ಮೈಸೂರು: ಮೈಸೂರು-ಚಾಮರಾಜನಗರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ನಡೆಯುವ ವಿಧಾನಪರಿಷತ್ ಚುನಾವಣೆ ನಾಮಪತ್ರ ಸಲ್ಲಿಸಲು ಒಂದು ದಿನವಿರುವಾಗ ಕಾಂಗ್ರೆಸ್ ಮುಖಂಡ ಸಿ.ಎನ್. ಮಂಜೇಗೌಡ ಜೆಡಿಎಸ್ ಸೇರಿದ್ದಾರೆ. ಮಂಜೇಗೌಡರಿಗೆ ಬಹುತೇಕ ಟಿಕೆಟ್ ಖಚಿತವಾಗಿದೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ಮೈಸೂರು-ಚಾಮರಾಜನಗರ, ಮಂಡ್ಯ ಜಿಲ್ಲೆಯ ಸ್ಥಳೀಯ ಸಂಸ್ಥೆಗೆ ಅಭ್ಯರ್ಥಿ ಆಯ್ಕೆ ಸಂಬಂಧ ನಡೆದ ಪಕ್ಷದ ಮುಖಂಡರ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಪಕ್ಷದ ಬಾವುಟ ನೀಡಿ ಬರಮಾಡಿಕೊಂಡರು.
ಬಳಿಕ ತಡರಾತ್ರಿವರೆಗೂ ಮಾಜಿ ಸಿಎಂ ಕುಮಾರಸ್ವಾಮಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ಸಂದೇಶ್ ನಾಗರಾಜ್ ಅವರಿಗೆ ಟಿಕೆಟ್ ನೀಡಲು ಕಾರ್ಯಕರ್ತರ ತೀವ್ರ ವಿರೋಧವಿದೆ.
ಇದನ್ನೂ ಓದಿ:- ರಾತ್ರಿ ವೇಳೆ ರಸ್ತೆ ಮೇಲೆ ನಿಂತಿದ್ದ ಕಬ್ಬಿನ ಟ್ರ್ಯಾಕ್ಟರ್ ಗೆ ಬೈಕ್ ಡಿಕ್ಕಿ : ಇಬ್ಬರ ಸಾವು
ಸಂದೇಶ್ ನಾಗರಾಜ್ ಕೊನೆ ಕ್ಷಣದಲ್ಲಿ ಟಿಕೆಟ್ ನೀಡುವಂತೆ ಪ್ರಯತ್ನಿಸಿದರು. ಅವರು ನಡೆದುಕೊಂಡ ರೀತಿ ಕಾರ್ಯಕರ್ತರಲ್ಲಿ ಅಸಮಧಾನ ಉಂಟು ಮಾಡಿದೆ. ಕಾರ್ಯಕರ್ತರ ಅಭಿಪ್ರಾಯವನ್ನು ನಾನು ಗೌರವಿಸಲೇಬೇಕಿದೆ. ಶಾಸಕರ ಅಭಿಪ್ರಾಯ ಪಡೆದು ಅಭ್ಯರ್ಥಿಯ ಹೆಸರನ್ನು ಪ್ರಕಟಿಸುವುದಾಗಿ ತಿಳಿಸಿದರು.
ಬೆಂಗಳೂರು ಗ್ರಾಮಾಂತರ, ರಾಮನಗರ, ಹಾಸನ, ಕೋಲಾರ, ಮೈಸೂರು ಮತ್ತು ತುಮಕೂರು ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧಿಸಲಿದೆ ಎಂದು ಹೇಳಿದರು. ಸಭೆಯಲ್ಲಿ ಶಾಸಕರಾದ ಸಾ.ರಾ. ಮಹೇಶ್, ಅಶ್ವಿನ್ ಕುಮಾರ್, ಕೆ. ಮಹದೇವ್, ಚಲುವೇಗೌಡ, ಬೀರಿಹುಂಡಿ ಬಸವಣ್ಣ, ಕೆ.ವಿ. ಮಲ್ಲೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.