾರತೀಯ ಶಾಸ್ತ್ರೀಯ ನಾಟ್ಯಪ್ರಕಾರದಲ್ಲಿ ಗಮನಾರ್ಹ ಪರಿವರ್ತನೆಗಳನ್ನು ತಂದಿದ್ದಾರೆ. ಯೋಗ ಮತ್ತು ಸಮರ ಕಲೆಗಳ ಅಂಶಗಳನ್ನು ಭರತನಾಟ್ಯದಲ್ಲಿ ಪರಿಣಾಮಕಾರಿಯಾಗಿ ಬಳಸಿ ಪ್ರದರ್ಶನಗಳಿಗೆ ಹೊಸ ರೂಪ ಕೊಟ್ಟಿದ್ದಾರೆ. ಮೂಡುಬಿದಿರೆ ಮೂಲದವರಾಗಿದ್ದು, ಮೈಸೂರಿನಲ್ಲಿ ಹುಟ್ಟಿ ಬೆಳೆದ ಡಾ| ವಸುಂಧರಾ ದೊರಸ್ವಾಮಿ ಭರತನಾಟ್ಯದಲ್ಲಿ ಸಂಪ್ರದಾಯ ಮತ್ತು ಹೊಸತನಗಳನ್ನು ಸಮನ್ವಯಭಾವದಲ್ಲಿ ಅಳವಡಿಸಿ ಕೊಂಡವರು. ಪಟ್ಟಾಭಿ ಜೋಯಿಸ್‌ ಅವರ ಶಿಷ್ಯೆಯಾದ ಅವರು 1988ರಲ್ಲಿ ಯೋಗ ಮತ್ತು ಭರತನಾಟ್ಯದ ಅಂತಃಸಂಬಂಧಗಳ ಕುರಿತು ಸಂಶೋಧನೆ ನಡೆಸಿ ಪಿಎಚ್‌.ಡಿ. ಪಡೆದರು. ಜಾನ ಪದದಲ್ಲಿಯೂ ಸ್ನಾತ ಕೋತ್ತರ ಪದವಿ ಹೊಂದಿದ್ದು ಥಂಗ್‌-ತ ಸಮರಕಲೆಗಳಲ್ಲಿ ಮತ್ತು ಕಳರಿಪಯಟ್‌ನಲ್ಲಿ ಪ್ರಾವೀಣ್ಯತೆ ಹೊಂದಿದ್ದಾರೆ. ಭರತನಾಟ್ಯಕ್ಕೆ ಯಕ್ಷಗಾನ ಸಂಗೀತವನ್ನು ಅಳವಡಿಸಿದ್ದಾರೆ. ನೃತ್ಯಮಾಧ್ಯಮದಲ್ಲಿ ಸಾಮವೇದದ ಪ್ರಸ್ತುತಿ ಮಾಡಿದ್ದು ಇದು 1997ರಲ್ಲಿ ಗುರುವಾಯೂರಿನಲ್ಲಿ ಪ್ರದರ್ಶನ ಕಂಡಿದೆ. ಪ್ರತಿಷ್ಠಿತ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸಹಿತ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಅಮೆರಿಕ, ಆಸ್ಟ್ರೇಲಿಯಾ, ಫ್ರಾನ್ಸ್‌ ಮತ್ತು ಇಂಗ್ಲೆಂಡ್‌ಗಳ ಪ್ರತಿಷ್ಠಿತ ಕಲೋತ್ಸವಗಳಲ್ಲಿ ದೇಶವನ್ನು ಪ್ರತಿನಿ ಧಿಸಿದ್ದಾರೆ.

ಡಾ| ಪಿ. ಮೋಹನ ರಾವ್‌
ಆರು ದಶಕಗಳ ಕಾಲ ವೈದ್ಯರಾಗಿ, ಹೃದ್ರೋಗ ತಜ್ಞರಾಗಿ ಸೇವೆ ಸಲ್ಲಿಸಿರುವ ಡಾ| ಮೋಹನ ರಾವ್‌ ಅವರು 1940ರಲ್ಲಿ ಉಡುಪಿಯಲ್ಲಿ ಜನಿಸಿದರು. ಡಾ| ರಾವ್‌ ಜನರಲ್‌ ಮೆಡಿಸಿನ್‌ನಲ್ಲಿ ಎಂಡಿ ಪದವಿಯನ್ನು ಪೂರ್ಣಗೊಳಿಸುವ ಸಂದರ್ಭ ದಲ್ಲಿಯೇ ಇಂಡಿಯನ್‌ ಸೊಸೈಟಿ ಆಫ್‌ ಇಲೆಕ್ಟ್ರೋ ಕಾರ್ಡಿಯಾಲಜಿ (ಎಫ್‌ಐಎಸ್‌ಇ)ಯಲ್ಲಿ ಫೆಲೋಶಿಪ್‌ ಪಡೆದರು. 1991-1992ರಲ್ಲಿ ಅವರು ಕಾರ್ಡಿಯಾಲಾಜಿಕಲ್‌ ಸೊಸೈಟಿ ಆಫ್‌ ಇಂಡಿಯಾ ಇದರ ಬೆಂಗಳೂರು ವಿಭಾಗದ ಅಧ್ಯಕ್ಷರಾಗಿ, 1997-1998ರಲ್ಲಿ ಇಂಡಿಯನ್‌ ಕಾಲೇಜ್‌ ಆಫ್‌ ಕಾರ್ಡಿಯಾಲಜಿಯ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದರು. 1964-1982 ರಲ್ಲಿ ಮದ್ರಾಸ್‌ನ ದಕ್ಷಿಣ ರೈಲ್ವೇ ಆಸ್ಪತ್ರೆಯಲ್ಲಿ ವೈದ್ಯರಾಗಿ ಮತ್ತು ಹೃದ್ರೋಗ ಚಿಕಿತ್ಸಕರಾಗಿ ವೃತ್ತಿ ಆರಂಭಿ ಸಿದರು. 1982ರಿಂದ 1986ರ ವರೆಗೆ ಅವರು ಇರಾಕ್‌ನ ಇಂಡಿಯನ್‌ ರೈಲ್ವೇ ಕನ್‌ಸ್ಟ್ರಕ್ಷನ್‌ ಕಂಪೆನಿಯಲ್ಲಿ ವೈದ್ಯಕೀಯ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸಿದ್ದರು. 1986-1998ರ ನಡುವೆ ಹಿಂದೂಸ್ಥಾನ್‌ ಏರೋನಾಟಿಕ್ಸ್‌ ಲಿ.ನಲ್ಲಿ ವೈದ್ಯಕೀಯ ಸೇವೆಯ ಮುಖ್ಯಸ್ಥರಾಗಿದ್ದರು.
2005ರ ವರೆಗೂ ಎಚ್‌ ಎಎಲ್‌ ಜತೆಗೆ ಸಹಭಾಗಿತ್ವ ಹೊಂದಿದ್ದು ವೈದ್ಯಕೀಯ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು. 2000ರಲ್ಲಿ ಹೊಸಕೋಟೆಯಲ್ಲಿ ಎಂವಿಜೆ ಮೆಡಿಕಲ್‌ ಕಾಲೇಜು ಮತ್ತು ಸಂಶೋಧನ ಆಸ್ಪತ್ರೆ(900 ಬೆಡ್‌) ಆರಂಭಿಸಿ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕರಾಗಿ ಮುನ್ನಡೆಸುತ್ತಿದ್ದಾರೆ. ಭಾರತೀಯ ವೈದ್ಯರ ಸಂಘಟನೆಯ ಕರ್ನಾಟಕ ವಿಭಾಗ, ಇಂಡಿಯನ್‌ ಅಸೋಸಿ ಯೇಶನ್‌ ಆಫ್‌ ಆಕ್ಯುಪೇಶನಲ್‌ ಹೆಲ್ತ್‌ನ ಕರ್ನಾಟಕ ವಿಭಾಗದ ಅಧ್ಯಕ್ಷರಾಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next