ಮಂಗಳೂರು: ಮಿನಿ ಲಾರಿ ಢಿಕ್ಕಿ ಹೊಡೆದು ಪಾದಚಾರಿ ಮಹಿಳೆ ಮೃತಪಟ್ಟ ಪ್ರಕರಣದಲ್ಲಿ ನ್ಯಾಯಾಲಯವು ತಪ್ಪಿತಸ್ಥ ಚಾಲಕನಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
2020ರ ಡಿ.6ರಂದು ಹಳೆಯಂಗಡಿ ಜಂಕ್ಷನ್ ಬಳಿ ಮಿನಿ ಲಾರಿಯ ಚಾಲಕ ರಾಜೇಶ್ ಪೂಜಾರಿ ನಿರ್ಲಕ್ಷ್ಯತನದಿಂದ ಚಲಾಯಿಸಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಸುಖಲತಾ (45) ಅವರಿಗೆ ಢಿಕ್ಕಿ ಹೊಡೆಸಿದ್ದ. ಪರಿಣಾಮವಾಗಿ ಮಹಿಳೆ ಮೃತಪಟ್ಟು, ಅವರ ಜತೆಗಿದ್ದ ಬಾಲಕನ ತಲೆಗೆ ಗಂಭೀರ ಗಾಯವಾಗಿತ್ತು.
ವಿಚಾರಣೆ ನಡೆಸಿದ ಮೂಡುಬಿದಿರೆಯ ಸಿಜೆ ಮತ್ತು ಜೆಎಂಸಿ ನ್ಯಾಯಾಲಯದ ನ್ಯಾಯಾಧೀಶರು ಚಾಲಕ ರಾಜೇಶ್ ಪೂಜಾರಿಗೆ ಐಪಿಸಿ ಕಲಂ 279ರಡಿಯಲ್ಲಿ 6 ತಿಂಗಳ ಸಾದಾ ಕಾರಾಗೃಹವಾಸ, 500 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿಯಾಗಿ 7 ದಿನಗಳ ಸಾದಾ ಕಾರಾಗೃಹವಾಸ, ಐಪಿಸಿ ಕಲಂ 338ರ ಅಡಿಯಲ್ಲಿ 6 ತಿಂಗಳ ಸಾದಾ ಕಾರಾಗೃಹವಾಸ, 500 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿಯಾಗಿ 7 ದಿನಗಳ ಸಾದಾ ಕಾರಾಗೃಹವಾಸ, ಐಪಿಸಿ ಕಲಂ 304(ಎ) ಅಡಿಯಲ್ಲಿ 2 ವರ್ಷಗಳ ಸಾದಾ ಜೈಲು ಶಿಕ್ಷೆ, 5,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿಯಾಗಿ 30 ದಿನಗಳ ಜೈಲು ಶಿಕ್ಷೆ ವಿಧಿಸಿದ್ದಾರೆ.
ಪೊಲೀಸ್ ನಿರೀಕ್ಷಕರಾಗಿದ್ದ ಮೋಹನ್ ಕೊಟ್ಟಾರಿ ತನಿಖೆ ನಡೆಸಿದ್ದರು. ಸರಕಾರದ ಪರವಾಗಿ ಅಭಿಯೋಜಕಿ ಶೋಭಾ ಎಸ್. ವಾದಿಸಿದ್ದರು. ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ ಅಧಿಕಾರಿ ಮತ್ತು ಸಿಬಂದಿಗೆ ಪೊಲೀಸ್ ಆಯುಕ್ತರು ಬಹುಮಾನ ಘೋಷಿಸಿದ್ದಾರೆ.