Advertisement

Manipal: ಮಾಹೆ ವಿವಿ: ಇಂದಿನಿಂದ 16ರವರೆಗೆ ಸಂಶೋಧನಾ ದಿನಾಚರಣೆ: ಡಾ.ಎಚ್‌.ಎಸ್‌.ಬಲ್ಲಾಳ್‌

03:01 AM Nov 13, 2024 | Team Udayavani |

ಮಣಿಪಾಲ: ಮಾಹೆ ವಿ.ವಿ.ಯಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋ ಭಾವ ಬೆಳೆಸಲು ಮತ್ತು ಪಿಯುಸಿ ಅನಂತರದ ಶಿಕ್ಷಣಕ್ಕೆ ಇರುವ ಹಲವು ಆಯ್ಕೆಗಳನ್ನು ವಿದ್ಯಾರ್ಥಿ, ಪಾಲಕ, ಪೋಷಕರು ಹಾಗೂ ಶಿಕ್ಷಕರ ಮುಂದಿಡಲು ಮತ್ತು ಸಂಶೋಧನಾರ್ಥಿಗಳನ್ನು ಒಂದೆಡೆ ಸೇರಿಸಲು ನ. 13 ರಿಂದ ನ. 16ರ ವರೆಗೆ ಕೆಎಂಸಿ ಗ್ರೀನ್ಸ್‌ನಲ್ಲಿ ಸಂಶೋಧನ ದಿನಾಚರಣೆ ಹಮ್ಮಿಕೊಂಡಿದ್ದೇವೆ ಎಂದು ಸಹ ಕುಲಾಧಿಪತಿ ಡಾ| ಎಚ್‌.ಎಸ್‌.ಬಲ್ಲಾಳ್‌ ಹೇಳಿದರು.

Advertisement

ಮಾಹೆ ವಿ.ವಿ.ಯ ಆಡಳಿತ ಕಚೇರಿಯಲ್ಲಿ ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ನಾಲ್ಕು ದಿನದ ಕಾರ್ಯಕ್ರಮದಲ್ಲಿ ನ. 13 ಮತ್ತು 14ರಂದು ಮಾಹೆ ವಿ.ವಿ.ಯ ವಿವಿಧ ಅಂಗ ಸಂಸ್ಥೆಗಳು ಸಹಿತ ಕೆ.ಎಸ್‌.ಹೆಗ್ಡೆ, ಯೇನಪೊಯ, ಎನ್‌ಐಟಿಕೆ ಸುರತ್ಕಲ್‌ ಮೊದಲಾದ ಸಂಸ್ಥೆಗಳ ಸಂಶೋಧನಾರ್ಥಿಗಳಿಗೆ ಕಾರ್ಯಕ್ರಮ ಇರಲಿದೆ ಎಂದರು.

ನ. 15 ಮತ್ತು 16ರಂದು ಅವಿಭಜಿತ ದ.ಕ. ಜಿಲ್ಲೆಯ ಶಾಲಾ ಕಾಲೇಜು ವಿದ್ಯಾರ್ಥಿ ಗಳಿಗೆ (8ರಿಂದ 12ನೇ ತರಗತಿ) ಮಾಹೆಯ ವಿವಿಧ ವಿಭಾಗ ದಿಂದ ಸಂಶೋಧನೆಯ ಮಾಹಿತಿಯನ್ನು ಒದಗಿಸಲಾಗುತ್ತದೆ. ನಿತ್ಯ 4ರಿಂದ 5 ಸಾವಿರ ವಿದ್ಯಾರ್ಥಿಗಳು ಸೇರುವ ನಿರೀಕ್ಷೆಯಿದೆ ಎಂದು ಹೇಳಿದರು.

ಸಹ ಕುಲಪತಿ ಡಾ| ಶರತ್‌ ಕುಮಾರ್‌ ರಾವ್‌ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಂಶೋಧನೆಯ ಬಗ್ಗೆ ವಿಶೇಷ ಆಸಕ್ತಿ ಮೂಡಿಸಲು ಹಾಗೂ ಪಿಯುಸಿಯ ಅನಂತರ ಎಂಜಿನಿಯರಿಂಗ್‌ ಮತ್ತು ವೈದ್ಯಕೀಯ ವಿಷಯ ಮಾತ್ರ ಆಯ್ಕೆಯಲ್ಲ. ಇದರ ಹೊರತಾಗಿಯೂ ಸಂಶೋಧನೆ ಸಹಿತ ಹತ್ತಾರು ವಿಭಾಗಗಳಿವೆ. ಅದರ ಬಗ್ಗೆ ಸಮಗ್ರ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಲು ಸಂಶೋಧನ ದಿನ ಆಚರಿಸುತ್ತಿದ್ದೇವೆ ಎಂದರು.

ಕೆಎಂಸಿ ಸಹ ಡೀನ್‌ ಡಾ| ನವೀನ್‌ ಸಾಲಿನ್ಸ್‌ ಮಾತನಾಡಿ, ಸುಮಾರು 200 ಸ್ಟಾಲ್‌ಗ‌ಳು ಇರಲಿವೆ. ವಿದ್ಯಾರ್ಥಿಗಳಿಗೆ ಸಂಶೋಧನೆ ಮತ್ತು ಆಯಾ ಸಂಶೋಧನ ಸಂಸ್ಥೆ ನಡೆಸುತ್ತಿರುವ ವಿವಿಧ ಕೋರ್ಸ್‌ಗಳ ಮಾಹಿತಿಯನ್ನು ಒದಗಿಸಲಾಗುತ್ತದೆ ಎಂದರು. ಸಂಶೋಧನ ವಿಭಾಗದ ನಿರ್ದೇಶಕ ಡಾ| ಸತೀಶ್‌ ರಾವ್‌, ಕೆಎಂಸಿ ಸಮುದಾಯ ಆರೋಗ್ಯ ವಿಭಾಗದ ಡಾ| ಚೈತ್ರಾ ರಾವ್‌, ಕ್ರೀಡಾ ಕೌನ್ಸಿಲ್‌ ಕಾರ್ಯದರ್ಶಿ ಡಾ| ವಿನೋದ್‌ ನಾಯಕ್‌, ಸಚಿನ್‌ ಕಾರಂತ್‌ ಪತ್ರಿಕಾಗೋಷ್ಠಿ ಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next