Advertisement

ಮಣಿಪಾಲ: ಹಲವೆಡೆ ಪಕ್ಷಿಗಳ ಆವಾಸಸ್ಥಾನಕ್ಕೆ ಕುತ್ತು; ಪಕ್ಷಿಗಳ ಸಂಖ್ಯೆ ಇಳಿಮುಖ

06:36 PM Feb 20, 2023 | Team Udayavani |

ಮಣಿಪಾಲ: ಪಕ್ಷಿ, ಚಿಟ್ಟೆ, ಜೇನು ನೋಣಗಳು ಪರಿಸರ ವ್ಯವಸ್ಥೆಯ ಸಮತೋಲನದ ಬಹುಮುಖ್ಯ ಭಾಗವಾಗಿವೆ. ಇಂತಹ ಜೀವ ಸಂಕುಲ ಉಳಿಯದಿದ್ದರೆ ಭವಿಷ್ಯದಲ್ಲಿ ಮನುಷ್ಯನಿಗೆ ಆಪತ್ತಿದೆ ಎಂಬುದು ಪರಿಸರ ತಜ್ಞರ ಅಂಬೊಣ. ಏಳೆಂಟು ವರ್ಷಗಳ ಹಿಂದೆ ಮಣಿಪಾಲ ಸುತ್ತಮುತ್ತಲ ಪರಿಸರಗಳಲ್ಲಿ ಕಾಣಸಿಗುತ್ತಿದ್ದ ಪಕ್ಷಿಗಳಿಂದು ಕಣ್ಮರೆಯಾಗಿವೆ.

Advertisement

ಇದರಿಂದ ಜೀವ ವೈವಿಧ್ಯತೆ ಆತಂಕವೂ ಎದುರಾಗುತ್ತಿದೆ. ಇಲ್ಲಿನ ಪಕ್ಷಿಗಳ ಆವಾಸಸ್ಥಾನಕ್ಕೆ ಕುತ್ತು ಬರುತ್ತಿದ್ದು, ಪ್ರತೀ ವರ್ಷ ಕೆಲವು ಪಕ್ಷಿ ಪ್ರಭೇದಗಳು ಕಡಿಮೆ ಸಂಖ್ಯೆಯಲ್ಲಿ ಪತ್ತೆಯಾಗುತ್ತಿರುವುದನ್ನು ಮಣಿಪಾಲ ಬರ್ಡರ್ಸ್‌ ಕ್ಲಬ್‌ ಸದಸ್ಯರು ಗುರುತಿಸಿದ್ದಾರೆ.

ಮಣಿಪಾಲ ಪರಿಸರದಲ್ಲಿ ಏಷ್ಯನ್‌ ಫೇರಿ ಬ್ಲೂಬರ್ಡ್‌, ಮಲಬಾರ್‌ ಗ್ರೇ ಹಾರ್ನ್ಬಿಲ್‌, ಮಲಬಾರ್‌ ಪೈಡ್‌ ಹಾರ್ನ್ಬಿಲ್ , ವರ್ಡಿಟರ್‌ ಫ್ಲೈಕ್ಯಾಚರ್‌, ವೈಟ್‌ ಬೆಲ್ಲಿಡ್‌ ಸೀ ಈಗಲ್‌ , ಕ್ರೆಸ್ಟೆಡ್‌ ಹಾಕ್‌ ಈಗಲ್ , ಪರಿವಾಳ, ಲಿಟಲ್‌ ರಿಂಗ್ಡ್ ಪ್ರೋವ್‌ ಇಲ್ಲಿ ಕಾಣ ಸಿಗುವ ಪ್ರಮುಖ ಪಕ್ಷಿಗಳು. ಕ್ಲಬ್‌ನಿಂದ ಇತ್ತೀಚೆಗೆ ನಡೆಸಿದ ಪಕ್ಷಿ ವೀಕ್ಷಣೆಯಲ್ಲಿ 131 ಪ್ರಭೇದಗಳನ್ನು ಗಳನ್ನು ಗುರುತಿಸಲಾಗಿದ್ದು, ಪಕ್ಷಿಗಳ ಆವಾಸ್ಥಾನದ ನಾಶವಾಗುತ್ತಿರುವುದು ಇದಕ್ಕೆ ಕಾರಣ ಎಂಬುದನ್ನು ಸಮಗ್ರವಾಗಿ ಅವಲೋಕಿಸಲಾಗಿದೆ.

110 ಪಕ್ಷಿಗಳಿಗೆ ಆರೈಕೆ
ಮಣಿಪಾಲ ಬರ್ಡರ್ಸ್‌ ಕ್ಲಬ್‌ ಕಳೆದ 12 ವರ್ಷಗಳಿಂದ ಪಕ್ಷಿ ವೀಕ್ಷಣೆ, ಸಂರಕ್ಷಣೆ ಜಾಗೃತಿಯಲ್ಲಿ ತೊಡಗಿಸಿಕೊಂಡಿದೆ. 500ಕ್ಕೂ ಅಧಿಕ ಮಂದಿ ಸದಸ್ಯರಿದ್ದಾರೆ. ಎರಡು ವರ್ಷಗಳ ಹಿಂದೆ ಮಣಿಪಾಲ ಬರ್ಡಿಂಗ್‌ ಕನ್ಸರ್ವೇಶನ್‌ ಟ್ರಸ್ಟ್‌ ಸ್ಥಾಪಿಸಲಾಗಿದ್ದು, ಮಾಹೆ, ಕಸ್ತೂರ್ಬಾ ಆಸ್ಪತ್ರೆ ವಿಶೇಷ ಸಹಕಾರ ನೀಡುತ್ತಿದೆ. ಕಳೆದ ಏಳೆಂಟು ವರ್ಷಗಳಲ್ಲಿ ಕಟ್ಟಡಗಳ ಕಿಟಕಿ ಗಾಜಿಗೆ ಬಡಿದು ಗಾಯಗೊಂಡ 110 ಪಕ್ಷಿಗಳನ್ನು ರಕ್ಷಣೆ ಮಾಡಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಪ್ರತೀ ರವಿವಾರ ಬೆಳಗ್ಗೆ ಎಂಐಟಿ ರಿಕ್ಷಾ ನಿಲ್ದಾಣ ಬಳಿ ಸದಸ್ಯ ರೆಲ್ಲರೂ ಒಟ್ಟಾಗಿ ಪಕ್ಷಿ ವೀಕ್ಷಣೆಗೆ ಹೊರಡುತ್ತಾರೆ. ಸಣ್ಣ ಮಕ್ಕಳು ಪಕ್ಷಿ ವೀಕ್ಷಣೆಗೆ ಪ್ರಭಾವಿತರಾಗಿದ್ದು, ಪ್ರತೀವಾರ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಆಸಕ್ತ ಸಾರ್ವಜನಿಕರು ಇವರ ಜತೆ ಸೇರಿಕೊಳ್ಳಬಹುದು.

ಪಕ್ಷಿಗಳ ಆಕರ್ಷಣೆ
ಮಣಿಪಾಲದ ಹೃದಯ ಭಾಗ, ಎಂಡ್‌ ಪಾಯಿಂಟ್‌, ಸರಳೇಬೆಟ್ಟು, ಹೆರ್ಗ, ಗೋಳಿಕಟ್ಟೆ, ಶೆಟ್ಟಿಬೆಟ್ಟು, ಈಶ್ವರನಗರ, ದಶರಥ ನಗರ, ಶಾಂತಿ ನಗರ, ಮಣ್ಣಪಳ್ಳ ಕೆರೆ ಪರಿಸರದಲ್ಲಿ ಎಲ್ಲ ವಿಧದ ಪಕ್ಷಿಗಳು ಹೆಚ್ಚಿವೆ. ಮಾಹೆ ಕ್ಯಾಂಪಸ್‌ನಲ್ಲಿರುವ ಮರಗಳೇ ಸಾವಿರಾರು ಪಕ್ಷಿಗಳ ಆವಾಸ ಸ್ಥಾನವಾಗಿರುವುದು ವಿಶೇಷ. ಈ ಪರಿಸರದಲ್ಲಿ ಹಿಂದಿನಿಂದಲೂ ಸ್ಥಳೀಯ ಚೆರ್ರಿ ಸಹಿತ ವಿವಿಧ ಹಣ್ಣುಗಳು, ಹೂವಿನ ಮರಗಳು ಹೆಚ್ಚಿದೆ. ಕೆರೆ ಜಲಚರಗಳು ಪಕ್ಷಿಗಳಿಗೆ ಹೆಚ್ಚಿನ ಆಕರ್ಷಣೆಯಾಗಿದೆ.

Advertisement

ಸಮಸ್ಯೆ, ಕಾರಣಗಳೇನು ?
*ಖಾಲಿ ಜಾಗಗಳಲ್ಲಿ ಸಣ್ಣ ಕಾಡುಗಳ ರೀತಿ ಮರ, ಗಿಡಗಳು ಬೆಳೆದು ಕೊಂಡಿತ್ತು. ಕೆಲವು ಕಡೆಗಳಲ್ಲಿ ಕಟ್ಟಡವನ್ನು ನಿರ್ಮಿಸದಿದ್ದರೂ ಜಾಗದಲ್ಲಿರುವ ಮರ ಗಿಡಗಳನ್ನು ತೆರವುಗೊಳಿಸಿ ಪ್ರದೇಶಗಳನ್ನು ಸಮತಟ್ಟುಗೊಳಿಸುವ ಕೆಲಸ ನಡೆಯುತ್ತಿದೆ.
*ಕೆಲವು ಕಡೆಗಳಲ್ಲಿ ಮಳೆಗಾಲದಲ್ಲಿ ಮರಗಳು ಆಪಾಯವಾಗುತ್ತದೆ ಎಂದು ಮನೆಯ ಸುತ್ತಮುತ್ತ ಇರುವ ಮರಗಳನ್ನು ತೆರವುಗೊಳಿಸುವುದು ಹೆಚ್ಚುತ್ತಿದೆ.
*ಹಸುರು ವಾತಾವರಣ ಇದ್ದರೂ ಹೂ, ಹಣ್ಣಿನ ಸ್ಥಳೀಯ ಮರಗಳಿಗೆ ಆದ್ಯತೆ ನೀಡುತ್ತಿಲ್ಲ
*ಹೊರಗಿನ ವಿವಿಧ ಕಾಮಗಾರಿಗಳಿಗೆ ಮಣ್ಣಿನ ಅಗತ್ಯಕ್ಕಾಗಿ ಹಲವೆಡೆ ಮರಗಿಡಗಳನ್ನು ತೆರವುಗೊಳಿಸಿ ಮಣ್ಣನ್ನು ತೆಗೆಯಲಾಗುತ್ತಿದೆ.

ಹಸುರು ಪರಿಸರ ಉಳಿಸುವುದು ಮೊದಲ ಆದ್ಯತೆ ಇತ್ತೀಚೆಗೆ ಕೆಲ ವರ್ಷಗಳಲ್ಲಿ ಮಣಿಪಾಲದ ಕೆಲವು ಕಡೆಗಳಲ್ಲಿ ಪಕ್ಷಿಗಳ ಸಂತತಿಯ ಆವಾಸಸ್ಥಾನಗಳಿಗೆ ಕುತ್ತು ಬರುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ವರ್ಷದಿಂದ ವರ್ಷಕ್ಕೆ ಪಕ್ಷಿ ಪ್ರಭೇದಗಳು ಕಣ್ಮರೆಯಾಗುತ್ತಿರುವುದು ಆತಂಕಕಾರಿ. ಇಲ್ಲಿನ ಹಸುರು ಪರಿಸರ ವ್ಯವಸ್ಥೆ ಉಳಿಸಿಕೊಳ್ಳುವುದು ಮೊದಲ ಆದ್ಯತೆಯಾಗಬೇಕಿದೆ. ಸ್ಥಳೀಯ ಜಾತಿಯ ಗಿಡ, ಮರಗಳನ್ನು ಖಾಲಿ ಜಾಗ ಇರುವಲ್ಲಿ ಹೆಚ್ಚು ಬಳಕೆ ಮಾಡಬೇಕು. ನಮ್ಮ ಕ್ಲಬ್‌ ಈ ನಿಟ್ಟಿನಲ್ಲಿ ನಿರಂತರ ಜಾಗೃತಿ ಮೂಡಿಸುತ್ತಿದೆ.
-ತೇಜಸ್ವಿ ಆಚಾರ್ಯ, ಮ್ಯಾನೇಜಿಂಗ್‌ ಟ್ರಸ್ಟಿ ,
ಮಣಿಪಾಲ್‌ ಬರ್ಡಿಂಗ್‌ ಆ್ಯಂಡ್‌ ಕನ್ಸರ್ವೇಶನ್‌ ಟ್ರಸ್ಟ್‌.

 ಅವಿನ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next