Advertisement

ಆಹಾ! ಮಾವು

03:48 PM Jun 10, 2019 | mahesh |

ಈಗ ಮಾವಿನ ಸೀಸನ್‌. ಮಕ್ಕಳಿಂದ ಹಿಡಿದು ದೊಡ್ಡವರೂ ಮಾವನ್ನು ಇಷ್ಟಪಡುತ್ತಾರೆ. ಮಾವಿನ ಹಣ್ಣು ಇದ್ದರೆ ಊಟಕ್ಕೆ ಬೇರೆ ಏನೂ ಬೇಕಾಗಿಲ್ಲ. ಸ್ವಲ್ಪ ಹೆಚ್ಚೇ ಊಟ ಸೇರುತ್ತದೆ. ಇದನ್ನು ಸಾರು, ರಸಾಯನ, ಜ್ಯೂಸ್‌, ಗೊಜ್ಜು- ಹೀಗೆ ಹಲವಾರು ರೀತಿಯಲ್ಲಿ ಅಡುಗೆಯಲ್ಲಿ ಉಪಯೋಗಿಸಬಹುದು.

Advertisement

ಮಾವಿನ ಹಣ್ಣು ಸಾಸಿವೆ
ಬೇಕಾಗುವ ಸಾಮಗ್ರಿ: ಮಾವಿನ ಹಣ್ಣು- 5, ತೆಂಗಿನ ತುರಿ- 1 ಹೋಳು, ಬೆಲ್ಲ- 2 ಚಮಚ, ಹಸಿಮೆಣಸು-1, ಸಾಸಿವೆ- 1/2 ಚಮಚ, ಮೊಸರು- 2 ಚಮಚ, ಇಂಗು, ಚಿಟಿಕೆ ಅರಸಿನ, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ: ಮಾವಿನ ಹಣ್ಣಿನ ತೊಟ್ಟನ್ನು ಹಿಂಡಿ ಸೊನೆ ತೆಗೆದು ಚೆನ್ನಾಗಿ ತೊಳೆಯಿರಿ. ನಂತರ ಸಿಪ್ಪೆ ತೆಗೆದು ಹಿಚುಕಿ ಬೆಲ್ಲ ಮತ್ತು ಅರಸಿನ ಸೇರಿಸಿಡಿ. ಮಿಕ್ಸಿ ಜಾರಿಗೆ ತೆಂಗಿನತುರಿ, ಹಸಿಮೆಣಸು, ಸಾಸಿವೆ, ಇಂಗು ಸೇರಿಸಿ ನುಣ್ಣಗೆ ರುಬ್ಬಿರಿ. ಇದನ್ನು ಹಿಚುಕಿಟ್ಟ ಮಾವಿನ ಮಿಶ್ರಣಕ್ಕೆ ಸೇರಿಸಿ. ನಂತರ ಮೊಸರು ಸೇರಿಸಿ, ಬೇಕಷ್ಟು ಉಪ್ಪು ಸೇರಿಸಿದರೆ ರುಚಿಕರ ಸಾಸಿವೆ ರೆಡಿ.

ಮಾವಿನ ಹಣ್ಣಿನ ರಸಾಯನ (ಸೀಕರಣೆ)
ಬೇಕಾಗುವ ಸಾಮಗ್ರಿ: ಮಾವಿನ ಹಣ್ಣು- 2, ತೆಂಗಿನ ಹಾಲು- 2 ಕಪ್‌, ಬೆಲ್ಲ- 1/2 ಕಪ್‌, ಸಕ್ಕರೆ- 1/4 ಕಪ್‌, ಏಲಕ್ಕಿ ಸುವಾಸನೆಗೆ.

ತಯಾರಿಸುವ ವಿಧಾನ: ಚೆನ್ನಾಗಿ ಹಣ್ಣಾದ ಮಾವಿನಹಣ್ಣನ್ನು ತೊಳೆದು ಸಿಪ್ಪೆ ತೆಗೆದು ಹಿಚುಕಿ ಬೆಲ್ಲ ಸಕ್ಕರೆ ಸೇರಿಸಿ ಮಿಶ್ರಣ ತಯಾರಿಸಿ. ನಂತರ ಇದಕ್ಕೆ ತೆಂಗಿನ ಹಾಲು ಸೇರಿಸಿ ಏಲಕ್ಕಿ ಹಾಕಿ ಚಿಟಿಕೆ ಉಪ್ಪು ಬೆರೆಸಿ. ಇದನ್ನು ಸ್ವಲ್ಪ ಹೊತ್ತು ಫ್ರಿಜ್‌ನಲ್ಲಿಟ್ಟು ಸೇವಿಸಬಹುದು. ದೋಸೆ, ಚಪಾತಿಯೊಂದಿಗೂ ರುಚಿಕರವಾಗಿರುತ್ತದೆ.

Advertisement

ಮಾವಿನಹಣ್ಣಿನ ಗೊಜ್ಜು
ಬೇಕಾಗುವ ಸಾಮಗ್ರಿ: ಮಾವಿನ ಹಣ್ಣು- 4, ಬೆಲ್ಲದ ಪುಡಿ- 2 ಚಮಚ, ರುಚಿಗೆ ತಕ್ಕಷ್ಟು ಉಪ್ಪು , ಒಗ್ಗರಣೆಗೆ ಉದ್ದಿನಬೇಳೆ, ಸಾಸಿವೆ, ಬೆಳ್ಳುಳ್ಳಿ, ಕರಿಬೇವು, ಒಣಮೆಣಸು, ಎಣ್ಣೆ.

ತಯಾರಿಸುವ ವಿಧಾನ: ಮಾವಿನ ಹಣ್ಣನ್ನು ಚೆನ್ನಾಗಿ ತೊಳೆದು ಹಿಚುಕಿ ಬೆಲ್ಲ ಸೇರಿಸಿ. ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ ಸಿಡಿಸಿ ನಂತರ ಉದ್ದಿನಬೇಳೆ, ಮೆಣಸು, ಬೆಳ್ಳುಳ್ಳಿ , ಕರಿಬೇವು ಹಾಕಿ ಒಗ್ಗರಣೆ ತಯಾರಿಸಿ. ನಂತರ ಮಾವಿನ ಮಿಶ್ರಣವನ್ನು ಸೇರಿಸಿ ಉಪ್ಪು ಹಾಕಿ ಚೆನ್ನಾಗಿ ಬೆರೆಸಿ ಮುಚ್ಚಿ ಒಂದೆರಡು ನಿಮಿಷ ಬೇಯಿಸಿದರೆ ರುಚಿಕರ ಮಾವಿನ ಗೊಜ್ಜು ತಯಾರು. ಇದು ಊಟಕ್ಕೂ ತಿಂಡಿಗೂ ಚೆನ್ನಾಗಿರುತ್ತದೆ.

ಮಾವಿನಹಣ್ಣಿನ ಸಾರು
ಬೇಕಾಗುವ ಸಾಮಗ್ರಿ: ಮಾವಿನ ಹಣ್ಣು- 6, ಬೆಲ್ಲದ ಹುಡಿ- 2 ಚಮಚ, ತೆಂಗಿನತುರಿ- 1 ಕಪ್‌, ಒಣಮೆಣಸು- 4, ಕೊತ್ತಂಬರಿಬೀಜ- 1 ಚಮಚ, ಮೆಂತೆ-ಜೀರಿಗೆ- 1/4 ಚಮಚ, ಉಪ್ಪು , ಇಂಗು, ಚಿಟಿಕೆ ಅರಸಿನಹುಡಿ, ಒಗ್ಗರಣೆಗೆ: ಎಣ್ಣೆ, ಸಾಸಿವೆ, ಕರಿಬೇವು, ಒಣಮೆಣಸು.

ತಯಾರಿಸುವ ವಿಧಾನ: ಮಾವಿನ ಹಣ್ಣನ್ನು ತೊಳೆದು ಸಿಪ್ಪೆ ತೆಗೆದಿಡಿ. ನಂತರ ಒಣಮೆಣಸು, ಕೊತ್ತಂಬರಿ, ಜೀರಿಗೆ, ಮೆಂತೆಯನ್ನು ಸ್ವಲ್ಪ ಎಣ್ಣೆ ಹಾಕಿ ಕೆಂಪಗೆ ಉರಿಯಿರಿ. ಇದನ್ನು ತೆಂಗಿನ ತುರಿ, ಇಂಗು, ಅರಸಿನ ಹುಡಿಯೊಂದಿಗೆ ನುಣ್ಣಗೆ ರುಬ್ಬಿ. ನಂತರ ಬೇಕಷ್ಟು ನೀರು ಸೇರಿಸಿ ಉಪ್ಪು , ಬೆಲ್ಲದ ಹುಡಿ ಹಾಕಿ ಕುದಿಸಿರಿ. ಒಂದು ಕುದಿ ಬಂದ ಮೇಲೆ ಮಾವಿನ ಹಣ್ಣು ಸೇರಿಸಿ ಮುಚ್ಚಿ ಒಂದೆರಡು ನಿಮಿಷ ಮತ್ತೆ ಬೇಯಿಸಿರಿ. ಕೊನೆಗೆ ಸಾಸಿವೆ, ಒಣಮೆಣಸು, ಬೆಳ್ಳುಳ್ಳಿ, ಕರಿಬೇವು ಸೇರಿಸಿ ಒಗ್ಗರಣೆ ಕೊಡಿ. ರುಚಿಕರ ಸಾರು ರೆಡಿ.

ಮಾವಿನ ಹಣ್ಣಿನ ಜಾಮ್‌
ಬೇಕಾಗುವ ಸಾಮಗ್ರಿ: ಮಾವಿನ ಹಣ್ಣು- 10, ಸಕ್ಕರೆ- 1/2 ಕೆಜಿ, ಸಣ್ಣ ನಿಂಬೆಹಣ್ಣು- 2.

ತಯಾರಿಸುವ ವಿಧಾನ: ಮಾವಿನ ಹಣ್ಣನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆದು ಹಿಚುಕಿ ಮಿಶ್ರಣ ತಯಾರಿಸಿ. ನಂತರ ಬಾಣಲೆಯನ್ನು ಗ್ಯಾಸಿನಲ್ಲಿಟ್ಟು ಬಿಸಿಯಾದ ನಂತರ ಮಾವಿನ ತಿರುಳು ಹಾಕಿ. ಬಳಿಕ ಸಕ್ಕರೆ ಸೇರಿಸಿ. ಸ್ವಲ್ಪ ಹೊತ್ತು ಬೆಂದ‌ ನಂತರ ಇದಕ್ಕೆ ನಿಂಬೆ ರಸ ಸೇರಿಸಿ. ಉರಿಯನ್ನು ಕಡಿಮೆ ಮಾಡಿ ಮತ್ತೆ ಐದಾರು ನಿಮಿಷ ಬೇಯಿಸಿ. ತಣ್ಣಗಾದ ಮೇಲೆ ಗಾಳಿಯಾಡದ ಬಾಟಲ್‌ನಲ್ಲಿ ತುಂಬಿಸಿಟ್ಟರೆ ಬೇಕಾದಾಗ ಸವಿಯಬಹುದು. ಮಕ್ಕಳು ಇದನ್ನು ತುಂಬಾ ಇಷ್ಟಪಡುತ್ತಾರೆ.

ಸ್ವಾತಿ

Advertisement

Udayavani is now on Telegram. Click here to join our channel and stay updated with the latest news.

Next