Advertisement

Manipal: ಮಣ್ಣಪಳ್ಳ ಕೆರೆಯಲ್ಲಿ ನಡೆದಿತ್ತು ಕಂಬಳ!

03:06 PM Jan 15, 2025 | Team Udayavani |

ಮಣಿಪಾಲ: ಪ್ರಾಕೃತಿಕ ಸೌಂದರ್ಯದ ಅಪೂರ್ವ ತಾಣವಾಗಿರುವ ಮಣ್ಣಪಳ್ಳ ಕೆರೆಯ ಹಿಂದೆ ಒಂದು ರೋಚಕವಾದ ಇತಿಹಾಸವಿದೆ.

Advertisement

ಗುಡ್ಡದ ತುದಿಯಲ್ಲಿ ಲ್ಯಾಟರೈಟ್‌ ಎಂಬ ಕೆಂಪು ಕಲ್ಲಿನ ಪ್ರದೇಶದಲ್ಲಿ ಪುಟ್ಟದಾದ ಕೆರೆಯೊಂದಿತ್ತು. ಅದು ಆವೆಮಣ್ಣಿನ ಪಳ್ಳ. 1960ರ ಕಾಲಘಟ್ಟದಲ್ಲಿ ಮಣಿಪಾಲ ಹಾಗೂ ಸುತ್ತಲಿನ ಪ್ರದೇಶದಲ್ಲಿ ಹೆಂಚಿನ ಕಾರ್ಖಾನೆಗಳು ಸ್ಥಾಪನೆಗೊಂಡಿದ್ದವು. ಹೆಂಚಿನ ಕಾರ್ಖಾನೆಗೆ ಅಗತ್ಯವಿದ್ದ ಮಣ್ಣು ಈ ಭಾಗದಲ್ಲಿ ನಿಧಿಯಂತೆ ಸಿಕ್ಕಿತು.

ಮಣಿಪಾಲ ಮತ್ತು ಸಂತೆಕಟ್ಟೆ ಪ್ರದೇಶದಲ್ಲಿದ್ದ ಬೃಹತ್‌ ಹೆಂಚಿನ ಕಾರ್ಖಾನೆಗಳಿಗೆ ಮಣ್ಣಪಳ್ಳ ಕೆರೆ ಇರುವ ಪ್ರದೇಶದಿಂದ ಆವೆ ಮಣ್ಣನ್ನು ತೆಗೆದು ಪೂರೈಸಲಾಗುತ್ತಿತ್ತು. ಕಾಲಾಂತರದಲ್ಲಿ ಕಾರ್ಖಾನೆ ಗಳು ನಾನಾ ಕಾರಣಗಳಿಗಾಗಿ ಮುಚ್ಚುವವರೆಗೂ ಇಲ್ಲಿಂದಲೇ ಮಣ್ಣಿನ ಪೂರೈಕೆ ನಡೆಯುತ್ತಿತ್ತು. ಹೀಗೆ ಮಣ್ಣು ತೆಗೆಯುತ್ತ ತೆಗೆಯುತ್ತ ಒಂದು ಪುಟ್ಟ ಕೆರೆಯಂತಿದ್ದ ಜಾಗ ನಿಧಾನವಾಗಿ ಬೆಳೆದು ಸರೋವರದ ರೂಪವನ್ನು ಪಡೆಯುತ್ತಾ ಹೋಯಿತು.

ಮಣ್ಣು ತೆಗೆದ ಜಾಗವು ಕೆರೆಯಾಗಿ ಮಾರ್ಪಡುತ್ತಾ ಹೋಗಿ, ಮಳೆಗಾಲದಲ್ಲಿ ಮಳೆ ನೀರು ಸಂಗ್ರಹವೂ ಆಗುತ್ತಿದ್ದರಿಂದ ಕ್ರಮೇಣ ಇದು ಮಣ್ಣುಪಳ್ಳ ಕೆರೆಯಾಗಿ ಹೆಸರು ಪಡೆಯಿತು. ಮಣ್ಣುಪಳ್ಳ ಹೆಸರೇ ಸೂಚಿಸುವಂತೆ ಮಣ್ಣು ತೆಗೆದು ಸೃಷ್ಟಿಯಾದ ಕೆರೆಯಾಯಿತು. ಮಣ್ಣಪಳ್ಳ ಒಂದು ಕೆರೆಯಾಗಿ ಹಿಂದಿನಿಂದಲೂ ಇತ್ತು. ಅದೇ ಹಿನ್ನೆಲೆಯಲ್ಲಿ ಮಣಿಪಾಲ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತಿದೆ.

ಮಳೆಗಾಲದಲ್ಲಿ ನೀರು ತುಂಬುವ, ಬೇಸಿಗೆಯಲ್ಲಿ ನೀರು ಆರಿ ಸ್ವಲ್ಪ ಮಟ್ಟಿಗೆ ಕೆಸರಿನಿಂದ ಕೂಡಿದ್ದ ಈ ಕೆರೆಯಲ್ಲಿ ಒಂದು ಸಂಚಲನ ಮೂಡಿದ್ದು 2008ರ ಬಳಿಕ. 2008ರಲ್ಲಿ ಅದೇ ಮೊದಲ ಬಾರಿಗೆ ಮಣಿಪಾಲ ಕೆರೆಯನ್ನು ಅದ್ಭುತವಾದ ಪ್ರವಾಸಿ ತಾಣವಾಗಿ, ಜೀವವೈವಿಧ್ಯತೆಯ ಆಗರವಾಗಿ ರೂಪಿಸಬಹುದು ಎಂಬ ಕಲ್ಪನೆ ಗರಿಗೆದರಿತ್ತು. ಆ ಬೆಳವಣಿಗೆಗೆ ಒಂದು ಸಣ್ಣ ಬೀಜವಾಗಿದ್ದು ಅಲ್ಲಿ ನಡೆದ ಜೋಡುಕರೆ ಕಂಬಳ.

Advertisement

1978ರಲ್ಲೇ ಕಂಬಳ ವೈಭವ!
1960ರ ಆಸುಪಾಸಿನಲ್ಲಿ ಮಣ್ಣಪಳ್ಳದಿಂದ ಆವೆ ಮಣ್ಣನ್ನು ಹೆಂಚಿನ ಕಾರ್ಖಾನೆಗಾಗಿ ತೆಗೆಯಲು ಆರಂಭಿಸಿದ ಬಳಿಕ ಅದು ದೊಡ್ಡ ಕೆರೆಯಾಯಿತು. 1970ರ ಮಧ್ಯ ಭಾಗದಲ್ಲಿ ಕರಾವಳಿಯಲ್ಲಿ ಆಧುನಿಕ ಜೋಡುಕರೆ ಕಂಬಳಗಳು ವಿಜೃಂಭಿಸುವ ಹೊತ್ತಿಗೆ ಮಣಿಪಾಲದಲ್ಲೂ ಕಂಬಳದ ವೈಭವ ಗರಿ ಗೆದರಿತ್ತು. ಮಣಿಪಾಲದ ಹುಡ್ಕೋ ಕಾಲನಿಯ ಒಂದು ಭಾಗದಲ್ಲಿ ಮಣ್ಣಪಳ್ಳ ಕೆರೆ ಪಕ್ಕದಲ್ಲೇ ಕೃತಕ ಜೋಡುಕರೆಗಳನ್ನು ನಿರ್ಮಿಸಿ ಕಂಬಳ ನಡೆಸ ಲಾಗುತ್ತಿತ್ತು. ಮಾಧವ-ಅನಂತ ಎಂಬ ಜೋಡುಕರೆ ಕಂಬಳ ಕೆಲವು ವರ್ಷ ನಡೆದು 1978ರಲ್ಲಿ ಸ್ಥಗಿತಗೊಂಡಿತು. ಅದು ಮತ್ತೆ ನಡೆದದ್ದು 2008ರಲ್ಲಿ.


1978ರಲ್ಲಿ ಕಂಬಳ ಹೇಗಿತ್ತು ನೋಡಿ. ಅಪರೂಪದ ಚಿತ್ರವನ್ನು ಸಂಗ್ರಹಿಸಿ ಇಟ್ಟವರು ಡಾ| ಕಿರಣ್‌ ಆಚಾರ್ಯ.


2008ರಲ್ಲಿ ನಡೆದ ಕಂಬಳದ ಆಕರ್ಷಕ ನೋಟ


2008ರ ಕಂಬಳದಲ್ಲಿ ಭಾಗವಹಿಸಿದ್ದ ಗಣ್ಯರು

2008ರ ಕಂಬಳ
2008ರಲ್ಲಿ ಈಗಿನ ಮಣ್ಣಪಳ್ಳದ ಅನಂತ ನಗರ ಭಾಗದಲ್ಲಿ ನಡೆದ ಕಂಬಳದಲ್ಲಿ 65 ಜೋಡಿ ಕೋಣಗಳು ಭಾಗವಹಿಸಿದ್ದವು. ಚಿತ್ರನಟ ರವಿಚಂದ್ರನ್‌, ರಾಜ್ಯ ಸರಕಾರದ ಅಂದಿನ ಪ್ರಧಾನ ಕಾರ್ಯದರ್ಶಿ ಸುಧಾಕರ ರಾವ್‌, ಮಿಜಾರು ಗುತ್ತು ಆನಂದ ಆಳ್ವರು, ಎಂಎಂಎನ್‌ಎಲ್‌ನ ಕಾರ್ಯ ನಿರ್ವಾಹಕ ಅಧ್ಯಕ್ಷ ಸತೀಶ್‌ ಯು. ಪೈ, ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಸಂಧ್ಯಾ ಎಸ್‌. ಪೈ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು. ಅಂದಿನ ಕಂಬಳ್ಳೋತ್ಸವವನ್ನು ಹಲವಾರು ವಿದೇಶಿ ವಿದ್ಯಾರ್ಥಿಗಳು ಮತ್ತು ಪೋಷಕರು ಕೂಡ ವೀಕ್ಷಿಸಿದ್ದರು. ಸ್ಥಳೀಯರಿಗೆ ಇದೊಂದು ಹಬ್ಬವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.