Advertisement

Mangaluru University; ಲೋಕ ಸಮರದ ನೆಪ; ಘಟಿಕೋತ್ಸವ ಆಗದೆ ವಿ.ವಿ. ವಿದ್ಯಾರ್ಥಿಗಳು ಕಂಗಾಲು!

12:29 AM May 02, 2024 | Team Udayavani |

ಮಂಗಳೂರು: ಸಾಮಾನ್ಯವಾಗಿ ಫೆಬ್ರವರಿ/ಮಾರ್ಚ್‌ ವೇಳೆಗೆ ನಡೆಯುತ್ತಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವಕ್ಕೆ ಇನ್ನೂ ದಿನಾಂಕ ಅಂತಿಮಗೊಳ್ಳದ ಕಾರಣದಿಂದ ಉದ್ಯೋಗ-ವಿದೇಶ ಶಿಕ್ಷಣಕ್ಕೆ ತೆರಳುವ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.

Advertisement

ನಿಯಮದ ಪ್ರಕಾರ ಡಿಸೆಂಬರ್‌/ಜನವರಿ ವೇಳೆಗೆ ಘಟಿಕೋತ್ಸವ ಆಗಬೇಕು. ಕೊರೊನಾ ಇನ್ನಿತರ ಕಾರಣದಿಂದ ಇದು ಫೆಬ್ರವರಿ/ಮಾರ್ಚ್‌ಗೆ ಮುಂದೂಡಿಕೆಯಾಗಿತ್ತು. ಆದರೆ ಈ ಬಾರಿ ಲೋಕಸಭಾ ಚುನಾವಣೆ ಕಾರಣದಿಂದ ರಾಜ್ಯಪಾಲರು ದಿನಾಂಕ ನೀಡದ ಕಾರಣದಿಂದ ಘಟಿಕೋತ್ಸವಕ್ಕೆ ಇನ್ನೂ ಕಾಲ ಕೂಡಿ ಬಂದಿಲ್ಲ.
ಮಾ. 15ಕ್ಕೆ ದಿನಾಂಕ ನಿಗದಿ ಆಗಿತ್ತಾದರೂ ಅದೇ ವೇಳೆಗೆ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಗೆ ಬಂದ ಕಾರಣ ಘಟಿಕೋತ್ಸವ ಮುಂದೂಡಿಕೆಯಾಯಿತು. ಬಳಿಕ ರಾಜ್ಯಪಾಲರಿಂದ ದಿನಾಂಕ ಸಿಕ್ಕಿರಲಿಲ್ಲ.

ಮುಂದೆ ಮೇ/ಜೂನ್‌ ?
ದ.ಕ., ಉಡುಪಿ ಭಾಗದಲ್ಲಿ ಚುನಾವಣೆ ಮುಕ್ತಾಯವಾಗಿದ್ದು, ಹೀಗಾಗಿ ಘಟಿಕೋತ್ಸವ ನಡೆಸಲು ದಿನಾಂಕ ನೀಡುವಂತೆ ಮಂಗಳೂರು ವಿ.ವಿ.ಯಿಂದ ರಾಜ್ಯಪಾಲರಿಗೆ ಮುಂದಿನ ವಾರ ಮನವಿ ಸಲ್ಲಿಕೆಯಾಗಲಿದೆ. ಇದರಂತೆ ದಿನಾಂಕ ದೊರಕಿದರೆ ಮೇ ಮಧ್ಯಭಾಗದಲ್ಲಿ ಘಟಿಕೋತ್ಸವ ನಡೆಯುವ ಸಾಧ್ಯತೆಯಿದೆ. ಅಥವಾ, ಲೋಕಸಭಾ ಚುನಾವಣೆಯ ಫಲಿತಾಂಶ (ಜೂ. 4) ಬಂದ ಬಳಿಕವಷ್ಟೇ ಘಟಿಕೋತ್ಸವ ಎಂದಾದರೆ ಇನ್ನೂ 1 ತಿಂಗಳ ಕಾಲ ವಿದ್ಯಾರ್ಥಿಗಳು ಕಾಯಬೇಕು!

“ಯುಕೆ ಸೀಟ್‌ ಕೈತಪ್ಪಲಿದೆ!’
ವಿದ್ಯಾರ್ಥಿನಿ ಯೊಬ್ಬರು “ಉದಯವಾಣಿ’ಗೆ ಪ್ರತಿಕ್ರಿಯಿಸಿ “ಮಂಗಳೂರು ವಿ.ವಿ. ವ್ಯಾಪ್ತಿಯ ಸ್ವಾಯತ್ತ ಕಾಲೇಜಿನಲ್ಲಿ ನಾನು ಕಳೆದ ವರ್ಷ ಪದವಿ ಪೂರ್ಣಗೊಳಿಸಿದ್ದೇನೆ. ಜುಲೈಯಲ್ಲಿಯೇ ಫಲಿತಾಂಶ ಬಂದಿದೆ. ಘಟಿಕೋತ್ಸವ ಸರ್ಟಿಫಿಕೆಟ್‌ಗೆ ಆಗಲೇ ಅಪ್ಲೈ ಮಾಡಿದ್ದೇನೆ. ಉನ್ನತ ವ್ಯಾಸಂಗಕ್ಕಾಗಿ ಯುಕೆಯ 3 ವಿ.ವಿ.ಯಲ್ಲಿ ಸೀಟ್‌ ಕೂಡ ದೊರಕಿದೆ. ಆದರೆ, ಇಲ್ಲಿ ಘಟಿಕೋತ್ಸವವೇ ಆಗದೆ ಉನ್ನತ ವ್ಯಾಸಂಗಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. ತಾತ್ಕಾಲಿಕ ಪ್ರಮಾಣಪತ್ರ ಅಲ್ಲಿಗೆ ಅನ್ವಯವಾಗದ ಕಾರಣದಿಂದ 1 ವರ್ಷದಿಂದ ಕಾಯುತ್ತಿದ್ದೇನೆ’ ಎನ್ನುತ್ತಾರೆ.

ಸ್ವಾಯತ್ತ ಕಾಲೇಜಿನಲ್ಲಿ ಫಲಿತಾಂಶ ಜುಲೈಯಲ್ಲಿ ಸಿಕ್ಕಿದ್ದರೆ, ಮಂಗಳೂರು ವಿ.ವಿ. ವ್ಯಾಪ್ತಿಯ ಕಾಲೇಜಿನ ಫಲಿತಾಂಶ ಸೆಪ್ಟಂಬರ್‌ ವೇಳೆಗೆ ಬಂದಿತ್ತು. ಅದರ ಪ್ರಕಾರ ಘಟಿಕೋತ್ಸವ ಮಾರ್ಚ್‌ ಒಳಗೆ ನಡೆಯಬೇಕಿತ್ತು. ಆದರೆ ಚುನಾವಣ ನೆಪದಿಂದ ಘಟಿಕೋತ್ಸವ ಮುಂದೂಡಿಕೆಯಾಗಿದೆ.

Advertisement

ಮಕ್ಕಳಿಗೆ ಉದ್ಯೋಗ, ಶಿಕ್ಷಣ ಕೈ ತಪ್ಪುವ ಆತಂಕ
ಘಟಿಕೋತ್ಸವ ವಿದ್ಯಾರ್ಥಿ ಜೀವನದ ಒಂದು ಪ್ರಮುಖ ಘಟ್ಟ. ಪದವಿ ಪ್ರಮಾಣ ಪತ್ರವು ವಿದ್ಯಾರ್ಥಿಗಳಿಗೆ ದೇಶ-ವಿದೇಶದಲ್ಲಿ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುವುದು ಹಾಗೂ ಉದ್ಯೋಗಕ್ಕೆ ಸೇರಲು ಅನಿವಾರ್ಯ. ಘಟಿಕೋತ್ಸವ ತಡವಾದರೂ ಮಕ್ಕಳಿಗೆ ಸಮಸ್ಯೆ ಆಗಬಾರದು ಎಂಬ ಕಾರಣದಿಂದ ತಾತ್ಕಾಲಿಕ ಸರ್ಟಿಫಿಕೆಟ್‌ (ಪಿಡಿಸಿ) ಅನ್ನು ವಿವಿ ನೀಡುತ್ತದೆ. ತುರ್ತಾಗಿ ಇದನ್ನು ಪಡೆಯಲು ಅವಕಾಶವಿದೆ. ಆದರೆ ಇದನ್ನು ಸರಕಾರಿ ಉದ್ಯೋಗ, ಕೆಲವು ಖಾಸಗಿ ಉದ್ಯೋಗ, ವಿದೇಶದಲ್ಲಿ ಉದ್ಯೋಗ-ಶಿಕ್ಷಣದ ವೇಳೆ ಹಾಗೂ ಇತರ ಕೆಲವು ಸಂದರ್ಭದಲ್ಲಿ ಪರಿಗಣಿಸಲು ಬರುವುದಿಲ್ಲ. ಆಗ ಘಟಿಕೋತ್ಸವದ ಮೂಲ ಸರ್ಟಿಫಿಕೆಟ್‌ ಅಗತ್ಯವಾಗುತ್ತದೆ. ಸದ್ಯ ವಿವಿಯಲ್ಲಿ ಘಟಿಕೋತ್ಸವ ಆಗದೆ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗಿದ್ದಾರೆ. ಒಮ್ಮೆ ಉದ್ಯೋಗ/ವಿದೇಶದಲ್ಲಿ ಶಿಕ್ಷಣ ಅವಕಾಶ ಕೈ ತಪ್ಪಿದರೆ ಮತ್ತೆ ಅದೇ ಅವಕಾಶ ಸಿಗುವುದು ಕಷ್ಟ. ಇದು ವಿದ್ಯಾರ್ಥಿಗಳಿಗೆ ನಷ್ಟ ಎಂಬುದು ಪೋಷಕರ ಮಾತು.

ಮೇ 4ರಂದು ರಾಜ್ಯಪಾಲರು ವಿಶೇಷ ಸಭೆ ಕರೆದಿದ್ದಾರೆ. ಕರಾವಳಿ ವ್ಯಾಪ್ತಿಯಲ್ಲಿ ಲೋಕಸಭಾ ಚುನಾವಣೆ ಮುಗಿದ ಕಾರಣದಿಂದ ಘಟಿಕೋತ್ಸವ ನಡೆಸಲು ದಿನಾಂಕ ನೀಡುವಂತೆ ರಾಜ್ಯಪಾಲರನ್ನು ವಿನಂತಿಸಲಾಗುವುದು. ಅವರ ನಿರ್ದೇಶನದ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳ ತುರ್ತು ಅಗತ್ಯಕ್ಕೆ ಬೇಕಿದ್ದರೆ 6 ತಿಂಗಳ ತಾತ್ಕಾಲಿಕ ಸರ್ಟಿಫಿಕೆಟ್‌(ಪಿಡಿಸಿ) ವಿ.ವಿ.ಯಿಂದ ನೀಡಲಾಗುತ್ತದೆ. ಯುಜಿಸಿ ನಿಯಮದ ಪ್ರಕಾರ ಇದನ್ನು ಅನುಮೋದಿಸಲಾಗಿದೆ. ವಿದ್ಯಾರ್ಥಿಗಳು ವಿ.ವಿ.ಯನ್ನು ಸಂಪರ್ಕಿಸಬಹುದು.
– ಪ್ರೊ| ಪಿ.ಎಲ್‌. ಧರ್ಮ, ಕುಲಪತಿ, ಮಂಗಳೂರು ವಿ.ವಿ.

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next