Advertisement
ಉಡುಪಿ: ಕೇರಳದಿಂದ ಬರುವವರ ಪೈಕಿ ನಿಫಾ ಸೋಂಕಿತರಿದ್ದಲ್ಲಿ ಅವರಿಗೆ ಸಕಾಲದಲ್ಲಿ ಚಿಕಿತ್ಸೆ (ಸಪೋರ್ಟಿವ್ ಕೇರ್) ನೀಡಲು ಮತ್ತು ಜನರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದು ಎಂಬ ಉದ್ದೇಶದಿಂದ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಸ್ಕ್ರೀನಿಂಗ್ ಸೆಂಟರ್, ಹೆಲ್ಪ್ ಡೆಸ್ಕ್ ಸಹಿತವಾದ ‘ಸಿಂಗಲ್ ವಿಂಡೋ ವ್ಯವಸ್ಥೆ’ಯನ್ನು ಆರಂಭಿಸಲು ನಿರ್ಧರಿಸಲಾಗಿದೆ. ಸಹಾಯವಾಣಿ (0820-2922761) ಈಗಾಗಲೇ ಕಾರ್ಯಾಚರಿಸುತ್ತಿದ್ದು ಅದಕ್ಕೆ ಅನೇಕ ಮಂದಿ ಕರೆ ಮಾಡಿ ವಿಚಾರಿಸುತ್ತಿದ್ದಾರೆ. ಮೇ 25ರಂದು ಸಿಂಗಲ್ ವಿಂಡೋ ವ್ಯವಸ್ಥೆ ಕಾರ್ಯಾರಂಭವಾಗುವ ನಿರೀಕ್ಷೆ ಇದೆ.
ಮಣಿಪಾಲ ಆಸ್ಪತ್ರೆಯಲ್ಲಿ ಈಗಾಗಲೇ 2018ರ ಮೇ ತಿಂಗಳಲ್ಲಿ ಕೇರಳದ ಕಲ್ಲಿಕೋಟೆ ಮತ್ತು ಇತರ ಪ್ರದೇಶಗಳಲ್ಲಿ ಆರೋಗ್ಯ ಸೇವಾ ಸೌಕರ್ಯಗಳಿಗೆ ಭೇಟಿ ಮಾಡಿದ ರೋಗಿಗಳು ತತ್ ಕ್ಷಣವೇ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವಿಶೇಷ ಸಹಾಯ ಕೇಂದ್ರಕ್ಕೆ ಭೇಟಿ ನೀಡಲು ಸೂಚಿಸಿ ಫಲಕ ಅಳವಡಿಸಲಾಗಿದೆ. ಕೇರಳದಿಂದ ಬರುವರಲ್ಲಿ ಬಹುಪಾಲು ಮಂದಿ ರೈಲಿನಲ್ಲಿಯೇ ಆಗಮಿಸುವುದರಿಂದ ಇದೇ ರೀತಿಯ ಫಲಕವನ್ನು ಉಡುಪಿ ರೈಲು ನಿಲ್ದಾಣದಲ್ಲಿಯೂ ಅಳವಡಿಸಲು ನಿರ್ಧರಿಸಲಾಗಿದೆ. ಈ ಹಿಂದೆ ಎಚ್1ಎನ್1 ಪ್ರಕರಣಗಳು ಉಂಟಾದಾಗಲೂ ಮಣಿಪಾಲದ ಸ್ಪೆಷಲ್ ಐಸೊಲೇಷನ್ ವಾರ್ಡ್‌ಗಳಲ್ಲಿ ಚಿಕಿತ್ಸೆ ನೀಡಲಾಗಿತ್ತು.
Related Articles
ಅತ್ಯಂತ ಅಪರೂಪದ ವೈರಸ್ ಕಾಯಿಲೆ ಇದಾಗಿರುವುದರಿಂದ ಇದಕ್ಕೆ ಪೂರ್ಣ ಪರಿಣಾಮಕಾರಿ ಔಷಧ ಇಲ್ಲ. ಸದ್ಯ ರಿಬಾವೈರಿನ್ ಮಾತ್ರೆ ಮಾತ್ರ ಇದೆ. ಆದರೆ ಇದು ಶೇ. 100ರಷ್ಟು ಪರಿಣಾಮಕಾರಿಯಲ್ಲ. ನಿರ್ದಿಷ್ಟವಾದ ಚಿಕಿತ್ಸೆ ಇಲ್ಲವಾದರೂ ಸೋಂಕು ಪೀಡಿತರಿಗೆ ನೀಡುವ ಸಪೋರ್ಟಿವ್ ಕೇರ್ ಮಾತ್ರವೇ ಮುಖ್ಯ ಚಿಕಿತ್ಸೆ ಎಂದು ಪರಿಗಣಿಸಲ್ಪಡುತ್ತದೆ. ರಕ್ತದೊತ್ತಡ, ಉಸಿರಾಟ ನಿಯಂತ್ರಣ ಮೊದಲಾದವು ಸಪೋರ್ಟಿವ್ ಕೇರ್ ನಲ್ಲಿ ಸೇರಿವೆ ಎಂದು ಡಾ| ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ.
Advertisement
ಕೇರಳದಲ್ಲಿ ಮುಂದುವರಿದ ಮಣಿಪಾಲ ತಂಡದ ಸೇವೆನಿಫಾ ವೈರಸನ್ನು ಪತ್ತೆಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಮಣಿಪಾಲದ ‘ಮಣಿಪಾಲ್ ಸೆಂಟರ್ ಫಾರ್ ವೈರಸ್ ರಿಸರ್ಚ್’ (ಎಂಸಿವಿಆರ್) ಮುಖ್ಯಸ್ಥ ಡಾ| ಅರುಣ್ ಕುಮಾರ್ ನೇತೃತ್ವದ ತಂಡ ಮೇ 24ರಂದು ಕೂಡ ಕಲ್ಲಿಕೋಟೆಯಲ್ಲಿ ಮಹತ್ವದ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿತು. ಡಾ| ಅರುಣ್ ಜತೆ 6 ಮಂದಿ ತಜ್ಞ ಸಿಬಂದಿ ಇದ್ದಾರೆ. ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ಮಣಿಪಾಲದ ಎಂ.ಸಿ.ವಿ.ಆರ್.ಗೆ ಕಳುಹಿಸಲಾಗಿದ್ದ ಮಾದರಿಗಳಲ್ಲಿ 14 ಪಾಸಿಟಿವ್ ಆಗಿದ್ದು ಇದರಲ್ಲಿ ಇದುವರೆಗೆ 11 ಮಂದಿ ಮೃತಪಟ್ಟಿದ್ದಾರೆ. ಕೇರಳದ ಕಲ್ಲಿಕೋಟೆ ಮೆಡಿಕಲ್ ಕಾಲೇಜಿನಲ್ಲಿ ಪ್ರಮುಖವಾದ ಚಿಕಿತ್ಸಾ ಘಟಕ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿನ ಇತರ ಕೆಲವೊಂದು ಖಾಸಗಿ ಆಸ್ಪತ್ರೆಗಳಲ್ಲಿಯೂ ನಿಫಾ ಸೋಂಕಿತರ ಮೇಲೆ ನಿಗಾ ಇಡಲಾಗುತ್ತಿದೆ. ಇದುವರೆಗೂ ರೋಗ ಸಾಮುದಾಯಿಕವಾಗಿ ಹರಡಿಲ್ಲ. ಒಂದೇ ಕುಟಂಬದವರು ಹೊರತುಪಡಿಸಿದರೆ ಅನಂತರ ಆಸ್ಪತ್ರೆಯಲ್ಲಿ ಪಕ್ಕದ ಬೆಡ್ ನಲ್ಲಿದ್ದವರಿಗೆ, ದಾದಿಗೆ ಹರಡಿತ್ತು. ಆತಂಕ ಪಡಬೇಕಾಗಿಲ್ಲ. ಈಗ ಪ್ರತ್ಯೇಕ ವಾರ್ಡ್‌ಗಳಲ್ಲಿಯೇ ಚಿಕಿತ್ಸೆ ನಡೆಯುತ್ತಿದೆ ಎಂದು ಡಾ| ಅರುಣ್ ತಿಳಿಸಿದ್ದಾರೆ. ಮೂಲ ಪತ್ತೆಗೆ ಬಹಳ ಸಮಯ ಬೇಕು
ಕೇರಳದಲ್ಲಿ ಮೊದಲು ಸೋಂಕು ಹೇಗೆ ಉಂಟಾಯಿತು ಎಂಬುದರ ಬಗ್ಗೆ ಅಧ್ಯಯನ ಪೂರ್ಣಗೊಳ್ಳಲು ಬಹಳಷ್ಟು ಸಮಯ ಬೇಕು. ಈ ವೈರಸ್ ಎಷ್ಟು ಸಮಯಗಳ ಕಾಲ ಜೀವಂತ ಇರುತ್ತವೆ ಎಂಬುದರ ಕುರಿತು ಕೂಡ ಸಂಶೋಧನೆಗಳು ನಡೆಯುತ್ತಲೇ ಇವೆ. ಇದಕ್ಕೆ ವ್ಯಾಕ್ಸಿನ್ ಕೂಡ ಸದ್ಯಕ್ಕೆ ಇಲ್ಲ. ಸೂಕ್ತ ಮುನ್ನೆಚ್ಚರಿಕೆಯಿಂದ ನಿಯಂತ್ರಣಕ್ಕೆ ತರಬಹುದು.
– ಡಾ| ಅರುಣ್ ಕುಮಾರ್