Advertisement

ವಿದೇಶಕ್ಕೆ ಹಾರಲು ಸಜ್ಜಾಗಿದೆ ಮಾವು

12:52 PM May 24, 2018 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮುಂಚೂಣಿಯಲ್ಲಿ ಬೆಳೆಯುವ ಹಣ್ಣುಗಳ ರಾಜ ಮಾವು ಸದ್ಯ ಮಾಲೇಷಿಯಾ, ಸಿಂಗಾಪುರ, ಅಸ್ಟ್ರೇಲಿಯಾ ಸೇರಿದಂತೆ ಏಷ್ಯಾ ಖಂಡದ ದೇಶಗಳಿಗೆ ಹಾರಾಲು ಸಜ್ಜಾಗಿದೆ.

Advertisement

ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬೆಳೆಯುವ ಬಾದಾಮಿ, ಬೇನಿಷಾ, ಮಲ್ಲಿಕಾ, ಮಲಗೂಬಾ, ತೋತಾಪುರಿ, ನೀಲಂ, ಕೆಇಎಸ್‌ಆರ್‌ ಮತ್ತಿತರ ತರಹೇವಾರಿ ಮಾವಿನ ಹಣ್ಣುಗಳು ಜಗತ್ತಿನಾದ್ಯಂತ ಸದ್ದು ಮಾಡುತ್ತಿರುವುದು ಸಾಮಾನ್ಯವಾದರೂ ವರ್ಷದಿಂದ ವರ್ಷಕ್ಕೆ ಜಿಲ್ಲೆಯ ಮಾವಿನ ಹಣ್ಣಿಗೆ ಜಾಗತಿಕ ಮಾರುಕಟ್ಟೆಯಲ್ಲಿ ದೇಶ, ವಿದೇಶದಿಂದ ಹೆಚ್ಚು ಬೇಡಿಕೆ ಕಂಡು ಬರುತ್ತಿರುವುದು ಜಿಲ್ಲೆಯ ಮಾವು ಬೆಳೆಗಾರರ ಪಾಲಿಗೆ ಅಂತೂ ವರದಾನವಾಗಿದೆ.

42 ಸಾವಿರ ಹೆಕ್ಟೇರ್‌ನಲ್ಲಿ ಮಾವು: ಕೋಲಾರ, ಚಿಕ್ಕಬಳ್ಳಾಪುರ ಎರಡು ಜಿಲ್ಲೆಗಳಲ್ಲಿ ಬರೋಬ್ಬರಿ 42 ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ರೈತರು ಮಾವು ಕೃಷಿಯಲ್ಲಿ ತೊಡಗಿದ್ದಾರೆ. ಬಹುಪಾಲು ಮಾವು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನದಾದರೆ ಎರಡನೇ ಸ್ಥಾನದಲ್ಲಿ ಜಿಲ್ಲೆಯ ಚಿಂತಾಮಣಿ ತಾಲೂಕು ಮುಂಚೂಣಿಯಲ್ಲಿದೆ.

ಚಿಂತಾಮಣಿ ತಾಲೂಕಿನಲ್ಲಿ 10 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಸದ್ಯ ಮಾವು ಕೊಯ್ಲಿನ ಹಂತಕ್ಕೆ ಬಂದು ತಲುಪಿದ್ದು, ಕೆಲವು ರೈತರು ತಮ್ಮ ತೋಟಗಳಲ್ಲಿ ಈಗಾಗಲೇ ಠಿಕಾಣಿ ಹೂಡಿ ಕೂಲಿ ಕಾರ್ಮಿಕರ ಕೈನಲ್ಲಿ ಮಾವಿನ ಕೊಯ್ಲು ಮಾಡಿಸುತ್ತಿರುವ ದೃಶ್ಯಗಳು ಕಂಡು ಬರುತ್ತಿದೆ. 

ಕೊಯ್ಲಿಗೆ ಮಳೆ ಅಡ್ಡಿ: ಸಾಮಾನ್ಯವಾಗಿ ಜಿಲ್ಲೆಯಲ್ಲಿ ಏಪ್ರಿಲ್‌ ಅಂತ್ಯದ ವೇಳೆಗೆ ಮಾವು ಮಾರುಕಟ್ಟೆಗೆ ಲಗ್ಗೆ ಇಡುತ್ತಿತ್ತು. ಆದರೆ, ಕಳೆದ ವರ್ಷ ಅಕ್ಟೋಬರ್‌ ಹಾಗೂ ಡಿಸೆಂಬರ್‌ನಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆಯಾದ್ದರಿಂದ ಮಾವಿನ ಮರಗಳು ಹೂ, ಕಾಯಿ ಬಿಡುವುದು ತಡವಾಗಿದ್ದರಿಂದ ಮಾವಿನ ಕಾಯಿ ಬಲಿಯುವುದು ತಡವಾಗಿದೆ. ಜೊತೆಗೆ ಇನ್ನೂ ಜಿಲ್ಲಾದ್ಯಂತ ಮಳೆಯಾಗುತ್ತಿರುವುದರಿಂದ ತೇವಾಂಶ ಹೆಚ್ಚಳವಾಗಿ ಮಾವು ಕೊಯ್ಲಿಗೆ ಅಡ್ಡಿಯಾಗಿದ್ದು, ಒಂದರೆಡು ವಾರದಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಮಾವು ವಿದೇಶಗಳಿಗೆ ರಪ್ತು ಆಗಲು ಮಾವು ಬೆಳೆಗಾರರು ಎಲ್ಲಾ ರೀತಿಯ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದಾರೆ.

Advertisement

ವಿದೇಶಕ್ಕೆ ಕಳುಹಿಸಲು ರೈತರ ನೋಂದಣಿ ಅವಳಿ ಜಿಲ್ಲೆಗಳ ಸುಮಾರು 800ಕ್ಕೂ ಹೆಚ್ಚು ಮಾವು ಬೆಳೆಗಾರರು ತಾವು ಬೆಳೆದಿರುವ ತರಹೇವಾರಿ ಮಾವನ್ನು ವಿದೇಶಕ್ಕೆ ರಫ್ತು ಮಾಡುವ ನಿಟ್ಟಿನಲ್ಲಿ ಕೃಷಿ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಅಪೇಡಾ) ದಲ್ಲಿ ತಮ್ಮ ಹೆಸರನ್ನು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ. ಅಲ್ಲದೇ ಅಪೇಡಾ ವರ್ಷ ಪೂರ್ತಿ ನೀಡಿರುವ ಮಾರ್ಗದರ್ಶನದಂತೆ ಮಾವು ಕೃಷಿಯಲ್ಲಿ ತೊಡಗಿರುವ ಬೆಳೆಗಾರರು ವಿದೇಶಕ್ಕೆ ಕಳುಹಿಸುವ ಉದ್ದೇಶದಿಂದಲೇ ಗುಣಮಟ್ಟದ ಮಾವು ಬೆಳೆದಿದ್ದಾರೆ. 

ಅಸ್ಟ್ರೇಲಿಯಾ, ಸಿಂಗಾಪುರ, ಮಲೇಷಿಯಾ ಮತ್ತಿತರ ರಾಷ್ಟ್ರಗಳಿಗೆ ಅವಳಿ ಜಿಲ್ಲೆಯ ಮಾವು ರಪು¤ ಆಗಲಿದೆ. ಇದಕ್ಕಾಗಿ ವಿಶೇಷ ಟೆಟ್ರಾ ಪ್ಯಾಕಿಂಗ್‌ ವ್ಯವಸ್ಥೆಯನ್ನು ಕೂಡ ರಾಜ್ಯ ಮಾವು ಅಭಿವೃದ್ಧಿ ನಿಗಮದ ಅಶ್ರಯದಲ್ಲಿ ಮಾವು ಬೆಳೆಗಾರರು ಸಿದ್ಧಪಡಿಸಿಕೊಂಡಿದ್ದಾರೆ.

ವಿದೇಶದಲ್ಲಿ ಟನ್‌ 30 ಸಾವಿರ ರೂ. ರೈತರು ಬೆಳೆದಿರುವ ಮಾವನ್ನು ಸ್ಥಳೀಯವಾಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆ ಟನ್‌ಗೆ ಗರಿಷ್ಠ 10 ರಿಂದ 12 ಸಾವಿರ ರೂ.ವರೆಗೂ ಮಾರಾಟ ಮಾಡಬಹುದು. ಜೊತೆಗೆ ಮಧ್ಯವರ್ತಿಗಳ ಹಾವಳಿಯಿಂದ ರೈತರಿಗೆ ಹೆಚ್ಚಿನ ಲಾಭ ಸಿಗುವುದಿಲ್ಲ. ಆದರೆ, ಅಪೇಡಾ ಮೂಲಕ ವಿದೇಶಕ್ಕೆ ರಪ್ತು ಮಾಡುವುದರಿಂದ ಕನಿಷ್ಠ ಟನ್‌ ಮಾವು 30 ಸಾವಿರ ರೂ. ವರೆಗೂ ಮಾರಾಟ ಮಾಡಬಹುದಾಗಿದೆ. ಇನ್ನೂ ಜಿಲ್ಲೆಯಲ್ಲಿ ಬೆಳೆಯುವ ಬೇನಾಷ, ಮಲ್ಲಿಕಾ, ತೋತಾಪುರಿ, ಬಾದಾಮಿ ಮತ್ತಿತರ ಹಣ್ಣುಗಳಿಗೆ ವಿದೇಶದಲ್ಲಿ ಹೆಚ್ಚು ಬೇಡಿಕೆ ಇದೆ ಎನ್ನುತ್ತಾರೆ ಚಿಕ್ಕಬಳ್ಳಾಪುರ ಜಿಲ್ಲೆಯ ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಕೆ.ಶ್ರೀನಿವಾಸಗೌಡರು.

 ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next