ಬಂಟ್ವಾಳ : ಮಾಣಿಯಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿಂದೂ ಸಂಘಟನೆಯ ಕಾರ್ಯಕರ್ತ ಮಹೇಂದ್ರ ಅವರನ್ನು ಬುಧವಾರ ರಾತ್ರಿ ದ.ಕ.ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್‌ಕಟೀಲು, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಮೊದಲಾದವರು ಭೇಟಿಯಾಗಿ ಘಟನೆಯ ಮಾಹಿತಿ ಪಡೆದು ಧೈರ್ಯ ತುಂಬಿದರು.
ಈ ವೇಳೆ ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ, ಪ್ರಮುಖರಾದ ಕ್ಯಾ.ಬ್ರಿಜೇಶ್ ಚೌಟ, ಮಾಧವ ಮಾವೆ, ಸುದರ್ಶನ್ ಬಜ, ಮುರಳಿಕೃಷ್ಣ ಹಸಂತ್ತಡ್ಕ, ಭುಜಂಗ ಕುಲಾಲ್, ಗಣೇಶ್ ರೈ ಮಾಣಿ ಮೊದಲಾದವರಿದ್ದರು.
ಶಾಂತಿ ಕದಡಲು ಅವಕಾಶವಿಲ್ಲ
ಈ ವೇಳೆ ಶಾಸಕ ರಾಜೇಶ್ ನಾಯ್ಕ್ ಪ್ರತಿಕ್ರಿಯಿಸಿ, ಘಟನೆ ನಡೆದ ಸಂದರ್ಭದಲ್ಲಿ ತಾನು ವಿಧಾನಸಭಾ ಅಧಿವೇಶನದಲ್ಲಿದ್ದು, ತತ್ ಕ್ಷಣ ಎಸ್ಪಿಯವರನ್ನು ಸಂಪರ್ಕಿಸಿ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದೇನೆ. ಬಂಟ್ವಾಳ ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ಶಾಂತಿ ಕದಡುವುದಕ್ಕೆ ಅವಕಾಶ ನೀಡುವುದಿಲ್ಲ. ಬಿಜೆಪಿ, ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ಉದ್ದೇಶಪೂರ್ವಕವಾಗಿ ಹಲ್ಲೆಗೆ ಮುಂದಾದರೆ ಸುಮ್ಮನಿರುವುದಿಲ್ಲ. ಕಾರ್ಯಕರ್ತರು ಧೃತಿಗೆಡಬಾರದು, ನಿಮ್ಮ ಜತೆ ನಾವಿದ್ದೇವೆ ಎಂದರು.