ರಾಮನಗರ: ಮಾವು ಉತ್ಪಾದನೆಯಲ್ಲಿ ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿರುವ ರಾಮನಗರ ಜಿಲೆಯಲ್ಲಿ ಗ್ರಾಹಕರು ಮತ್ತು ರೈತರ ನಡುವೆ ನೇರ ಮಾರುಕಟ್ಟೆ ಸೃಷ್ಟಿಸುವ ಉದ್ದೇಶದಿಂದ ಜಿಲ್ಲಾ ಪಂಚಾಯ್ತಿ ಮತ್ತು ತೋಟಗಾರಿಕಾ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆಸುತ್ತಾ ಬಂದಿದ್ದ ಮಾವು ಮೇಳ, ಈ ಬಾರಿ ನಡೆಯುವುದು ಅನುಮಾನ ಎನಿಸಿದೆ.
ಪ್ರತಿ ವರ್ಷ ಮೇ ತಿಂಗಳ ಮೊದಲ ವಾರ ಅಥವಾ ಎರಡನೇ ವಾರದಲ್ಲಿ ಮೂರು ದಿನಗಳ ಕಾಲ ಮಾವು ಮೇಳವನ್ನು ನಡೆಸಿ ಗ್ರಾಹಕರಿಗೆ ರಾಸಾಯಿನಿಕ ಮುಕ್ತ ಮಾವನ್ನು ರೈತರಿಂದ ನೇರವಾಗಿ ಖರೀದಿಸಲು ಅವಕಾಶ ನೀಡಲಾಗಿತ್ತು. ಇನ್ನು ಮಾವು ಮೇಳದಲ್ಲಿ ಕರುಸಿರಿ ಬ್ರಾಂಡ್‌ನ ಹೆಸರಿನಲ್ಲಿ ಜಿಲ್ಲೆಯ ಪ್ರಸಿದ್ಧ ಮಾವಿನ ತಳಿಗಳಾದ ಬಾದಾಮಿ, ರಸಪುರಿ, ಮಲ್ಲಿಕಾ, ಸೇಂ ಧೂರ, ಮಲಗೋವಾ ತಳಿಗಳು ಗ್ರಾಹಕರನ್ನು ಆಕರ್ಷಿಸುತ್ತಿದ್ದವು. ಸಾವ ಯವ ವಿಧಾನದಲ್ಲಿ ಹಣ್ಣು ಮಾಡಿದ ಹಾಗೂ ಗುಣ ಮಟ್ಟದ ಮಾವು ದೊರೆ ಯುತ್ತಿದ್ದರಿಂದ ಗ್ರಾಹಕರು ಖರೀದಿಗೆ ಉತ್ಸಾಹ ತೋರುತ್ತಿದ್ದರು.
ಭರ್ಜರಿ ವ್ಯಾಪಾರ: ಕಳೆದ ಸಾಲಿನಲ್ಲಿ ಚನ್ನಪಟ್ಟಣ ತಾಲೂಕಿನ ಕೆಂಗಲ್ ತೋಟಗಾರಿಕಾ ಫಾರಂನಲ್ಲಿ ನಡೆದ ಮಾವು ಮೇಳದಲ್ಲಿ 30ಕ್ಕೂ ಹೆಚ್ಚು ರೈತರು ಸ್ಟಾಲ್ ತೆರೆದಿದ್ದರು. ಈ ಮೇಳದಲ್ಲಿ 400 ಟನ್ ನಷ್ಟು ಮಾವು ಮಾರಾಟವಾಗಿದ್ದು, 4.65 ಲಕ್ಷ ರೂ. ವಹಿವಾಟು ನಡೆದಿತ್ತು. ಕೊರೊ ನಾದಿಂದ ಎರಡು ವರ್ಷ ಸ್ಥಗಿತ ವಾಗಿದ್ದ ಮಾವು ಮೇಳ ಕಳೆದ ಸಾಲಿ ನಲ್ಲಿ ಆರಂಭಗೊಂಡಾಗ ಗ್ರಾಹಕ ರಿಂದ ಸಿಕ್ಕ ಸ್ಪಂದನೆ ರೈತರು ಮತ್ತು ತೋ ಟಗಾರಿಕಾ ಇಲಾಖೆ ಅಧಿ ಕಾರಿಗಳ ಉತ್ಸಾಹ ಹೆಚ್ಚಿಸಿತ್ತು.
ವಿಳಂಬಕ್ಕೆ ನೂರೆಂಟು ಕಾರಣ: ಈ ಬಾರಿ ಮೇ ತಿಂಗಳಲ್ಲಿ ಮಾವು ಮೇಳ ಆರಂಭಿಸಬೇಕಿತ್ತಾದರೂ, ಮಾವು ಮೇಳ ನಡೆಸಲು ನೂರೆಂಟು ಸಮಸ್ಯೆಗಳು ತೋಟಗಾರಿಕಾ ಇಲಾಖೆಗೆ ಎದು ರಾಗಿದೆ. ಮಾರ್ಚ್ ಅಂತ್ಯದಿಂದ ಮೇ 13ರ ವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದಿದ್ದು, ತೋಟ ಗಾರಿಕಾ ಇಲಾಖೆ ಜಿಲ್ಲಾ ಉಪನಿರ್ದೇ ಶಕರನ್ನು ಚುನಾವಣಾಧಿಕಾರಿಯಾಗಿ ನೇಮಕ ಮಾಡಿದ್ದರಿಂದ ಮಾವು ಮೇಳಕ್ಕೆ ಇಲಾಖೆ ಸಿದ್ಧತೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಇದೀಗ ನೀತಿ ಸಂಹಿತೆ ಮುಗಿದಿದೆ.
Related Articles
ಆದರೆ, ಜಿಲ್ಲೆಯ ಪ್ರಮುಖ ಮಾವಿನ ತಳಿಯಾದ ಬಾದಾಮಿ ತಳಿಯ ಮಾವು ಬಹುತೇಕ ಖಾಲಿಯಾಗಿದ್ದು, ರೈತರ ಬಳಿ ಮಾರಾಟ ಮಾಡಲು ಬಾದಾಮಿ ತಳಿಯ ಮಾವು ಇಲ್ಲವಾಗಿದೆ. ಸೇಂದೂರು ಹಾಗೂ ಇನ್ನಿತರ ಸ್ಥಳೀಯ ತಳಿಗಳನ್ನು ಇರಿಸಿ ಕೊಂಡು ಮಾವು ಮೇಳ ನಡೆಸುವುದು ಕಷ್ಟ ಸಾಧ್ಯ. ಇನ್ನು ಈ ವರ್ಷ ಮಾವಿನ ಫಸಲು ಕಡಿಮೆಯಾಗಿದ್ದು, ಶೇ.60ರಷ್ಟು ಇಳುವರಿ ಕಡಿಮೆಯಾಗಿರುವುದು ಮಾವು ಮೇಳ ನಡೆಸಲು ಸಮಸ್ಯೆಯಾಗಿದೆ.
ಸ್ಟಾಲ್ ತೆರೆಯಲು ನಿರಾಸಕ್ತಿ: ಮಾವು ಮೇಳ ಆಯೋಜನೆಗೆ ಸಂಬಂಧಿಸಿದಂತೆ ಶುಕ್ರವಾರ ತೋಟಗಾರಿಕಾ ಇಲಾಖೆ ಜಿಲ್ಲಾ ಕಚೇರಿಯಲ್ಲಿ ಸ್ಟಾಲ್ ತೆರೆಯುವ ರೈತರು ಮತ್ತು ಮಾವು ಬೆಳೆಗಾರರು, ಪಿಎಫ್‌ಒಗಳು ಹಾಗೂ ಆಸಕ್ತರ ಸಭೆಯಲ್ಲಿ ಕರೆಯಲಾಗಿತ್ತು. ಈ ಸಭೆಯಲ್ಲಿ ಕೇವಲ 7 ಮಂದಿ ಮಾತ್ರ ಹಾಜರಾಗಿ ಸ್ಟಾಲ್ ತೆರೆಯುವುದಾಗಿ ಹೇಳಿದ್ದು, ಮೇಳ ನಡೆಸಲು ಕನಿಷ್ಠ 25 ರಿಂದ 30 ಸ್ಟಾಲ್ ಗಳಾದರೂ ಬೇಕಿರುವ ಕಾರಣ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಮಾವು ಮೇಳ ಆರಂಭಿಸಲು ಚಿಂತಿಸುವಂತಾಗಿದೆ. ಹೆದ್ದಾರಿಯದ್ದೂ ಸಮಸ್ಯೆ ಈ ಹಿಂದೆ ಮಾವು ಮೇಳವನ್ನು ಜಾನಪದ ಲೋಕದಲ್ಲಿ ಆಯೋಜಿಸಲಾಗುತಿತ್ತು.
ಬಳಿಕ ಮಾವು ಮೇಳವನ್ನು ಕೆಂಗಲ್ ಸಮೀಪದ ತೋಟಗಾರಿಕಾ ಫಾರಂನಲ್ಲಿ ನಡೆಸಲಾಗುತಿತ್ತು. ಆದರೆ, ಬೆಂ-ಮೈ ಎಕ್ಸ್‌ಪ್ರೆಸ್ ವೇಗೆ ಬೈಪಾಸ್ ನಿರ್ಮಾಣ ಮಾಡಿದ ಪರಿಣಾಮ ಈ ಎರಡೂ ಸ್ಥಳಗಳಲ್ಲಿ ಮಾವು ಮೇಳೆ ಆಯೋಜಿಸಿದರೆ ಬೆಂಗಳೂರಿನ ಗ್ರಾಹಕರನ್ನು ಸೆಳೆಯಲು ಸಾಧ್ಯ ಆಗುವುದಿಲ್ಲ. ಹೆದ್ದಾರಿ ಪಕ್ಕದಲ್ಲಿ ಆಯೋಜಿಸಿದರೆ ಆಗಮನ ಮತ್ತು ನಿರ್ಗಮನಕ್ಕೆ ಸೂಕ್ತವಾದ ಸ್ಥಳವನ್ನು ಆಯ್ಕೆ ಮಾಡಬೇಕು. ಈ ಜಾಗ ಎಲ್ಲಿದೆ. ಇದಕ್ಕೆ ಹೆದ್ದಾರಿ ಪ್ರಾಧಿಕಾರದ ಅನುಮತಿ ಪಡೆದು ಮೇಳ ಆಯೋಜಿಸುವುದು ತೋಟಗಾರಿಕಾ ಇಲಾಖೆಗೆ ಸವಾಲಿನ ಪ್ರಶ್ನೆಯಾಗಿದೆ.
ಮಾವು ಮೇಳ ಆರಂಭಿಸಲು ತೋಟಗಾರಿಕಾ ಇಲಾಖೆ ಸಿದ್ಧವಿದೆ. 25ಕ್ಕೂ ಹೆಚ್ಚು ಮಂದಿ ರೈತರು ಮಳಿಗೆ ತೆರೆಯಲು ಬಂದರೆ ಮೇ ತಿಂಗಳ ಕೊನೆಯ ಶುಕ್ರವಾರ, ಶನಿವಾರ ಮತ್ತು ಭಾನುವಾರ ಮಾವು ಮೇಳವನ್ನು ಆಯೋಜಿಸಲಾಗುವುದು. ಸದ್ಯಕ್ಕೆ 7 ಮಂದಿ ರೈತರು ಮಾತ್ರ ನೋಂದಾಯಿಸಿಕೊಂಡಿದ್ದು, ಅವರನ್ನು ಮಡಿಕೇರಿ ಮತ್ತು ಮಂಗಳೂರಿನಲ್ಲಿ ನಡೆಯಲಿರುವ ಮಾವು ಮೇಳಕ್ಕೆ ಕಳುಹಿಸಲು ಕ್ರಮ ವಹಿಸಲಾಗುವುದು. -ಮುನೇಗೌಡ, ತೋಟಗಾರಿಕಾ ಇಲಾಖೆ ಉಪನಿರ್ದೇಶಕ
ಬಾದಾಮಿ ಸೇರಿದಂತೆ ಪ್ರಮುಖ ತಳಿಯ ಮಾವಿನ ಹಣ್ಣು ಖಾಲಿ ಆಗಿವೆ. ಇನ್ನು ಈ ಬಾರಿ ಸರಿಯಾಗಿ ಬೆಳೆ ಬಂದಿಲ್ಲ. ರೈತರ ಸರಿಯಾಗಿ ಸ್ಪಂದನೆ ಇಲ್ಲದ ಕಾರಣ ಮಾವು ಮೇಳ ನಡೆಸಲು ಸಾಧ್ಯವಾಗುತ್ತಿಲ್ಲ. ಮೇ ತಿಂಗಳ ಮೊದಲ ವಾರದಲ್ಲಿ ಮಾವು ಮೇಳ ನಡೆಸಿದ್ದರೆ ಅನುಕೂಲ ಆಗುತಿತ್ತು. ಆದರೆ, ಚುನಾವಣೆ ಕಾರಣದಿಂದ ಇದು ಸಾಧ್ಯವಾಗಿಲ್ಲ. ಇನ್ನು ಎಕ್ಸ್‌ಪ್ರೆಸ್ ವೇ ನಿರ್ಮಾಣದಿಂದ ಎಲ್ಲಿ ಮೇಳ ನಡೆಸುವುದು ಎಂಬ ಜಿಜ್ಞಾಸೆ ಸಹ ಕಾಡುತ್ತಿದೆ.– ಧರಣೀಶ್ ರಾಂಪುರ, ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ
-ಸು.ನಾ.ನಂದಕುಮಾರ್