ಹಾವೇರಿ: ಹಣ್ಣುಗಳ ರಾಜ ಮಾವಿನ ಸುಗ್ಗಿ ವಿದಾಯದ ಹಾದಿಯಲ್ಲಿದ್ದು, ಇನ್ನೂ 10 ರಿಂದ 15 ದಿನ ಮಾರುಕಟ್ಟೆಯಲ್ಲಿ ಹಣ್ಣು ದೊರೆತರೆ ಹೆಚ್ಚು. ಮಾವಿನ ಸುಗ್ಗಿಯ ಅಂತ್ಯದಲ್ಲಿ ದರವೂ ಕಡಿಮೆಯಾಗಿದ್ದು, ಗ್ರಾಹಕರು ಕೊನೆಯ ಬಾರಿ ಮಾವಿನ ಹಣ್ಣಿನ ರುಚಿ ಸವಿಯಲು ಮುಂದಾಗುತ್ತಿದ್ದಾರೆ.
ನಗರದ ಎಂ.ಜಿ. ರೋಡ್, ಬಸ್ ನಿಲ್ದಾಣದ ಬಳಿ ಮಾವು ಮಾರಾಟವಾಗುತ್ತಿದೆ. ಈ ಬಾರಿ ಮಾವು ಮಾರುಕಟ್ಟೆಗೆ ತಡವಾಗಿ ಆಗಮಿಸಿದ್ದರೂ ದರದಲ್ಲಿ ಏರಿಕೆ ಕಂಡು ಬಂದಿತ್ತು. ಸುಗ್ಗಿಯ ಆರಂಭದ ದಿನಗಳಲ್ಲಿ ಸಿರಿವಂತರಿಗೆ ಮಾತ್ರ ಕೈಗೆಟಕುವ ಮಾವು, ಇದೀಗ ಎಲ್ಲರಿಗೂ ಸುಲಭವಾಗಿ ಲಭ್ಯವಾಗುತ್ತಿದ್ದು, ಮಾವಿನ ಹಣ್ಣಿನ ದರದಲ್ಲಿ ಸ್ಪಲ್ಪಮಟ್ಟಿಗೆ ಇಳಿಕೆಯಾಗಿದೆ.
ಬಾದಾಮಿ ಕೆಜಿಗೆ 100-120 ರೂ.ಗೆ ಮಾರಾಟವಾದರೆ, ನೀಲಂ 100 ರೂ., ಮಲ್ಲಿಕಾ 80 ರಿಂದ 100 ರೂ.ಗೆ ಒಂದು ಕೆಜಿ ಮಾರಾಟವಾಗುತ್ತಿವೆ. ಸುಗ್ಗಿಯ ಆರಂಭದಿಂದ ಅಂತ್ಯದವರೆಗೂ ಆಪೂಸ್ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆಯಿತ್ತು. ಮಾವಿನ ಹಣ್ಣುಗಳಲ್ಲಿ ಹೆಚ್ಚು ಜನರು ಆಪೂಸ್ ಹಣ್ಣನ್ನು ಬೇಡುತ್ತಿದ್ದರು. ಆದ್ದರಿಂದ ಹೆಚ್ಚಿನ ಸಂಖ್ಯೆಯ ಹಣ್ಣುಗಳನ್ನು ಮಾವಿನ ಸುಗ್ಗಿಯುದ್ದಕ್ಕೂ ಗ್ರಾಹಕರ ಬೇಡಿಕೆಗೆ ತಕ್ಕಂತೆ ಹೊರ ರಾಜ್ಯಗಳಿಂದ ಖರೀದಿಸಿ ಮಾರಾಟ ನಡೆಸುತ್ತಿದ್ದೆವು ಎಂದು ವ್ಯಾಪಾರಿ ಶಾಹಿದ್‌ಅಲಿ ಜಮಖಂಡಿ ತಿಳಿಸಿದರು.
ಈ ಬಾರಿ ಮಾವಿನ ಸೀಜನ್ ತಡಗಾಗಿ ಆರಂಭಗೊಂಡರೂ ಚಲೋ ವ್ಯಾಪಾರ ನಡೆಯಿತು. ದರ ಹೆಚ್ಚಿದ್ದರೂ ಅನುಕೂಲಸ್ಥರು ಖರೀದಿಸಿದರು. ಕಾರ ಹುಣ್ಣಿಮೆ ಬಳಿಕ ಶೇ.75ರಷ್ಟು ವಹಿವಾಟು ಇಳಿಮುಖವಾಗಿದೆ. ಇದೀಗ ಹೆಚ್ಚಿನ ಸಂಖ್ಯೆಯಲ್ಲಿ ಮಧ್ಯಮ ವರ್ಗದವರು, ಬಡವರು ಹಣ್ಣುಗಳ ಖರೀದಿ ಮಾಡುತ್ತಿದ್ದಾರೆ. ಒಟ್ಟಾರೆ ಹಿಂದಿನ ವರ್ಷದ ವಹಿವಾಟಿಗೆ ಹೋಲಿಸಿದರೆ ಈ ಬಾರಿ ಉತ್ತಮ ವಹಿವಾಟು ನಡೆದಿದೆ. ಮಳೆ ಆರಂಭಗೊಂಡಿತು ಎಂದೊಡನೆ ಸಹಜವಾಗಿಯೇ ನಮ್ಮ ವಹಿವಾಟು ಇಳಿಮುಖವಾಗುತ್ತದೆ. ರೈತರು ಮಾರುಕಟ್ಟೆಗೆ ಖರೀದಿಗೆ ಬರುವ ಬದಲು ಹೊಲಗಳಲ್ಲಿ ದುಡಿಮೆಯಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದು ಹೇಳಿದರು.
ಮಾವು ಮಾರುಕಟ್ಟೆಗೆ ವಿದಾಯ ಹೇಳಲು ಸಜ್ಜಾಗಿದೆ. ಇನ್ನೊಂದು 10 ದಿನ ಸಿಕ್ಕರೆ ಹೆಚ್ಚು. ಮತ್ತೆ ನಾವು ಮಾವಿನ ಸ್ವಾದ ಸವಿಯಬೇಕೆಂದರೆ ಕನಿಷ್ಟ 9-10 ತಿಂಗಳು ಕಾಯಬೇಕು. ಆದ್ದರಿಂದ, ಸುಗ್ಗಿಯ ಕೊನೆಯ ಅವಧಿಯಲ್ಲಿ ಮಾವು ಖರೀದಿಸುತ್ತಿದ್ದೇವೆ. –
ಸಂತೋಷ ದಶಮನಿ, ಗ್ರಾಹಕರು
ಕಾರ ಹುಣ್ಣಿಮೆಯ ನಂತರ ಮಾವಿನ ಹಣ್ಣುಗಳ ವ್ಯಾಪಾರ ಇಳಿಮುಖವಾಗಿದೆ. ಇನ್ನೂ ಮಳೆ ಬೀಳದ್ದರಿಂದ ಗ್ರಾಹಕರು ಹಣ್ಣು ಖರೀದಿಸುತ್ತಿದ್ದಾರೆ. ಕಳೆದ ವರ್ಷ ಕೊರೊನಾ ಹಿನ್ನೆಲೆಯಲ್ಲಿ ವ್ಯಾಪಾರ ಅಷ್ಟಾಗಿ ಆಗಿರಲಿಲ್ಲ. ಈ ವರ್ಷದ ವ್ಯಾಪಾರ ಸ್ವಲ್ಪಮಟ್ಟಿಗೆ ಉತ್ತಮವಾಗಿದೆ. –
ದಾವಲ್ ಶಿರಹಟ್ಟಿ, ಹಣ್ಣುಗಳ ವ್ಯಾಪಾರಸ್ಥರು