Advertisement

Manipal: ಕತ್ತು ಸೀಳಿಕೊಂಡು ಹೊಟೇಲ್‌ ಕಾರ್ಮಿಕ ಆತ್ಮಹ*ತ್ಯೆ?

12:21 AM Dec 07, 2024 | Team Udayavani |

ಮಣಿಪಾಲ: ಕುತ್ತಿಗೆ ಸೀಳಿಕೊಂಡು ರಕ್ತಸಿಕ್ತವಾದ ಮೃತದೇಹ ಮಣಿಪಾಲದ ಅನಂತ ಕಲ್ಯಾಣ ನಗರ ಮುಖ್ಯರಸ್ತೆಯ ಬದಿಯಲ್ಲಿ ಶುಕ್ರವಾರ ಬೆಳಗ್ಗೆ ಪತ್ತೆಯಾಗಿದೆ.

Advertisement

ಹೊಟೇಲ್‌ ಕಾರ್ಮಿಕರಾಗಿದ್ದ ಕಾಸರಕೋಡ ನಿವಾಸಿ ಶ್ರೀಧರ (38) ಮೃತರು. ಬಿಯರ್‌ ಬಾಟಲಿಯಿಂದ ಕತ್ತು ಸೀಳಿ ಕೊಲೆಗೈದಿರಬಹುದು ಎಂದು ಮೊದಲು ಶಂಕಿಸಲಾಗಿದ್ದು, ಅದರಂತೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಆತನೇ ಕತ್ತು ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಅದರಂತೆ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ ಎಂದು ಎಸ್‌ಪಿ ಡಾ| ಅರುಣ್‌ ಕೆ. ಅವರು ತಿಳಿಸಿದ್ದಾರೆ.

ಮಣಿಪಾಲದ ಹೊಟೇಲ್‌ವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಶ್ರೀಧರ ಸಿಂಡಿಕೇಟ್‌ ಸರ್ಕಲ್‌ ಬಳಿ ತನ್ನ ಸಹೋದ್ಯೋಗಿಗಳೊಂದಿಗೆ ವಾಸ ಮಾಡಿಕೊಂಡಿದ್ದರು. ಬೆಳಗ್ಗೆ ಬೇಗನೆ ಎದ್ದುಕೊಂಡು ಹೋಗಿದ್ದ ಅವರು ಅನಂತಕಲ್ಯಾಣ ನಗರ ಮುಖ್ಯರಸ್ತೆಯ ಬಳಿ ಬಿಯರ್‌ ಬಾಟಲಿಯಲ್ಲಿ ಕತ್ತು ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಸಾವಿನಲ್ಲಿ ಹಲವು ಅನುಮಾನ
ತನ್ನನ್ನು ತಾನು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದು ಬಲು ಅಪರೂಪದ ಪ್ರಕರಣವಾಗಿದೆ. ಕಾರ್ಮಿಕ ಬಾಟಲಿಯನ್ನು ಹಿಡಿದುಕೊಂಡು ಬಂದಿದ್ದು, ಕೈಯಲ್ಲಿ ಚೀಲವೂ ಇತ್ತು. ಆದರೆ ಚೀಲದೊಳಗೆ ಏನೂ ಇರಲಿಲ್ಲ. ಚಪ್ಪಲಿ ಚೆಲ್ಲಾಪಿಲ್ಲಿಯಾಗಿ ಸ್ಥಳದಲ್ಲಿ ಬಿದ್ದಿತ್ತು. ಕೊಯ್ದಿರುವ ಭೀಕರತೆ ಹೇಗಿತ್ತೆಂದರೆ ಕತ್ತುಸೀಳಿ ಬಂದಿತ್ತು. ಅಮಲು ಪದಾರ್ಥ ಸೇವಿಸಿ ಆತ ಕೃತ್ಯವೆಸಗಿರಬಹುದು.

ಮೃತದೇಹದ ಪರೀಕ್ಷೆಯನ್ನು ಮಣಿಪಾಲ ಕೆಎಂಸಿಯಲ್ಲಿ ನಡೆಸಲಾಯಿತು. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಬಗ್ಗೆ ಸ್ಥಳೀಯರಲ್ಲಿಯೂ ಹಲವಾರು ಅನುಮಾನಗಳಿದ್ದು, ಸೂಕ್ತ ತನಿಖೆ ನಡೆಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಶವ ಪರೀಕ್ಷೆ ಮತ್ತು ಸಾಕ್ಷಿಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಕೆ. ಅರುಣ್‌ ಸ್ಥಳಕ್ಕೆ ಭೇಟಿ ನೀಡಿ ತಿಳಿಸಿದ್ದಾರೆ. ಮಣಿಪಾಲ ಠಾಣೆಯ ವೃತ್ತ ನಿರೀಕ್ಷಕ ದೇವರಾಜ್‌ ಟಿ.ವಿ. ಸಹಿತ ಸಿಬಂದಿ ಪರಿಶೀಲನೆ ನಡೆಸಿದರು.

Advertisement

ಮೊದಲು ಕೊಲೆ; ಆನಂತರ ಆತ್ಮಹತ್ಯೆ!
ಘಟನೆ ನಡೆದ ಬಳಿಕ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಯಾರೋ ಅಪರಿಚಿತರು ಪೂರ್ವ ದ್ವೇಷದಿಂದ ಆಯುಧದಿಂದ ಕುತ್ತಿಗೆಗೆ ಚುಚ್ಚಿ ಕೊಲೆ ಮಾಡಿರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಕೊಲೆ ನಡೆಸಿದ ಬಗ್ಗೆ ಯಾವುದೇ ಕುರುಹು ಪತ್ತೆಯಾಗಿಲ್ಲ. ಅಲ್ಲದೆ ಆರೋಪಿಗಳು ಒಡಾಟ ಮಾಡಿದ ಬಗ್ಗೆಯೂ ವಿವರಗಳು ತಿಳಿದುಬಂದಿಲ್ಲ. ಅನಂತರ ತನಿಖೆ ಸಂದರ್ಭದಲ್ಲಿ ಕೊಲೆ ನಡೆದ ಆಸುಪಾಸಿನ ಸಿಸಿ ಟಿವಿಗಳನ್ನು ಪರಿಶೀಲಿಸಿದಾಗ ಮೃತ ವ್ಯಕ್ತಿಯು ಬಿಯರ್‌ ಬಾಟಲಿಯಿಂದ ತಾನೇ ಕುತ್ತಿಗೆ ಸೀಳಿಕೊಂಡಿರುವುದು ಪತ್ತೆಯಾಗಿದೆ ಎನ್ನಲಾಗಿದ್ದು, ಈ ದೃಷ್ಟಿಯಲ್ಲಿ ತನಿಖೆ ಮುಂದುವರಿದಿದೆ.

ಸಿಸಿ ಕೆಮರಾದಲ್ಲಿ ಕೃತ್ಯ ದಾಖಲು?
ರಸ್ತೆಯಲ್ಲಿ ನೆತ್ತರ ಕೋಡಿ ಹರಿದಿದ್ದು, ಮೃತದೇಹವನ್ನು ಕಂಡಾಗ ಮೇಲ್ನೋಟಕ್ಕೆ ಕೊಲೆಯಾಗಿರಬಹುದೆಂದು ಪೊಲೀಸರು ಅಂದಾಜಿಸಿದ್ದರು. ಬಳಿಕ ವಿವಿಧ ಆಯಾಮದಲ್ಲಿ ತನಿಖೆ ನಡೆಸಿದಾಗ ಆತ್ಮಹತ್ಯೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಸಿಂಡಿಕೇಟ್‌ ಸರ್ಕಲ್‌ನಿಂದ ಕಾಲ್ನಡಿಗೆಯಲ್ಲಿ ಅಗಮಿಸಿದ್ದ ಆತ ಏಕಾಏಕಿ ಕತ್ತು ಸೀಳಿಕೊಂಡಿದ್ದಾನೆ. ಈ ದೃಶ್ಯಾವಳಿಗಳು ಸ್ಥಳೀಯ ಅಂಗಡಿಯೊಂದರ ಸಿಸಿ ಕೆಮರಾದಲ್ಲಿ ದಾಖಲಾಗಿದೆ ಎನ್ನುತ್ತಾರೆ ಪೊಲೀಸರು. ಆದರೆ ತನಿಖೆಯ ದೃಷ್ಟಿಯಿಂದ ಆ ಸಿಸಿ ಟಿವಿ ದೃಶ್ಯಾವಳಿಗಳನ್ನು ಇನ್ನೂ ಬಹಿರಂಗಪಡಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next