Advertisement

ಮಂಗಳೂರು ವಿ.ವಿ. ಕಾಲೇಜಿನಲ್ಲಿ ಹಿಜಾಬ್‌ ವಿವಾದ : ಪ್ರತಿಭಟನೆ

11:52 PM May 26, 2022 | Team Udayavani |

ಮಂಗಳೂರು : ಹಂಪನಕಟ್ಟೆ ಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಹಿಜಾಬ್‌ ಕುರಿತ ಆದೇಶವನ್ನು ಸಮರ್ಪಕವಾಗಿ ಅನುಷ್ಠಾನಿಸಬೇಕು ಎಂದು ಆಗ್ರಹಿಸಿ ಕೆಲವು ವಿದ್ಯಾರ್ಥಿಗಳು ಗುರುವಾರ ಕಾಲೇಜಿನ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಹಿಜಾಬ್‌ ಧರಿಸಲು ಅವಕಾಶವಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ. ವಿ.ವಿ.ಯ ಸಿಂಡಿಕೇಟ್‌ ಸಭೆಯಲ್ಲಿ ಕೂಡ ಪೂರಕ ನಿರ್ಣಯ ಕೈಗೊಳ್ಳಲಾಗಿದೆ. ಆದರೆ ಕಾಲೇಜಿನಲ್ಲಿ ಹಿಜಾಬ್‌ಗ ಅವಕಾಶ ಮಾಡಿಕೊಡುತ್ತಿದ್ದಾರೆ ಎಂದು ಪ್ರತಿಭಟನೆ ನಿರತರು ಆರೋಪಿಸಿದರು.

44 ವಿದ್ಯಾರ್ಥಿನಿಯರು ಹಿಜಾಬ್‌ ಹಾಕಿಕೊಂಡು ಬರುತ್ತಿದ್ದಾರೆ. ಕೆಲವು ಉಪನ್ಯಾಸಕರು ಇದಕ್ಕೆ ಅವಕಾಶ ಮಾಡಿಕೊಡು ತ್ತಿದ್ದಾರೆ. ಆರಂಭದಲ್ಲಿ ವಿದ್ಯಾರ್ಥಿಗಳ ಪರ ಇದ್ದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಈಗ ಪ್ರಾಂಶುಪಾಲರ ಪರ ಮಾತನಾಡುತ್ತಿದ್ದಾರೆ. ಹಾಗಾಗಿ ಅಧ್ಯಕ್ಷರನ್ನು ಬದಲಾಯಿಸಬೇಕು. ಕಾಲೇಜು ಅಭಿವೃದ್ಧಿ ಸಮಿತಿಯ ಸಭೆ ಶೀಘ್ರ ನಡೆಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.

ಕುಲಸಚಿವರಿಂದ ಭರವಸೆ
ಕುಲಸಚಿವ ಕಿಶೋರ್‌ ಕುಮಾರ್‌ ಸ್ಥಳಕ್ಕೆ ಆಗಮಿಸಿ ಸೂಕ್ತ ಕ್ರಮದ ಭರವಸೆ ನೀಡಿದ ಅನಂತರ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು.

ಡಿಸಿ ಕಚೇರಿಗೆ ದೌಡು
ಇದೇ ವೇಳೆ ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ತಮಗೆ ಹಿಜಾಬ್‌ ಧರಿಸಿ ತರಗತಿಗೆ ಹಾಜರಾಗಲು ಅನುಮತಿಸುವಂತೆ ಮನವಿ ಸಲ್ಲಿಸಲು ಜಿಲ್ಲಾಧಿಕಾರಿ ಕಚೇರಿಗೆ ತೆರಳಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಇರಲಿಲ್ಲ. ದೂರವಾಣಿಯಲ್ಲಿ ವಿದ್ಯಾರ್ಥಿನಿಯರೊಂದಿಗೆ ಮಾತನಾಡಿದ ಅವರು ಸೋಮವಾರದ ವರೆಗೆ ಸಮಯ ನೀಡುವಂತೆ ಕೇಳಿಕೊಂಡಿದ್ದು, ಬಳಿಕ ವಿದ್ಯಾರ್ಥಿನಿಯರು ವಾಪಸಾದರು.

Advertisement

ಇದನ್ನೂ ಓದಿ : ಇಮೇಲ್‌ ಮೂಲಕ ಮಹಿಳೆಗೆ 50 ಸಾವಿರ ರೂ. ವಂಚನೆ

“ಹಿಜಾಬ್‌ ಧರಿಸಿಯೇ ಪರೀಕ್ಷೆ ಬರೆದಿದ್ದೆವು’
ಜಿಲ್ಲಾಧಿಕಾರಿ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ವಿದ್ಯಾರ್ಥಿನಿಯರು, “ಹಿಜಾಬ್‌ ಕುರಿತ ಆದೇಶ ಪದವಿ ಕಾಲೇಜುಗಳಿಗೆ ಅನ್ವಯ ಎಂದು ಹೈಕೋರ್ಟ್‌ ಹೇಳಿಲ್ಲ. ಮಾ. 15ಕ್ಕೆ ತೀರ್ಪು ಬಂದಿದ್ದರೂ ಎಪ್ರಿಲ್‌, ಮೇಯಲ್ಲಿ ಹಿಜಾಬ್‌ ಧರಿಸಿಯೇ ಪರೀಕ್ಷೆ ಬರೆದಿದ್ದೆವು. ಆದರೆ ಮೇ 16ರ ರಾತ್ರಿ ಏಕಾಏಕಿ ಸಂದೇಶ ಕಳುಹಿಸಿ ಮೇ 17ರಿಂದ ಶಿರವಸ್ತ್ರಕ್ಕೆ ಅವಕಾಶವಿಲ್ಲ ಎಂದು ಕಾಲೇಜಿನವರು ತಿಳಿಸಿದ್ದಾರೆ. ಮರುದಿನದಿಂದ ನಮಗೆ ತರಗತಿ ಪ್ರವೇಶಕ್ಕೆ ಅವಕಾಶ ನೀಡಲಿಲ್ಲ. ಈ ಬಗ್ಗೆ ಪ್ರಾಂಶುಪಾಲರು, ವಿ.ವಿ. ಕುಲಪತಿಯವರನ್ನು ಭೇಟಿಯಾದರೂ ಪ್ರಯೋಜನವಾಗಿಲ್ಲ. ಜಿಲ್ಲಾಧಿಕಾರಿಯವರಿಂದ ಭರವಸೆ ಸಿಕ್ಕಿದರೂ ತರಗತಿ ಪ್ರವೇಶಕ್ಕೆ ಅವಕಾಶ ದೊರೆಯಲಿಲ್ಲ. ನಾವು ಹಿಜಾಬ್‌ ಧರಿಸಿಯೇ ವಿದ್ಯಾಭ್ಯಾಸ ಮುಂದುವರಿಸುತ್ತೇವೆ. ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ’ ಎಂದರು.

ಸಮವಸ್ತ್ರ ಕಡ್ಡಾಯ: ಪ್ರಾಂಶುಪಾಲರು
ಮೇ 16ರಂದು ವಿ.ವಿ. ಸಿಂಡಿಕೇಟ್‌ ಸಭೆಯಲ್ಲಿ ಎಲ್ಲ ಘಟಕ ಕಾಲೇಜುಗಳಲ್ಲಿ ಸಮವಸ್ತ್ರ ನಿಯಮ ಕಡ್ಡಾಯಗೊಳಿಸಬೇಕು ಮತ್ತು ಮಂಗಳೂರಿನ ವಿ.ವಿ. ಕಾಲೇಜಿನ ಪ್ರಾಸ್ಪೆಕ್ಟಸ್‌ನಲ್ಲಿ ಇರುವ ಕಾಲೇಜಿಗೆ ಸಂಬಂಧಿಸಿದ ಪ್ರಮುಖ ನಿಯಮಗಳನ್ನು ತೆಗೆದುಹಾಕಬೇಕೆಂದು ಹಾಗೂ ಇಲ್ಲಿನ ವಿದ್ಯಾರ್ಥಿನಿಯರು ಶಿರವಸ್ತ್ರ ಧರಿಸುವಂತಿಲ್ಲ ಎಂದು ನಿರ್ಣಯಿಸಲಾಗಿತ್ತು. ಈ ನಿರ್ಣಯವನ್ನು ವಿದ್ಯಾರ್ಥಿಗಳ ಗಮನಕ್ಕೆ ತಂದು ಮರುದಿನದಿಂದಲೇ ಜಾರಿಗೆ ತರಲಾಗಿದೆ. ಕಾಲೇಜಿಗೆ ಬಂದ ಬಳಿಕ ವಿಶ್ರಾಂತಿ ಕೊಠಡಿಯಲ್ಲಿ ಶಿರವಸ್ತ್ರವನ್ನು ತೆಗೆದು ಸಮವಸ್ತ್ರದೊಂದಿಗೆ ಕಾಲೇಜಿನ ವಠಾರದಲ್ಲಿ ಹಾಗೂ ತರಗತಿಯಲ್ಲಿ ಇರಬೇಕು ಎಂದು ನಿರ್ಣಯಿಸಲಾಗಿದೆ. ನಿಯಮಗಳನ್ನು ಉಲ್ಲಂ ಸಿದರೆ ಶಿಸ್ತು ಕ್ರಮ ಜರಗಿಸಲಾಗುವುದು ಎಂದು ಪ್ರಾಂಶುಪಾಲೆ ಡಾ| ಅನುಸೂಯ ರೈ ತಿಳಿಸಿದ್ದಾರೆ.

ಉಪ್ಪಿನಂಗಡಿ ಕಾಲೇಜು ನಿಯಮ ಉಲ್ಲಂಘನೆ: ವಿದ್ಯಾರ್ಥಿಗಳ ಆರೋಪ
ಉಪ್ಪಿನಂಗಡಿ : ಹೈಕೋರ್ಟ್‌ ಆದೇಶದ ಹೊರತಾಗಿಯೂ ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೆಲವರು ಹಿಜಾಬ್‌ ಧರಿಸುತ್ತಿದ್ದಾರೆ. ನಿಯಮ ಪಾಲನೆಯಲ್ಲಿ ಉಪನ್ಯಾಸಕರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದು, ನಿಯಮ ಪಾಲನೆಯಾಗದಿದ್ದರೆ ತರಗತಿ ಬಹಿಷ್ಕರಿಸುವುದಾಗಿಯೂ ಎಚ್ಚರಿಸಿದ್ದಾರೆ.

10 ದಿನಗಳಿಂದ ತರಗತಿಗಳು ನಡೆಯುತ್ತಿದ್ದು, ಆರಂಭದಲ್ಲಿ ನಿಯಮ ಪಾಲಿಸುತ್ತಿದ್ದ ವಿದ್ಯಾರ್ಥಿನಿಯರ ಪೈಕಿ ಕೆಲವರು ಐದು ದಿನಗಳಿಂದ ನಿಯಮದ ಉಲ್ಲಂ ಸಿ ಹಿಜಾಬ್‌ ಧರಿಸಿಯೇ ತರಗತಿಗೆ ಹಾಜರಾಗುತ್ತಿದ್ದಾರೆ. ಈ ಬಗ್ಗೆ ಪ್ರಾಂಶುಪಾಲರ ಗಮನ ಸೆಳೆದಿದ್ದರೂ ಯಾವುದೇ ಸ್ಪಂದನ ತೋರಿಲ್ಲ ಎಂಬುದು ವಿದ್ಯಾರ್ಥಿಗಳ ಆರೋಪ. ಈ ಬಗ್ಗೆ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಲ್ಲಿ ದೂರಿತ್ತಿದ್ದಾರೆ.

ನಿಯಮ ಪಾಲನೆ: ಪ್ರಾಂಶುಪಾಲರು
ಪ್ರಕರಣದ ಬಗ್ಗೆ ಪ್ರಾಂಶುಪಾಲ ಶೇಖರ್‌ ಕನ್ನಡ ಅವರನ್ನು ಪತ್ರಿಕೆ ಸಂಪರ್ಕಿಸಿದಾಗ, ಕಾಲೇಜಿನಲ್ಲಿ ಸರಕಾದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಉಲ್ಲಂಘಿಸಿದರೆ ಕಠಿನ ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಸಲಾಗಿದೆ ಎಂದರು. ಆದರೆ ಕಾಲೇಜಿನ ಆವರಣದಲ್ಲಿ ಹಿಜಾಬ್‌ ಧರಿಸಿದವರನ್ನು ಕಣ್ಣಾರೆ ಕಂಡವರಿದ್ದಾರೆ ಎಂಬ ದೂರು ಇದೆಯಲ್ಲವೇ ಎಂಬ ಪ್ರಶ್ನೆಗೆ, ಈಗಾಗಲೇ ತರಗತಿಯಲ್ಲಿ ಹಿಜಾಬ್‌ಗ ನಿಷೇಧ ವಿಧಿಸಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next