Advertisement

ಮ್ಯಾಂಗೋ ಬಂದು ಬಾಗಿಲು ತಟ್ಟಿತು!

04:42 PM Apr 01, 2017 | Team Udayavani |

ಒಂದು ಕಡೆ ಬೇಸಿಗೆ ಆರಂಭವಾಗಿದೆ. ಇನ್ನೊಂದೆಡೆ ಹಣ್ಣುಗಳ ರಾಜ ಮಾವಿನ ದರ್ಬಾರೂ ಶುರುವಾಗಿದೆ. ಆದರೆ, ಬಿರುಬಿಸಿಲಿನ ಕಾರಣದಿಂದ ಪೇಟೆಗೋ, ಮಾವು ಮಳಿಗೆಗೋ ಹೋಗಿ ಮಾವು ಖರೀದಿಸಲು ಹಲವರು ಹಿಂದೇಟು ಹಾಕುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಬಗೆಬಗೆಯ ಮಾವಿನ ಹಣ್ಣುಗಳನ್ನು ಗ್ರಾಹಕರ ಮನೆಬಾಗಿಲಿಗೇ ತಲುಪಿಸುವ ವಿಶಿಷ್ಟ ಯೋಜನೆಯೊಂದನ್ನು ಕಾರ್ಯರೂಪಕ್ಕೆ ತರಲು ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮವು ಸಿದ್ಧತೆ ನಡೆಸಿದೆ…

Advertisement

ಮಾವಿನ ಹಣ್ಣು ತಿನ್ನೋಕೆ ಯಾರಿಗೆ ತಾನೇ ಇಷ್ಟ ಆಗೋಲ್ಲ ಹೇಳಿ! ಅದರಲ್ಲೂ ಬಿಸಿಲಲ್ಲಿ ಮಾರುಕಟ್ಟೆ ಸುತ್ತದೇ, ಮೈಕೈ ನೋಯಿಸಿಕೊಳ್ಳದೇ ಮನೆ ಬಾಗಿಲಿನಲ್ಲೇ ಮಾವಿನ ಹಣ್ಣು ಸಿಕ್ಕುವಂತಾದರೆ ಹೇಗಿರುತ್ತೆ ಅಲ್ಲವೇ?! ಹೌದು ಇಂತಹದೊಂದು ಪ್ರಯತ್ನಕ್ಕೆ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಮುಂದಾಗಿದೆ. ನಗರದಲ್ಲಿ ಸಂಚಾರಿ ಗ್ರಂಥಾಲಯ ಮಾದರಿಯಲ್ಲಿ ಚಾರಿ ಮಾವು ಮಳಿಗೆ ಆರಂಭಿಸಲು ಮಾವು ನಿಗಮ ಚಿಂತನೆ ನಡೆಸಿದೆ.

ಈಗಾಗಲೇ ನಗರದ ಸುಮಾರು 50ಕ್ಕೂ ಹೆಚ್ಚು ಜಾಗಗಳಲ್ಲಿ ಮಾವು ಮಾರಾಟ ಮಳಿಗೆ ಆರಂಭಿಸಿ, ಮಾವು ಮೇಳ ಆಯೋಜಿಸಲು ಮಾವು ನಿಗಮ ಸಿದ್ಧತೆ ನಡೆಸಿದೆ. ಜತೆಗೆ ಸಿಲಿಕಾನ್‌ ಸಿಟಿ ಜನರ ಮನೆ ಬಾಗಿಲಿಗೆ ಮಾವು ತಲುಪಿಸಿ ಮಾವಿನ ಮಾರುಕಟ್ಟೆ ವಿಸ್ತರಿಸುವ ಉದ್ದೇಶವೂ ಮಾವು ನಿಗಮದ ಅಧಿಕಾರಿಗಳಿಗಿದೆ. ಈ ಬಾರಿ 5 ಮೊಬೈಲ್‌ ಮ್ಯಾಂಗೋ ವೆಹಿಕಲ್‌ಗ‌ಳನ್ನು ಪ್ರಾಯೋಗಿಕವಾಗಿ ಬಿಡುವ ಕುರಿತು ಯೋಜನೆ ರೂಪಿಸಲಾಗುತ್ತಿದೆ. ಇದು ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಹೆಚ್ಚು ಮೊಬೈಲ್‌ ಮ್ಯಾಂಗೋ ವೆಹಿಕಲ್‌ ಬಿಡುವ ಚಿಂತನೆ ಇದೆ ಎಂದು ಮಾವು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕದಿರೇಗೌಡ ಅವರು ಮಾಹಿತಿ ನೀಡಿದ್ದಾರೆ.

ವಿವಿಧ ಕಂಪನಿಗಳು, ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಸಂಚಾರಿ ಮಾವು ಮಳಿಗೆ ವ್ಯವಸ್ಥೆಗೆ ನಿಗಮ ಯೋಜನೆ ರೂಪಿಸಿದೆ. ದಿನವಿಡೀ ಕೆಲಸ ಮಾಡಿ ಮನೆಗೆ ಸುಸ್ತಾಗಿ ಬರುವವರಿಗೆ ಮಾರುಕಟ್ಟೆಗೆ ಹೋಗಿ ಮಾವು ಖರೀದಿಸುವಷ್ಟು ತಾಳ್ಮೆ ಇರುವುದಿಲ್ಲ. ಅಂತಹವರಿಗೆ ಮನೆ ಬಾಗಿಲಿನಲ್ಲೇ ಮಾವು ಸಿಗುವಂತೆ ಮಾಡುವ ಉದ್ದೇಶ ಮಾವು ಅಭಿವೃದ್ಧಿ ನಿಗಮದ್ದು.

ಇದಕ್ಕೂ ಮೊದಲು ವಿವಿಧ ಅಪಾರ್ಟ್‌ಮೆಂಟ್‌ಗಳ ಅಸೋಸಿಯೇಷನ್‌ಗಳನ್ನು ಸಂಪರ್ಕಿಸಿ, ಮಾತುಕತೆ ನಡೆಸಲಾಗುವುದು. ಅಪಾರ್ಟ್‌ಮೆಂಟ್‌ನಲ್ಲಿ ಸಂಚಾರಿ ಮಾವು ಮಳಿಗೆಗೆ ಅವಕಾಶ ಕಲ್ಪಿಸಿದರೆ, ನಿಗದಿತ ಅವಧಿಯಲ್ಲಿ ವಿವಿಧ ಬಗೆಯ ಮಾವಿನ ಹಣ್ಣುಗಳನ್ನು ತೆಗೆದುಕೊಂಡು ಹೋಗಿ ಮಾರಾಟ ಮಾಡಲಾಗುವುದು. ಸಂಚಾರಿ ಮಾವು ಮಳಿಗೆ ಕುರಿತು ಆಸಕ್ತಿ ಇರುವ ರೈತರಿಗೆ ಮೊದಲ ಪ್ರಾಮುಖ್ಯತೆ ನೀಡಲು ಉದ್ದೇಶಿಸಲಾಗಿದೆ.

Advertisement

ಖಾಸಗಿ ಸಹಭಾಗಿತ್ವ ಸಂಚಾರಿ ಮಳಿಗೆ ತೆರೆಯಲು ಖಾಸಗಿ ವಾಹನಗಳ ಸಂಸ್ಥೆಯೊಂದಿಗೆ ಒಪ್ಪಂದ
ಮಾಡಿಕೊಳ್ಳಲಾಗುವುದು. ದಿನಕ್ಕೆ ಇಂತಿಷ್ಟು ಬಾಡಿಗೆ ನಿಗದಿಪಡಿಸಿ, ವಾಹನಗಳನ್ನು ನಿಗಮವೇ ರೈತರಿಗೆ ಉಚಿತವಾಗಿ ಕೊಡಲಿದೆ. ಪ್ರಾಯೋಗಿಕವಾಗಿ ಐದು ಸಂಚಾರಿ ಮಾವು ಮಳಿಗೆ ತೆರೆಯಲು ಅವಕಾಶವಿದ್ದು, ಮಾವಿನ ಸೀಜ‚ನ್‌ ಆರಂಭವಾದ ಕೂಡಲೇ ಸಂಚಾರಿ ಮಾವು ಮಳಿಗೆ ಆರಂಭಿಸಲಾಗುವುದು ಎಂದು ನಿಗಮದ ಮೂಲಗಳು ತಿಳಿಸಿವೆ.

ಆನ್‌ಲೈನ್‌ನಲ್ಲೂ ಮಾವು ಕಳೆದ ಬಾರಿಯಂತೆ ಈ ಬಾರಿಯೂ ಆನ್‌ಲೈನ್‌ನಲ್ಲಿ ಮಾವು ಮಾರಾಟ ನಡೆಯಲಿದೆ. ನಿಗಮದ ಮಾವು ಆನ್‌ಲೈನ್‌ ಮಾರಾಟಕ್ಕಾಗಿಯೇ ವೆಬ್‌ಸೈಟ್‌ ಆರಂಭಿಸಲಿದ್ದು, ಮಾವು ಸೀಜ‚ನ್‌ ಸಂದರ್ಭದಲ್ಲಿ ಇದು ಕಾರ್ಯೋನ್ಮುಖವಾಗಲಿದೆ. ಗ್ರಾಹಕರು ರೈತರಿಂದ ದೊರೆಯುವ ಮಾವು ತಳಿಗಳನ್ನು ಗುರುತಿಸಿ, ತಮಗೆ ಬೇಕಾದಷ್ಟು ಹಣ್ಣುಗಳ ಬೇಡಿಕೆ ಸಲ್ಲಿಸಬಹುದು. ಅದೇ ಮಾದರಿಯಲ್ಲಿ ಸಂಚಾರಿ ಮಾವು ಮಳಿಗೆಗಳಲ್ಲಿ ಸಿಗುವಂತಹ ಹಣ್ಣುಗಳ ಮಾಹಿತಿಯನ್ನು ಕೂಡ ಈ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡುವ ಗುರಿ ಇದೆ ಎಂದು ಮಾವು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕದಿರೇಗೌಡ ವಿವರಿಸಿದ್ದಾರೆ. 

ಅಂದಿನ ಮಾರುಕಟ್ಟೆ ದರಕ್ಕೆ ತಕ್ಕಂತೆ ಮಾವಿನ ಹಣ್ಣುಗಳ ದರ ನಿಗದಿಪಡಿಸಲಾಗಿರುತ್ತದೆ. ಮೇಳದ ಸಂದರ್ಭದಲ್ಲಿ ರಿಯಾಯಿತಿ ನೀಡುವ ಕುರಿತು ರೈತರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಸಂಚಾರಿ ಮಾವು ಮಳಿಗೆಗಳಲ್ಲಿ ಖರೀದಿ ಮಾಡುವ ಗ್ರಾಹಕರಿಗೆ ಶೇ.5ರಿಂದ 10ರಷ್ಟು ರಿಯಾಯಿತಿ ನೀಡುವ ಉದ್ದೇಶವಿದೆ.
 ಕದಿರೇಗೌಡ, ವ್ಯವಸ್ಥಾಪಕ ನಿರ್ದೇಶಕ, ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ

Advertisement

Udayavani is now on Telegram. Click here to join our channel and stay updated with the latest news.

Next