ಮಣಿಪಾಲ: ಕುಡಿದ ಮತ್ತಿನಲ್ಲಿ ಬಿಲ್ ನೀಡದೆ ರೆಸ್ಟೋರೆಂಟ್ ಸಿಬಂದಿಗೆ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ ಘಟನೆ ಮಣಿಪಾಲದಲ್ಲಿ ನಡೆದಿದೆ.
ಮಣಿಪಾಲದ ಲಕ್ಷ್ಮೀಂದ್ರ ನಗರದಲ್ಲಿರುವ ರೆಸ್ಟೋರೆಂಟ್‌ವೊಂದಕ್ಕೆ ಆರೋಪಿಗಳಾದ ಶಾಹಿಮ್, ರಾಹುಲ್ ಮತ್ತು ಇತರ 6 ಜನ ಹುಡುಗರು ಬಂದಿದ್ದು, ಫುಡ್ ಮತ್ತು ಡ್ರಿಂಕ್ಸ್ ಆರ್ಡರ್ ಮಾಡಿ ಅನಂತರ ಬಿಲ್ ಕೊಡುವುದಿಲ್ಲ ಎಂದು ರೆಸ್ಟೋರೆಂಟ್‌ನ ಬಿಲ್ ಆಪರೇಟರ್ ರಕ್ಷಿತ್ ಶೆಟ್ಟಿ ಅವರೊಂದಿಗೆ ಗಲಾಟೆ ಮಾಡಿದ್ದರು.
ಬಿಲ್ ಕೊಡಬೇಕೆಂದು ಹೇಳಿದಾಗ ಆರೋಪಿಗಳೆಲ್ಲರೂ ರಕ್ಷಿತ್ ಶೆಟ್ಟಿ ಹಾಗೂ ಸಿಬಂದಿಯನ್ನು ಹೊಡೆದು, ಕಾಲಿನಿಂದ ತುಳಿದು ಜೀವ ಬೆದರಿಕೆ ಹಾಕಿದ್ದಾರೆ. ಮರುದಿನ ರೆಸ್ಟೋರೆಂಟ್‌ನ ಫೋನ್‌ಗೆ ಕರೆ ಮಾಡಿದ ಆರೋಪಿ ಶಾಹಿಮ್ “ನಾವು ನಿನ್ನೆ ಹೊಟೇಲ್‌ನಲ್ಲಿ ಗಲಾಟೆ ಮಾಡಿದವರು. ನಿಮ್ಮ ಹೊಟೇಲ್‌ನವರನ್ನು ಬಿಡುವುದಿಲ್ಲ’ ಎಂದು ಬೆದರಿಕೆ ಹಾಕಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.