Advertisement

Manipal: ಬಾಲ್ಯದಿಂದಲೇ ಉತ್ತಮ ಸಂಸ್ಕಾರ ನೀಡಿದ್ರೆ ಉನ್ನತ ಸ್ಥಾನ ಲಭ್ಯ: ಡಾ| ಸುಧಾಕರ ಶೆಟ್ಟಿ

03:28 AM Dec 14, 2024 | Team Udayavani |

ಮಣಿಪಾಲ: ಸಮಾಜದ ಆಸ್ತಿಯನ್ನಾಗಿಸಲು ಪೋಷಕರು ತಮ್ಮ ಮಕ್ಕಳನ್ನು ಜತನದಿಂದ ಕಾಪಾಡ ಬೇಕು. ಬಾಲ್ಯದಿಂದಲೇ ಉತ್ತಮ ಸಂಸ್ಕಾರ ನೀಡಿದರೆ ಅವರು ಉನ್ನತ ಸ್ಥಾನಕ್ಕೇರುವುದು ಖಚಿತ ಎಂದು ಅಜೆಕಾರು ಪದ್ಮಗೋಪಾಲ ಎಜುಕೇಶನ್‌ ಟ್ರಸ್ಟ್‌ ಸ್ಥಾಪಕಾಧ್ಯಕ್ಷ ಡಾ| ಸುಧಾಕರ ಶೆಟ್ಟಿ ಹೇಳಿದರು.

Advertisement

ಮಕ್ಕಳ ದಿನಾಚರಣೆ ಅಂಗವಾಗಿ ಉದಯವಾಣಿಯು ಏರ್ಪಡಿಸಿದ್ದ ಮಕ್ಕಳ ಫೋಟೋ ಸ್ಪರ್ಧೆ “ಚಿಗುರು ಚಿತ್ರ – 2024′ ವಿಜೇತರಿಗೆ ಶುಕ್ರವಾರ ಮಣಿಪಾಲದಲ್ಲಿನ ಪ್ರಧಾನ ಕಚೇರಿಯಲ್ಲಿ ನಡೆದ ಬಹುಮಾನ ವಿತರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ ಹೆತ್ತವರು ಮೊಬೈಲ್‌ ಗೀಳಿಗೆ ಬಿದ್ದು ಮಕ್ಕಳ ಮೇಲಿನ ನಿಗಾ ಕಳೆದುಕೊಳ್ಳ ಬಾರದು. ಮಕ್ಕಳು ತಮ್ಮ ಆಸಕ್ತಿಯ ವಿಷಯದಲ್ಲಿ ಮುಂದುವರಿಯಲು ಪ್ರೋತ್ಸಾಹಿಸಬೇಕು.

ಕಾಲದ ಹೊಡೆತಕ್ಕೆ ಸಿಕ್ಕಿ ದಾರಿತಪ್ಪುವ ಸಾಧ್ಯತೆಗಳಿರುತ್ತವೆ. ಹಾಗಾಗದಂತೆ ಪೋಷಕರು ಎಚ್ಚರ ವಹಿಸಬೇಕು ಎಂದರು. ನಮ್ಮ ಯಶಸ್ಸಿನಲ್ಲಿ ತಂದೆ-ತಾಯಿಯ ಪ್ರೇರಣೆ ಅಪಾರ. ಅದರಿಂದ ನಾವು ಸಾಧಿಸಲು ಸಾಧ್ಯ. ಪೈ ಕುಟುಂಬಸ್ಥರ ಕಾಳಜಿ, ದೂರದೃಷ್ಟಿಯ ಕ್ರಮದಿಂದ ಮಣಿಪಾಲ ಹಲವು ಮಂದಿಗೆ ಶಿಕ್ಷಣ, ಜೀವನ ನೀಡಿದೆ ಎಂದು ಶ್ಲಾಘಿಸಿದರು.

ಮಣಿಪಾಲ ಮೀಡಿಯಾ ನೆಟ್‌ವರ್ಕ್‌ ಲಿ.ನ ಕಾರ್ಯನಿರ್ವಾಹಕ ಅಧ್ಯಕ್ಷ ಟಿ.ಸತೀಶ್‌ ಯು.ಪೈ ಅವರು ಅಧ್ಯಕ್ಷತೆ ವಹಿಸಿ ವಿಜೇತ ಚಿಣ್ಣರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು.

6 ಸಾವಿರಕ್ಕಿಂತಲೂ ಅಧಿಕ ಚಿತ್ರ
ಉದಯವಾಣಿ ಸಂಪಾದಕ ಅರವಿಂದ ನಾವಡ ಪ್ರಸ್ತಾವನೆಗೈದು, ಮಾಧ್ಯಮ ಲೋಕದಲ್ಲಿ ಸ್ಪರ್ಧೆಯ ಪರಿಕಲ್ಪನೆ ಇಲ್ಲದಾಗ ಆರಂಭಿಸಿದ ಸ್ಪರ್ಧೆ ಇದು. ಆರು ಸಾವಿರಕ್ಕಿಂತಲೂ ಅಧಿಕ ಚಿತ್ರಗಳು ಸ್ಪರ್ಧೆಗೆ ಬಂದಿದ್ದವು. ಇತ್ತೀಚೆಗೆ ಗ್ರಾಮೀಣ ಭಾಗದಿಂದಲೂ ಅತ್ಯಧಿಕ ಮಂದಿ ಓದುಗರು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವುದು ಅತ್ಯಂತ ಸಂತೋಷದಾಯಕವಾದ ವಿಷಯ ಎಂದರು.

Advertisement

ಉದಯವಾಣಿಯ ಮ್ಯಾಗಝಿನ್‌ ಮತ್ತು ಸ್ಪೆಷಲ್‌ ಇನೀಶಿಯೇಟಿವ್ಸ್‌ನ ಉಪಾಧ್ಯಕ್ಷ ರಾಮಚಂದ್ರ ಮಿಜಾರು ಕಾರ್ಯಕ್ರಮ ನಿರೂಪಿಸಿ, 54 ವರ್ಷಗಳಿಂದ ಓದುಗರನ್ನು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಮಾಡಿ ಉದಯವಾಣಿ ಪತ್ರಿಕೆಯು ವೇದಿಕೆ ಕಲ್ಪಿಸಿದೆ. ವಿವಿಧ ಆಯಾಮಗಳನ್ನು ದಾಟಿ ಬಂದ ಚಿಗುರುಚಿತ್ರ ಸ್ಪರ್ಧೆಯು ಅಂದಿನಿಂದ ಇಂದಿನವರೆಗೂ ಮಗು ಮತ್ತು ಮಗುವಿನ ನಗುವಿನೊಂದಿಗೆ ಸಾಕಾರಗೊಳ್ಳುತ್ತಿದೆ ಎಂದರು.

ಉಡುಪಿ ಜಿಲ್ಲಾ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರಾಧಾಕೃಷ್ಣ ಭಟ್‌ ಕೊಡವೂರು ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಉದಯವಾಣಿಯ ಸ್ಥಾನಿಕ ಸಂಪಾದಕ ಕೃಷ್ಣ ಭಟ್‌ ಅಳದಂಗಡಿ ಸ್ವಾಗತಿಸಿದರು. ಮಾನವ ಸಂಪನ್ಮೂಲ ವಿಭಾಗದ ಹಿರಿಯ ವ್ಯವಸ್ಥಾಪಕಿ ಉಷಾರಾಣಿ ಕಾಮತ್‌ ವಂದಿಸಿದರು.

ಆಯ್ಕೆಯಲ್ಲಿ ಪಾರದರ್ಶಕತೆ: ವಿನೋದ್‌ ಕುಮಾರ್‌
ಮಣಿಪಾಲ ಮೀಡಿಯಾ ನೆಟ್‌ವರ್ಕ್‌ ಲಿ.ನ ಮ್ಯಾನೇಜಿಂಗ್‌ ಡೈರೆಕ್ಟರ್‌ ಹಾಗೂ ಸಿಇಒ ವಿನೋದ್‌ ಕುಮಾರ್‌ ಮಾತನಾಡಿ, ಮಕ್ಕಳ ಪ್ರತಿಯೊಂದು ಚಿತ್ರಗಳ ಹಿಂದೆ ಉತ್ತಮ ಕಲ್ಪನೆ, ಮುಗ್ಧತೆ, ತಾಜಾತನ ಇರುತ್ತದೆ. ಛಾಯಾಚಿತ್ರ ತೆಗೆದುಕೊಳ್ಳುವ ಸಂದರ್ಭದಲ್ಲಿ ಹೆತ್ತವರ ತಾಳ್ಮೆಯನ್ನೂ ಮೆಚ್ಚಬೇಕಾಗುತ್ತದೆ. ಪಾರದರ್ಶಕತೆ ಮೂಲಕ ವಿಜೇತರ ಆಯ್ಕೆ ನಡೆದಿದ್ದು, ಇದರ ಹಿಂದೆ ತೀರ್ಪುಗಾರರ ಶ್ರಮವೂ ಅಪಾರವಾಗಿದೆ ಎಂದರು.

ವಿಜೇತರ ವಿವರ
ಪ್ರಥಮ: ಜಾಹ್ನವಿ ಸಚಿನ್‌ ಕೌಸ್ತುಭ ಚೇಳೂರು, ದ್ವಿತೀಯ: ಲ್ಯಾನ್ನಾ ರುತ್‌ ಕಾನ್ಸೆಸ್ಸೋ  ಮಂಗಳೂರು, ತೃತೀಯ: ಸಾಚಿ ಎಸ್‌.ಕಾಂಚನ್‌ ಕುಂದಾಪುರ, ಚರಿತ್‌ ಎಸ್‌.ಪ್ರಭು ಪರ್ಕಳ, ಲಿಖಿತಾ ಶೆಟ್ಟಿ ಕಾರ್ಕಳ, ಧೃತಿ ಎಚ್‌.ಆರ್‌. ಸುಳ್ಯ, ಸ್ಮಹೀ ಸಿ.ಗೌಡ ಬೆಳ್ತಂಗಡಿ, ವಿಧಾತ್ರಿ ವಿ.ಭಟ್‌ ಕಾಪು.

ʼಮಕ್ಕಳಿಗಾಗಿ ಉದಯವಾಣಿ ಪತ್ರಿಕೆ ವಿವಿಧ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳುತ್ತಿ ರುವುದು ಸಂತೋಷದ ಸಂಗತಿ. ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿಸಲು ಇಂತಹ ಸ್ಪರ್ಧೆಗಳು ನೆರವಾಗಲಿದೆ.ʼ -ಗಾಯತ್ರಿ, ಚೇಳೂರು (ಪ್ರಥಮ ಬಹುಮಾನ ವಿಜೇತ ಮಗುವಿನ ತಾಯಿ)

Advertisement

Udayavani is now on Telegram. Click here to join our channel and stay updated with the latest news.

Next