Advertisement

Mangaluru University: ತುಳು ವಿಭಾಗವಿಲ್ಲ, ತುಳು ಪಿಎಚ್‌ಡಿಗೂ ಕಷ್ಟ

11:11 PM Dec 10, 2023 | Team Udayavani |

ಮಂಗಳೂರು: ತುಳು ಭಾಷೆಯ ಮೇಲಿನ ಅಭಿಮಾನ ಹಾಗೂ ತುಳು ಪ್ರಸಾರದ ಉತ್ಸಾಹದಲ್ಲಿ ಹಲವರು ತುಳು ಕಲಿತರಷ್ಟೇ ಅಲ್ಲ. ಕೆಲವರು ತುಳು ಸ್ನಾತಕೋತ್ತರ ಪದವಿ ಯನ್ನೂ ಪೂರೈಸಿದರು. ಆದರೀಗ ಅವರು ತುಳುವಿನಲ್ಲೇ ಪಿಎಚ್‌.ಡಿ. ಮಾಡಲಾಗದ ಸಂಕಷ್ಟಕ್ಕೆ ಸಿಲುಕಿದ್ದಾರೆ.

Advertisement

ಇದುವರೆಗೂ ಮಂಗಳೂರು ವಿಶ್ವವಿದ್ಯಾ ನಿಲಯ ದಲ್ಲಿ ಪ್ರತ್ಯೇಕ ತುಳು ವಿಭಾಗವನ್ನು ಆರಂಭಿಸಿಲ್ಲ. ಹಾಗಾಗಿ ತುಳುವಿನಲ್ಲಿ ಡಾಕ್ಟರೆಟ್‌ (ಪಿಎಚ್‌.ಡಿ.) ಪದವಿ ಪೂರೈಸಲು ಅವಕಾಶ ಇಲ್ಲವಾಗಿದೆ. ಮಂಗಳೂರು ವಿ.ವಿ. ಸಂಧ್ಯಾ ಕಾಲೇಜಿನಲ್ಲಿ ಹೆಸರಿಗೆ ಮಾತ್ರವೇ ತುಳು ಸ್ನಾತಕೋತ್ತರ ಅಧ್ಯಯನ ವಿಭಾಗವಿದ್ದು, ಇದಕ್ಕೆ ಸ್ವತಂತ್ರ ಅಸ್ತಿತ್ವ ಇಲ್ಲದೇ ಕನ್ನಡ ವಿಭಾಗದ ಅಧೀನದಲ್ಲಿದೆ. ಪ್ರತ್ಯೇಕ ವಿಭಾಗವಾಗಿಸಲು ನಿಯಮಾವಳಿ ರೂಪಿತವಾಗಬೇಕಿದೆ.

ತುಳು ಪಿಜಿ 2018ರಲ್ಲಿ ಆರಂಭ
ಪದವಿ, ಪಿಯುಸಿಯಲ್ಲಿ ತುಳುವನ್ನು ಭಾಷೆಯಾಗಿ ಕಲಿಸಬೇಕು ಎಂಬ ಆಗ್ರಹ ಹಲವು ದಶಕಗಳದ್ದು. ಅದಕ್ಕಾಗಿಯೇ ಬೋಧಕರನ್ನು ತಯಾರಾಗಿಸಲು 2018ರಲ್ಲಿ ಮಂಗಳೂರು ವಿ.ವಿ.ಯಲ್ಲಿ ತುಳು ಸ್ನಾತಕೋತ್ತರ ಪದವಿ ಕೋರ್ಸ್‌ ಆರಂಭಿಸಲಾಯಿತು. ಅಲ್ಲಿಂದ ಇದುವರೆಗೆ ಸುಮಾರು 70 ರಷ್ಟು ಪದವೀಧರರು ಹೊರಬಂದಿದ್ದಾರೆ. ಎರಡೇ ಪದವಿ ಕಾಲೇಜುಗಳಲ್ಲಿ ಮಾತ್ರವೇ ಪ್ರಸ್ತುತ ತುಳುವನ್ನು ಐಚ್ಛಿಕ ಭಾಷೆಯಾಗಿ ಕಲಿಸಲಾಗುತ್ತಿದೆ. ಇತರ ಕಾಲೇಜುಗಳಲ್ಲಿ ತುಳು ಕೋರ್ಸ್‌ ಆರಂಭಿಸಬೇಕು ಎಂಬ ಆರಂಭಿಕ ಉತ್ಸಾಹ ವಿ.ವಿ.ಯ ಆಡಳಿತದಲ್ಲಿ ಪ್ರಸ್ತುತ ಕಾಣದಾಗಿದೆ.

ಎರಡು ಕಾರಣ: ತುಳುವಿನಲ್ಲಿ ಪಿಎಚ್‌.ಡಿ ಮಾಡಲಾಗದ್ದಕ್ಕೆ ಸದ್ಯಕ್ಕೆ ತೋರುತ್ತಿರುವ ಕಾರಣಗಳೆಂದರೆ, ತುಳು ಲಿಪಿ ಇದ್ದರೂ ಅದು ಇನ್ನೂ ಶೈಕ್ಷಣಿಕ ವಲಯದಲ್ಲಿ ಹಾಸುಹೊಕ್ಕಾಗಿಲ್ಲ, ಇನ್ನೊಂದು ಕಾರಣ ತುಳುವಿಗೆ ಪ್ರತ್ಯೇಕ ವಿಭಾಗವಿಲ್ಲದ ಕಾರಣ ಆಸಕ್ತರಿದ್ದರೂ ಅವರು ತುಳು ವಿಷಯಗಳನ್ನು ಕನ್ನಡ, ಇತಿಹಾಸದಂತಹ ವಿಭಾಗಗಳಿಗೆ ಹೋಗಿ ಅಲ್ಲಿ ಪಿಎಚ್‌.ಡಿ ಮಾಡಬೇಕಿದೆ. ಆದರೆ ಅಲ್ಲಿ ಅದೇ ವಿಷಯಗಳ ವಿದ್ಯಾರ್ಥಿ ಗಳಿಗೇ ಆದ್ಯತೆ ಸಿಗುವ ಕಾರಣ ತುಳು ಪದವೀಧರರಿಗೆ ಅವಕಾಶ‌ ಸಿಗದಾಗಿದೆ.

ನಮಗೆ ಪ್ರತ್ಯೇಕ ವಿಭಾಗ ಬೇಕು, ಮೊದಲಿಗೆ ತುಳು ಬಲ್ಲ, ಕನ್ನಡ ಉಪನ್ಯಾಸಕರೇ ಮಾರ್ಗದರ್ಶಕರಾಗಿ ಬರಲಿ, ಕೆಲವು ವರ್ಷಗಳ ಬಳಿಕ ತುಳು ಸ್ನಾತಕೋತ್ತರ ಪದವೀಧರರೇ ಪೂರ್ಣಕಾಲಿಕ ಮುಖ್ಯಸ್ಥರಾದ ಬಳಿಕ ಅವರು ಗೈಡ್‌ ಆಗುವ ಅರ್ಹತೆ ಪಡೆಯುತ್ತಾರೆ ಎನ್ನುತ್ತಾರೆ ತುಳು ಎಂಎ ಹಳೆವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಸುಭಾಷ್‌ ಕಣ್ವತೀರ್ಥ.

Advertisement

ತುಳುವಿಗೆ ಪ್ರತ್ಯೇಕ ವಿಭಾಗ ರಚಿಸಲು ನಿಯಮಾವಳಿ ರೂಪಿಸಿ ಶೈಕ್ಷಣಿಕ ಮಂಡಳಿ, ಸಿಂಡಿಕೇಟ್‌ ಸಭೆಗಳಲ್ಲಿ ಅನುಮೋದನೆ ಪಡೆದಿದ್ದೇವೆ. ಸರಕಾರದ ಅನುಮೋದನೆ ದೊರಕಬೇಕಿದೆ. ಆ ಬಳಿಕ ವಿಭಾಗ ಆರಂಭವಾಗಬಹುದು, ಪೂರ್ಣಕಾಲಿಕ ಬೋಧಕರಿದ್ದರೆ ಅವರಿಗೆ ಗೈಡ್‌ಶಿಪ್‌ ಸಿಗಬಹುದು, ಆಗ ಪಿಎಚ್‌.ಡಿ ಸಮಸ್ಯೆ ಇತ್ಯರ್ಥವಾಗಬಹುದು.
– ಪ್ರೊ| ಜಯರಾಜ್‌ ಅಮೀನ್‌,
ಕುಲಪತಿ, ಮಂಗಳೂರು ವಿ.ವಿ.

ತುಳು ಪ್ರತ್ಯೇಕ ವಿಭಾಗವಾಗಬೇಕು ಎನ್ನುವ ಬೇಡಿಕೆ ನ್ಯಾಯ ಯುತವಾದದ್ದು. ಸರಕಾರಕ್ಕೆ ಈ ಕುರಿತ ಪ್ರಸ್ತಾವನೆ ಮಂಗಳೂರು ವಿ.ವಿ.ಯಿಂದ ಬಂದಿದ್ದರೆ ಅದನ್ನು ನಾನು ಪರಿಶೀಲಿಸಿ, ವಿಭಾಗ ಆರಂಭಿಸುವುದಕ್ಕೆ ನೆರವಾಗುತ್ತೇನೆ.
– ಯು.ಟಿ. ಖಾದರ್‌, ವಿಧಾನಸಭಾಧ್ಯಕ್ಷರು

-ವೇಣುವಿನೋದ್‌ ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next