Advertisement
ಧಾರವಾಡ: ಆಲೊ³ನ್ಸೋ ಮಾವಿನ ಸುಗ್ಗಿಗೂ ರೋಗ ರುಜಿನಗಳಿಗೂ ಅವಿನಾಭಾವ ಸಂಬಂಧವೋ ಏನೋ ಗೊತ್ತಿಲ್ಲ. ಸತತ ನಾಲ್ಕು ವರ್ಷಗಳಿಂದ ಒಂದಿಲ್ಲೊಂದು ಕಾರಣಕ್ಕೆ ಮಾವು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಿದ್ದು, 2021ನೇ ವರ್ಷ ಕೂಡ ಮಾವು ಬೆಳೆಗಾರರು ಅಷ್ಟೇ ಏಕೆ ವ್ಯಾಪಾರಿಗಳಿಗೂ ಆಘಾತವನ್ನುಂಟು ಮಾಡಿದೆ.
Related Articles
Advertisement
ಧಾರವಾಡ ಜಿಲ್ಲೆಯಲ್ಲಿಯೇ ಪ್ರಸ್ತಕ ವರ್ಷ ಅಂದಾಜು 97 ಸಾವಿರ ಟನ್ ಮಾವು ಉತ್ಪಾದನೆ ಗುರಿ ಹೊಂದಲಾಗಿತ್ತು. ಆದರೆ ಫೆಬ್ರವರಿ ತಿಂಗಳಿನಲ್ಲಿ ಸತತ ಒಂದು ವಾರಗಳ ಕಾಲ ಬಿದ್ದ ಇಬ್ಬನಿ ಮತ್ತು ಅಕಾಲಿಕ ಮಳೆಯಿಂದ ಶೇ.40 ಮಾವಿನ ಹೂವು, ಹೀಚು ಉದುರಿ ಹೋಗಿದ್ದು, ಉತ್ಪಾದನೆ ತೀವ್ರ ಕುಸಿತ ಕಂಡಿದೆ. ಉತ್ಪಾದನೆ ಕುಸಿತದ ಮಧ್ಯೆಯೂ ಹಾಗೋ ಹೀಗೋ ಸುಧಾರಿಸಿಕೊಂಡು ಮೇಲೆದ್ದ ಮಾವಿಗೆ ವಾರಾಂತ್ಯ ಕರ್ಫ್ಯೂ, ಮೇ 12ರವರೆಗಿನ 2ನೇ ಅಲೆಯ ಕರ್ಫ್ಯೂ ಮರ್ಮಾಘಾತ ನೀಡಿದಂತಾಗಿದೆ.
ಮಹಾರಾಷ್ಟ್ರ ಬಂದ್ ಆಘಾತ:
ಇನ್ನು ಕರ್ನಾಟಕದ ಅದರಲ್ಲೂ ಧಾರವಾಡ ಮತ್ತು ಬೆಳಗಾವಿ ಭಾಗದಲ್ಲಿ ಬೆಳೆಯುವ ಆಲೊ³ನ್ಸೊ ಮಾವಿನ ಹಣ್ಣಿಗೆ ಅತ್ಯಂತ ಹೆಚ್ಚಿನ ಬೇಡಿಕೆ ಇರುವುದೇ ಮುಂಬೈ, ಪುಣೆ, ನಾಗಪೂರ, ಕೊಲ್ಲಾಪೂರ, ಸೊಲ್ಲಾಪೂರ ಮತ್ತು ಔರಂಗಾಬಾದ ಜಿಲ್ಲೆಗಳಲ್ಲಿ. ಆದರೆ ಕಳೆದ 15 ದಿನಗಳ ಹಿಂದೆಯೇ ಕೊರೊನಾ ಮಾಹಾಮಾರಿಗೆ ಅಂಜಿ ಮಹಾರಾಷ್ಟ್ರ ಸರ್ಕಾರ ಸಂಪೂರ್ಣ ಲಾಕ್‌ಡೌನ್ ಘೋಷಣೆ ಮಾಡಿದ್ದರಿಂದ ಅಲ್ಲಿಗೆ ಅತೀ ಹೆಚ್ಚಿನ ಪ್ರಮಾಣದಲ್ಲಿ ಸಾಗಣೆಯಾಗಬೇಕಿದ್ದ ಮಾವು ಹುಬ್ಬಳ್ಳಿ, ಧಾರವಾಡ ಮತ್ತು ಬೆಳಗಾವಿ ಗೋದಾಮುಗಳಲ್ಲಿಯೇ ಉಳಿದುಕೊಂಡಿದೆ.
ದಲ್ಲಾಳಿಗಳಿಗೂ ಬಿತ್ತು ಹೊಡೆತ:
ಪ್ರತಿ ವರ್ಷ ರೈತರು ಮಾತ್ರ ಮಾವಿನ ಹಾನಿ ಅನುಭವಿಸುತ್ತಿದ್ದರು. ಆದರೆ ಈ ವರ್ಷ ಕೊರೊನಾ ಸಂಪೂರ್ಣ ಕರ್ಫ್ಯೂನಿಂದ ನೇರವಾಗಿ ದಲ್ಲಾಳಿಗಳಿಗೂ ಹೊಡೆತ ಬಿದ್ದಿದೆ. ಸಂಕ್ರಾಂತಿ ಸುತ್ತ ತೋಟಗಳನ್ನು ಮುಂಗಡ ಕೊಟ್ಟು ಖರೀದಿಸಿಟ್ಟುಕೊಂಡ ದಲ್ಲಾಳಿಗಳು ರೈತರಿಗೆ ಅರ್ಧ ಹಣ ನೀಡಿ ಉಳಿದ ಹಣವನ್ನು ಸುಗ್ಗಿ ಸಂದರ್ಭದಲ್ಲಿ ನೀಡುತ್ತಾರೆ. ಈ ವರ್ಷ ಹೇಗೋ ಕೊರೊನಾ ಸಂಕಷ್ಟದಿಂದ ಮರಳಿ ಮಾರುಕಟ್ಟೆ ಹಳಿಗೆ ಬಂದಿದೆ ಎನ್ನುವ ಧೈರ್ಯದಲ್ಲಿ ದಲ್ಲಾಳಿಗಳು ಕೊಂಚ ಹೂಡಿಕೆ ಮಾಡಿದ್ದಾರೆ. ಇದೀಗ ಲಾಕ್‌ಡೌನ್ ಬಂದಿದ್ದರಿಂದ ಅವರ ಬಳಿಯೇ ಮಾವು ಉಳಿದುಕೊಳ್ಳಬೇಕಿದೆ.