Advertisement

ಮಾಣಿ-ಮೈಸೂರು ರಸ್ತೆ: ಪ್ರಯಾಣಿಕರಿಗೆ ಹಲಸಿನ ಕಾಣಿಕೆ!

11:16 PM Jul 28, 2019 | Sriram |

 ವಿಶೇಷ ವರದಿ- ಕನಕಮಜಲು: ಇತ್ತೀಚಿನ ದಿನಗಳಲ್ಲಿ ಯುವಜನತೆ, ಹೆಚ್ಚಿನ ಸಂಖ್ಯೆಯಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಊರುಗಳಲ್ಲಿ ಒಂದೇ ಅಭಿರುಚಿಯಿರುವ ಸಮಾನ ಮನಸ್ಕ ಗುಂಪುಗಳನ್ನು ಕಟ್ಟಿಕೊಂಡು ಕಲೆ ಹಾಗೂ ಕ್ರೀಡೆ ಕ್ಲಬ್‌, ಯುವಕ ಮಂಡಲ, ಸಂಘ ಇತ್ಯಾದಿಗಳನ್ನು ರಚಿಸುತ್ತಿದ್ದಾರೆ. ಕನಕಮಜಲು ಯುವಕ ಮಂಡಲ ಸಮಾಜಮುಖೀ ಕಾರ್ಯ ಗಳಲ್ಲಿ ವಿಭಿನ್ನ ಚಿಂತನೆಯ ಮೂಲಕ ಹೆಚ್ಚು ಪ್ರಚಲಿತವಾಗಿದೆ. ಅವರು ಮಾಣಿ- ಮೈಸೂರು ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಉಚಿತ ಹಲಸಿನ ಹಣ್ಣು ನೀಡಿ ಗಮನ ಸೆಳೆದಿದ್ದಾರೆ.

Advertisement

ಮಳೆಗಾಲದಲ್ಲಿ ಕೃಷಿಕರ ತೋಟಗಳಲ್ಲಿ ಹಲಸಿನ ಹಣ್ಣು ಹೆಚ್ಚಾಗಿ ಬೆಳೆಯುತ್ತದೆ. ಕೆಲವೆಡೆ ಜನರು ಬಳಸದೆ ಉಪಯೋಗ ಶೂನ್ಯವಾಗುತ್ತದೆ. ಹೆಚ್ಚಿನ ತೋಟಗಳಲ್ಲಿ ಹಲಸಿನ ಹಣ್ಣು ಮಂಗ ಹಾಗೂ ಇತರ ಪ್ರಾಣಿ ಪಕ್ಷಿಗಳಿಗೆ ಆಹಾರವಾಗುತ್ತಿತ್ತು. ಅಧಿಕ ಪ್ರಮಾಣದಲ್ಲಿ ಹಣ್ಣುಗಳು ಕೊಳೆತು ಹೋಗುತ್ತಿದ್ದವು. ಇದನ್ನು ಗಮನಿಸಿದ ಯುವಕ ಮಂಡಲದ ಸದಸ್ಯರು ಹಲಸಿನ ಹಣ್ಣುಗಳು ಜನರಿಗೆ ಉಪಯೋಗಕ್ಕೆ ಸಿಗಲಿ ಎನ್ನುವ ದೃಷ್ಟಿಯಲ್ಲಿ ವಿತರಣೆ ಮಾಡಿದ್ದಾರೆ. ಜು. 21 ಹಾಗೂ ಜು. 25 ರಂದು ಹಲಸಿನ ಹಣ್ಣುಗಳನ್ನು ಸಂಗ್ರಹಿಸಿ ಪ್ರಯಾಣಿಕರಿಗೆ ಉಚಿತವಾಗಿ ನೀಡಿದ್ದಾರೆ.

ಕ್ಷಣಮಾತ್ರದಲ್ಲಿ ಹಣ್ಣುಗಳು ಬಿಕರಿ
ಹಲಸಿನ ಹಣ್ಣುಗಳನ್ನು ಗ್ರಾಮದ ತೋಟಗಳಿಂದ ಸಂಗ್ರಹಿಸಿ ಮಾಣಿ- ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಇಡುತ್ತಿದ್ದಂತೆಯೇ ಪ್ರಯಾಣಿಕರ ಗಮನ ಸೆಳೆಯಿತು. ವ್ಯಾಪಕ ಸಂಖ್ಯೆಯಲ್ಲಿ ಪ್ರಾಯಣಿಕರು ತಮ್ಮ ವಾಹನಗಳನ್ನು ನಿಲ್ಲಿಸಿ ಹಲಸಿನ ಹಣ್ಣುಗಳನ್ನು ತಮ್ಮ ಗಾಡಿಗಳಿಗೆ ಹಾಕಿ ನಗುಮುಖದೊಂದಿಗೆ ಮುಂದೆ ಸಾಗುತ್ತಿದ್ದರು. ಕೆಲವೇ ಗಂಟೆಗಳಲ್ಲಿ ಸಂಗ್ರಹಿಸಿಟ್ಟ ಹಣ್ಣುಗಳೆಲ್ಲವೂ ಬಿಕರಿಯಾದವು. ಎರಡನೇ ಸಲವೂ ಮುಗಿದು ಮೂರನೇ ಬಾರಿ ತರಲಾಯಿತು. ಜನರ ಮುಖದಲ್ಲಿ ತೃಪ್ತಿಯ ಭಾವವಿತ್ತು ಎಂದು ಕನಕಮಜಲು ಯುವಕ ಮಂಡಲದ ಅಧ್ಯಕ್ಷ ಜಯಪ್ರಸಾದ್‌ ಕಾರಿಂಜ ಹೇಳಿದ್ದಾರೆ.

ಹಲಸಿನ ಹಣ್ಣು ಪ್ರಿಯರೆ
ಕನಕಮಜಲಿನ ರಸ್ತೆ ಬದಿಯಲ್ಲಿ ಹಲಸಿನ ಹಣ್ಣು ಸಂಗ್ರಹಿಸಿದ ಕಾರು ನಿಲ್ಲಿಸಿ, ಅದಕ್ಕೆ ಬ್ಯಾನರ್‌ ಹಾಕಲಾಗಿತ್ತು. ಹಲಸಿನ ಹಣ್ಣು ಪ್ರಿಯರೆ ಉಚಿತವಾಗಿ ಹಲಸಿನ ಹಣ್ಣು ಕೊಂಡು ಹೋಗಿ ಎಂದು ಆ ಬ್ಯಾನರಲ್ಲಿ ಬರೆಯಲಾಗಿತ್ತು. ಇದನ್ನು ಗಮನಿಸಿದ ಪ್ರಯಾಣಿಕರು ಹಣ್ಣು ಕೊಂಡೊಯ್ದರು.

ಜಾಲತಾಣದಲ್ಲಿ ಅನುಭವ ಹಂಚಿಕೆ
ಕನಕಮಜಲು ಗ್ರಾಮದಾದ್ಯಂತ ಹಲಸಿನ ಹಣ್ಣು ಸಂಗ್ರಹಿಸಿ ಉಚಿತವಾಗಿ ನೀಡುವುದರೊಂದಿಗೆ ಪ್ರಯಾಣಿಕರು ಹಲಸಿನ ಹಣ್ಣು ತಿಂದ ಅನುಭÊ ಹಂಚಿಕೊಳ್ಳಲು ವಾಟ್ಸ್‌ ಆ್ಯಪ್‌ ಸಂಖ್ಯೆ ಕೊಡಲಾಗಿತ್ತು. ಹೆಚ್ಚಿನವರು ಫೋಟೋ ಗಳನ್ನು ಕಳಿಸುವ ಮೂಲಕ ಸಂತಸದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ ಎಂದು ಯುವಕ ಮಂಡಲದವರು ಹೇಳಿದ್ದಾರೆ.

Advertisement

ತಹಶೀಲ್ದಾರ್‌ ಭೇಟಿ
ಎರಡು ಬಾರಿ ಹಲಸಿನ ಹಣ್ಣು ರಸ್ತೆ ಬದಿಯಲ್ಲಿ ಸಂಗ್ರಹಿಸಿಟ್ಟು ಪ್ರಯಾಣಿಕರಿಗೆ ಉಚಿತವಾಗಿ ನೀಡಿದ ಯುವಕ ಮಂಡಲದ ಈ ಕಾರ್ಯ ಶ್ಲಾಘನೆಗೆ ಪಾತ್ರವಾಗಿದೆ. ಸುದ್ದಿ ತಿಳಿದ ಸುಳ್ಯ ತಹಶೀಲ್ದಾರ್‌ ಕುಂಞಿ ಅಹಮ್ಮದ್‌ ಅವರು ಜು. 25ರಂದು ಸ್ಥಳಕ್ಕೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.

 ಸಂತೃಪ್ತ ಭಾವ ನಮಗಿದೆ
ಗ್ರಾಮೀಣ ಪ್ರದೇಶಗಳಲ್ಲಿ ಹಲಸಿನ ಹಣ್ಣುಗಳು ಅಧಿಕವಾಗಿ ಕೊಳೆತು ಹಾಳಾಗುತ್ತಿದ್ದವು. ಗ್ರಾಮಾದ್ಯಂತ ಇದ್ದ ಹಲಸಿನ ಹಣ್ಣುಗಳನ್ನು ಸಂಗ್ರಹಿಸಿ ಮಾಣಿ-ಮೈಸೂರು ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಉಚಿತವಾಗಿ ನೀಡಲಾಯಿತು. ಅವರು ಅದನ್ನು ತಿಂದ ಸವಿ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಲು ವಾಟ್ಸ್‌ ಆ್ಯಪ್‌ ಸಂಖ್ಯೆ ಕೊಟ್ಟಿದ್ದೇವೆ. ಸಂತೃಪ್ತ ಭಾವ ನಮಗಿದೆ.
– ಜಯಪ್ರಸಾದ್‌ ಕಾರಿಂಜ
ಅಧ್ಯಕ್ಷರು, ಕನಕಮಜಲು
ಯುವಕ ಮಂಡಲ

Advertisement

Udayavani is now on Telegram. Click here to join our channel and stay updated with the latest news.

Next