Advertisement

Mangaluru ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಲೋಕಾಯುಕ್ತ ಬಲೆಗೆ

12:32 AM Mar 24, 2024 | Team Udayavani |

ಮಂಗಳೂರು : ಉದ್ಯಮಿ ಯೊಬ್ಬರಿಂದ ದಲ್ಲಾಳಿಯ ಮೂಲಕ 25 ಲಕ್ಷ ರೂ. ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮನ್ಸೂರ್‌ ಆಲಿ ಮತ್ತು ದಲ್ಲಾಳಿ ಮಹಮ್ಮದ್‌ ಸಲೀಂ ಎಂಬವನನ್ನು ಲೋಕಾಯುಕ್ತ ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ.

Advertisement

ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಪಚ್ಚನಾಡಿ ಮತ್ತು ಕುಡುಪು ಗ್ರಾಮಗಳ ಸುತ್ತಮುತ್ತ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಘನತ್ಯಾಜ್ಯ ನಿರ್ವಹಣೆಯ ಘಟಕವನ್ನು ಭವಿಷ್ಯದಲ್ಲಿ ವಿಸ್ತರಿಸುವ ಯೋಜನೆ ಹಾಕಲಾಗಿತ್ತು.

ದೂರುದಾರ ಉದ್ಯಮಿ ಮಂಗಳೂರು ತಾಲೂಕಿನ ಕುಡುಪು ಗ್ರಾಮದಲ್ಲಿ 10.8 ಎಕರೆ ಜಮೀನನ್ನು ಭೂಮಾಲಕರಿಂದ ಖರೀದಿಸಿ, ಪಾಲಿಕೆಯ ಯೋಜನೆಗಾಗಿ ಸ್ವಲ್ಪಾಂಶವನ್ನು ಬಿಟ್ಟುಕೊಟ್ಟಿದ್ದರು. ಜಮೀನನ್ನು ಟಿ.ಡಿ.ಆರ್‌. ನಿಯಮದಡಿ ಖರೀದಿ ಮಾಡುವ ಬಗ್ಗೆ ಮನಪಾದೊಂದಿಗೆ ಉದ್ಯಮಿ ಹಾಗೂ ಜಮೀನಿನ ಈ ಹಿಂದಿನ ಮಾಲಕರಿಗೆ ಪತ್ರ ವ್ಯವಹಾರವಾಗಿತ್ತು. ಅದರಂತೆ ಈ ಜಮೀನು 2024ರ ಜನವರಿಯಲ್ಲಿ ಮನಪಾ ಹೆಸರಿಗೆ ನೋಂದಣಿಯಾಗಿದೆ. ಬಳಿಕ ಮನಪಾ ಆಯುಕ್ತರು ಟಿ.ಡಿ.ಆರ್‌. ನೀಡಲು ಮುಡಾ ಆಯುಕ್ತರಿಗೆ ಫೆಬ್ರವರಿ ತಿಂಗಳಲ್ಲಿ ಕಳುಹಿಸಿದ್ದರು. ಆದರೆ ಮುಡಾ ಆಯುಕ್ತ ಮನ್ಸೂರ್‌ ಆಲಿ ಅವರು ಆ ಕಡತವನ್ನು ವಿಲೇವಾರಿ ಮಾಡದೆ ಬಾಕಿ ಇಟ್ಟಿದ್ದರು. ಈ ಬಗ್ಗೆ ಉದ್ಯಮಿ ಮುಡಾ ಆಯುಕ್ತ ಮನ್ಸೂರ್‌ ಆಲಿ ಅವರಲ್ಲಿ ವಿಚಾರಿಸಿದಾಗ 25 ಲಕ್ಷ ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು.

ಮುಡಾ ಆಯುಕ್ತ ಮನ್ಸೂರ್‌ ಆಲಿ ಅವರ ನಿರ್ದೇಶನದಂತೆ ದಲ್ಲಾಳಿ ಮಹಮ್ಮದ್‌ ಸಲೀಂ ಶನಿವಾರ ಸಂಜೆ ನಗರದ ಮಂಗಳಾ ಕ್ರೀಡಾಂಗಣದ ಬಳಿ ಉದ್ಯಮಿಯಿದ 25 ಲಕ್ಷ ರೂ. ಲಂಚದ ಹಣವನ್ನು ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಚುನಾವಣ ಪ್ರಯುಕ್ತ ಸಭೆಯಲ್ಲಿದ್ದ ಆಯುಕ್ತ ಮನ್ಸೂರ್‌ ಆಲಿ ಸಭೆ ಮುಗಿಸಿ ಹೊರಗೆ ಬರುತ್ತಿರುವಾಗ ಸಂಜೆ 6 ಗಂಟೆಯ ವೇಳೆಗೆ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಲೋಕಾಯುಕ್ತ ಪ್ರಭಾರ ಪೊಲೀಸ್‌ ಅಧೀಕ್ಷಕ ಚಲುವರಾಜು ಬಿ., ಮಾರ್ಗದರ್ಶನದಲ್ಲಿ ಮಂಗಳೂರು ಲೋಕಾಯುಕ್ತ ಪೊಲೀಸ್‌ ಠಾಣೆಯ ಪೊಲೀಸ್‌ ನಿರೀಕ್ಷಕರಾದ ಅಮಾನುಲ್ಲಾ ಎ., ಸುರೇಶ್‌ ಕುಮಾರ್‌ ಪಿ. ಅವರು ಸಿಬಂದಿಯ ಜತೆ ಕಾರ್ಯಾಚರಣೆ ನಡೆಸಿದ್ದಾರೆ.

Advertisement

ಮುಡಾ ಕಚೇರಿಯಲ್ಲಿ ಪತ್ತೆಯಾಗಿತ್ತು ಹಣದ ಬ್ಯಾಗ್‌
ಮುಡಾ ಕಚೇರಿಗೆ ಮಾ. 13ರಂದು ಲೋಕಾಯುಕ್ತ ದಾಳಿ ನಡೆದಿತ್ತು. ಈ ಸಂದರ್ಭ ಹಣವಿರುವ ಬ್ಯಾಗ್‌ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿತ್ತು. ದಾಳಿ ವೇಳೆ ಸುಮಾರು 16 ತಾಸುಗಳ ಕಾಲ ಪರಿಶೀಲನೆ ನಡೆಸಲಾಗಿತ್ತು. ಮಾತ್ರವಲ್ಲದೆ ಕಚೇರಿಯ ಅಧಿಕಾರಿಗಳಲ್ಲಿ ಮತ್ತು ಇತರ ವ್ಯಕ್ತಿಗಳ ಬಳಿಯಲ್ಲೂ ದೊಡ್ಡ ಮೊತ್ತದ ಹಣ ಕಂಡುಬಂದಿತ್ತು. ದೀರ್ಘ‌ ಕಾಲದಿಂದ ವಿಲೇವಾರಿಯಾಗದ ಹಲವಾರು ಕಡತಗಳು ಈ ವೇಳೆ ಪತ್ತೆಯಾಗಿದ್ದವು.

ಅಧಿಕಾರಿಗಳು ಫೋನ್‌ ಮೂಲಕ ಬ್ರೋಕರ್‌ಗಳೊಡನೆ ಹೊಂದಾಣಿಕೆ ಮಾಡುತ್ತಿರುವ ಬಗ್ಗೆಯೂ ಸಾಕ್ಷಿಗಳು ಲಭ್ಯವಾಗಿತ್ತು. ಈ ಕುರಿತ ತನಿಖೆ ಪ್ರಗತಿಯಲ್ಲಿರುವಾಗಲೇ ದೊಡ್ಡ ಮೊತ್ತದ ಲಂಚ ಪ್ರಕರಣ ಬೆಳಕಿಗೆ ಬಂದಿದೆ.

ಆಯುಕ್ತರ ಮೇಲೆ ಲೈಂಗಿಕ ಕಿರುಕುಳ ಆರೋಪ
ಮುಡಾ ಆಯುಕ್ತ ಮನ್ಸೂರ್‌ ಆಲಿ ಅವರ ಮೇಲೆ ಕೆಲವು ತಿಂಗಳುಗಳ ಹಿಂದೆ ಮುಡಾ ಕಚೇರಿ ಸಿಬಂದಿಯೇ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದರು. ಈ ಬಗ್ಗೆ ಉರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next