ರಾಮನಗರ: ಆಕಸ್ಮಿಕ ಬೆಂಕಿಗೆ ತಾಲೂಕಿನ ಕಸಬಾ ಹೋಬಳಿ ಪಾದರಹಳ್ಳಿ ಗ್ರಾಮದ ಬಳಿಯ ತೋಟವೊಂದರಲ್ಲಿ ಮಾವಿನ ಮರಗಳು ಸುಟ್ಟು ಕರಕಲಾಗಿವೆ. ಜನವಸತಿಯತ್ತ ಹರಡುತ್ತಿದ್ದ ಬೆಂಕಿಯನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ನಂದಿಸಿ ಅನಾಹುತ ತಪ್ಪಿಸಿದ್ದಾರೆ.
ಪಾದರಹಳ್ಳಿ ಗ್ರಾಮದಿಂದ ಆಲೆಮರದೊಡ್ಡಿಗೆ ಹೋಗುವ ರಸ್ತೆಯಲ್ಲಿರುವ ತೊಟ್ಟಿಲಸೊಣೆ ಬಳಿ ಗಿಡಗಂಟೆಗಳಲ್ಲಿ ಆರಂಭವಾದ ಬೆಂಕಿ, ಬಿಸಿಲಿನ ಝಳಕ್ಕೆ ಕ್ಷಿಪ್ರವಾಗಿ ವ್ಯಾಪ್ತಿಸಿದೆ. ರಸ್ತೆಯ ಎಡ ಮತ್ತು ಬಲ ಭಾಗದಲ್ಲಿರುವ ಸೋಮಯ್ಯ, ಚಿಕ್ಕಣ್ಣಯ್ಯ, ಚಂದ್ರಮ್ಮ ಅವರ ಜಮೀನುಗಳಿಗೆ ಬೆಂಕಿ ವ್ಯಾಪಿಸಿ, ಗಿಡಗಂಟೆಗಳನ್ನೇಲ್ಲ ಭಸ್ಮ ಮಾಡಿವೆ.
ಗ್ರಾಮಕ್ಕೆ ಹೊಂದಿಕೊಂಡಂತಿರುವ ನಾಗಪ್ಪನ ಬಾರೆ ಬಳಿಯ ಮುನಿಯಾಬೋವಿ ಅವರ ಜಮೀನಿಗೂ ಬೆಂಕಿ ವ್ಯಾಪ್ತಿಸಿದೆ. ಬೆಂಕಿಯ ಕೆನ್ನಾಲಾಗಿಯ ಅನಾಹುತವನ್ನು ಕಂಡ ಅಲ್ಲೇ ಪಕ್ಕದಲ್ಲಿದ್ದ ಜನತಾ ಕಾಲೋನಿಯ ನಿವಾಸಿಗಳೂ ಹೌಹಾರಿದ್ದಾರೆ.
ಇನ್ನೇನು ತಮ್ಮ ಕಾಲೋನಿಗೂ ಬೆಂಕಿ ವ್ಯಾಪ್ತಿಸುತ್ತದೆ ಎಂಬ ಭಯಭೀತರಾಗಿ ಗುಡಿಸಲುಗಳಿಂದ ಹೊರಗೋಡಿದ್ದಾರೆ. ಬೆಂಕಿಯನ್ನು ಹತೋಟಿಗೆ ತರಲು ಗ್ರಾಮಸ್ಥರು, ಯುವಕರು ನಡೆಸಿದ ಪ್ರಯತ್ನ ಫಲ ಕೊಡಲಿಲ್ಲ. ಅಷ್ಟರಲ್ಲಾಗಲೆ ನಾಗರಿಕರೊಬ್ಬರು ಅಗ್ನಿ ಶಾಮಕ ದಳಕ್ಕೆ ಮಾಡಿದ್ದ ಕರೆಯನ್ವಯ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.
ಕಿಡಿಗೇಡಿಗಳ ಕೃತ್ಯದ ಬಗ್ಗೆ ಗ್ರಾಮಸ್ಥರು ಅನುಮಾನ: ಪಾದರಹಳ್ಳಿ ಗ್ರಾಮದ ಬಳಿ ಗುರುವಾರ ಸಂಭವಿಸಿರುವ ಬೆಂಕಿ ಅನಾಹುತಕ್ಕೆ ಕಿಡಿಗೇಡಿಗಳ ಕೃತ್ಯ ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಬೀಡಿ ಸೇದಿ ಬೀಸಾಡಿದ ಕಾರಣವನ್ನು ಕೆಲವು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ. ಬೇಸಿಗೆಯ ಬಿಸಿಲಿನ ತಾಪಕ್ಕೆ ಸಣ್ಣ ಕಿಡಿಯೂ ದೊಡ್ಡ ಅನಾಹುತವನ್ನು ಸೃಷ್ಠಿಸುತ್ತಿದೆ ಎಂದು ಗ್ರಾಮಸ್ಥರು ಪ್ರತಿಕ್ರಿಯಸಿದ್ದಾರೆ.
ಗ್ರಾಮಪಂಚಾಯ್ತಿ ಸದಸ್ಯ ಪುಟ್ಟೇಗೌಡ, ಬೆಂಕಿ ಅನಾಹುತದಿಂದ ರೈತರು ಮತ್ತೆ ಸಂಕಷ್ಟಕ್ಕೆ ಈಡಾಗುತ್ತಿದ್ದಾರೆ. ಮಾವಿನ ಮರಗಳು ಸುಟ್ಟು ಹೋಗಿ ಅಪಾರ ನಷ್ಟ ಸಂಭವಿಸುತ್ತಿದೆ. ರೈತರ ನಷ್ಟವನ್ನು ಸರ್ಕಾರ ಭರಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.