Advertisement

 ಮಣಿಪಾಲ: ಅಂಗಡಿಗೆ ಹತ್ತಿಕೊಂಡ ಬೆಂಕಿ; ಭಾರಿ ನಷ್ಟ

06:00 AM Mar 21, 2018 | |

ಉಡುಪಿ: ಮಣಿಪಾಲ ಈಶ್ವರನಗರದ ರಸ್ತೆ ಪಕ್ಕದಲ್ಲಿನ ವೈಷ್ಣವಿ ಸಭಾಭವನಕ್ಕೆ ಹೊಂದಿಕೊಂಡಿದ್ದ ಸಪ್ತಮಿ ಕಟ್ಟಡದಲ್ಲಿದ್ದ ಅಂಗಡಿಗೆ ಮಂಗಳವಾರ ಬೆಂಕಿ ಹತ್ತಿಕೊಂಡ ಪರಿಣಾಮ ಸೊತ್ತುಗಳೆಲ್ಲ ಸುಟ್ಟು ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಬೆಳಗ್ಗೆ 11 ಗಂಟೆಯ ಸುಮಾರಿಗೆ ಕಟ್ಟಡದಲ್ಲಿದ್ದ ಪೈಂಟ್‌ ದಾಸ್ತಾನಿನ ಅಂಗಡಿಯಲ್ಲಿ ಕಾಣಿಸಿಕೊಂಡ ಬೆಂಕಿ ಪಕ್ಕದಲ್ಲಿದ್ದ ಅಂಗಡಿಗಳಿಗೂ ವ್ಯಾಪಿಸಿತ್ತು. ಅಕ್ಕಪಕ್ಕದಲ್ಲಿದ್ದ ಜನರಲ್‌ ಸ್ಟೋರ್‌, ತರಕಾರಿ ಅಂಗಡಿಗಳಿಗೆ ತಗಲಿದ ಬೆಂಕಿಯನ್ನು ನಂದಿಸಲಾಯಿತು. ಆದರೆ ಪೈಂಟ್‌ ಅಂಗಡಿಯಲ್ಲಿ ಬೆಂಕಿ ಮತ್ತಷ್ಟು ಹೆಚ್ಚುತ್ತಾ ಹೋಗಿತ್ತು. ಬೆಂಕಿ ಕಾಣಿಸಿಕೊಂಡ ಕೂಡಲೇ ನಂದಿಸಲು ಪ್ರಯತ್ನಪಟ್ಟರೂ, ಅದಾಗಲೇ ಬೆಂಕಿ ವ್ಯಾಪಿಸಿ ಬಿಟ್ಟಿತ್ತು. ಆನಂತರ ಅಲ್ಲಿದ್ದ ಜನರು ದೂರ ಸರಿದು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. 

Advertisement

ತಳಮಹಡಿ ಸೇರಿ 5 ಅಂತಸ್ತಿನ ಕಟ್ಟಡ ಇದಾಗಿದ್ದು, ತಳಮಹಡಿ ಮತ್ತು ಪ್ರಥಮ ಮಹಡಿಯಲ್ಲಿ ಅಂಗಡಿ ಕೋಣೆಗಳಿದೆ. ಇನ್ನುಳಿದ ಮೂರು ಅಂತಸ್ತಿನಲ್ಲಿ ವಸತಿ ಕೋಣೆಗಳಿದೆ. ಅಂಗಡಿ ಕೋಣೆಗೆ ಹಬ್ಬಿದ್ದ ಬೆಂಕಿಯ ಹೊಗೆಯು ಮೇಲಕ್ಕೆ ವ್ಯಾಪಿಸಿ ವಸತಿಗೃಹದ ಕೋಣೆಗಳು ಕಪ್ಪಾಗಿದೆ. ಕಿಟಕಿ, ಬಾಗಿಲು, ಬಟ್ಟೆಬರೆ, ಸೊತ್ತುಗಳಿಗೆಲ್ಲ ಹೊಗೆ ಆವರಿಸಿಕೊಂಡಿತ್ತು. . 

ಅಗ್ನಿಶಾಮಕ ವಾಹನ, ಟ್ಯಾಂಕರ್‌ ನೀರು
ಉಡುಪಿಯ ಕಿನ್ನಿಮೂಲ್ಕಿಯಿಂದ ಅಗ್ನಿಶಾಮಕ ವಾಹನ ಮಣಿಪಾಲಕ್ಕೆ ತೆರಳಬೇಕಿತ್ತು. ಈ ಕಾರಣದಿಂದ ಸಾಮಾನ್ಯವಾಗಿ ವಾಹನ ಅಲ್ಲಿಗೆ ತೆರಳಲು ಕೆಲ ಸಮಯ ತೆಗೆದುಕೊಂಡಿತ್ತು. ಅಗ್ನಿಶಾಮಕ ವಾಹನ ಬರುವಾಗ ತಡವಾಯ್ತು ಎಂದು ಸ್ಥಳದಲ್ಲಿದ್ದ ಕೆಲವರು ಹೇಳುತ್ತಿದ್ದರು. ಅಗ್ನಿಶಾಮಕ ದಳದ ವಿವಿಧೆಡೆಗಳ ಮೂರು ವಾಹನಗಳ ಜೊತೆಗೆ ನೀರಿನ ನಾಲ್ಕೈದು ಟ್ಯಾಂಕರ್‌ಗಳಲ್ಲಿ ನೀರನ್ನು ಪೈಪುಗಳ ಮೂಲಕ ಚಿಮುಕಿಸಲಾಯಿತು. ಮೂರು ಗಂಟೆಗಳ  ಕಾರ್ಯಾಚರಣೆಯ ಅನಂತರ ಬೆಂಕಿ ಸಂಪೂರ್ಣ ಹತೋಟಿಗೆ ಬಂದಿತ್ತು. 

ಪೈಂಟ್‌ ರಾಸಾಯನಿಕಯುಕ್ತವಾದ ಕಾರಣ ಬೆಂಕಿಯು ಬಹುಬೇಗನೆ ಅಂಗಡಿಯುದ್ದಕ್ಕೂ ವ್ಯಾಪಿಸಿತ್ತು. ಸಂಚಾರ ವ್ಯತ್ಯಯ ಘಟನೆಯು ರಸ್ತೆ ಬದಿಯಲ್ಲಿ ನಡೆದಿದ್ದ ಕಾರಣ ಅನಾಹುತವನ್ನು ನೋಡಲು ಗಂಟೆಗಟ್ಟಲೆ ಕಾಲ ಜನ ರಸ್ತೆ ಬದಿಯಲ್ಲಿಯೇ ವೀಕ್ಷಿಸುತ್ತಿದ್ದರು. ಸಾಗುತ್ತಿದ್ದ ವಾಹನಗಳು ಕೂಡ ನಿಧಾನವಾಗಿಯೇ ಹೋಗುತ್ತಿದ್ದವು. ಈ ವೇಳೆ ರಸ್ತೆ ಸಂಚಾರದಲ್ಲಿಯೂ ಕೆಲಕಾಲ ವ್ಯತ್ಯಯ ಉಂಟಾಯಿತು.

ಅಗ್ನಿಶಾಮಕ ಠಾಣೆ ಬೇಡಿಕೆ ಈಡೇರಿಲ್ಲ
ಕೈಗಾರಿಕಾ ಪ್ರದೇಶ, ಬಹುಮಹಡಿ ಕಟ್ಟಡಗಳು, ಜನವಸತಿ ಪ್ರದೇಶವಾಗಿ ಮಣಿಪಾಲ ಅಭಿವೃದ್ಧಿಯಾಗುತ್ತಲೇ ಇದೆ. ಮಣಿಪಾಲದಲ್ಲಿ ಅಗ್ನಿಶಾಮಕ ಠಾಣೆ ತೆರೆಯಲು ಜಾಗವನ್ನು ಮೀಸಲಿರಿಸಿ ಮಂಜೂರಾತಿ ಆಗಿದ್ದರೂ, ಇನ್ನೂ ಯೋಜನೆ ಕಾರ್ಯಗತವಾಗಿಲ್ಲ. ಇದರಿಂದಾಗಿ ಮಣಿಪಾಲದಲ್ಲಿ ಬೆಂಕಿ ಅನಾಹುತವಾದರೆ ಹೆಚ್ಚಿನ ನಷ್ಟ ಆಗುತ್ತಲಿದೆ ಎನ್ನುವ ಆರೋಪ ಜನರಿಂದ ಕೇಳಿಬಂದಿತು.  

Advertisement
Advertisement

Udayavani is now on Telegram. Click here to join our channel and stay updated with the latest news.

Next