ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಮತ್ತು ಪದವಿ ಪರೀಕ್ಷೆಗಳು ಬುಧವಾರದಿಂದ ಆರಂಭಗೊಂಡಿದ್ದು, ಎಲ್ಲ ಸುರಕ್ಷತಾ ಕ್ರಮಗಳೊಂದಿಗೆ ವಿದ್ಯಾರ್ಥಿಗಳು ಮೊದಲ ದಿನದ ಪರೀಕ್ಷೆಯನ್ನು ಯಶಸ್ವಿಯಾಗಿ ಬರೆದರು.
ಮೊದಲ ದಿನದ ಪರೀಕ್ಷೆಗೆ ಪದವಿಯಲ್ಲಿ 23,829 ಮಂದಿ ಹಾಜರಾಗಿದ್ದು, 470 ಮಂದಿ ಗೈರಾಗಿದ್ದರು. ಸ್ನಾತಕೋತ್ತರ ಪದವಿಯಲ್ಲಿ 3,657 ಮಂದಿ ಹಾಜರಾಗಿ, 9 ಮಂದಿ ಗೈರು ಹಾಜರಾಗಿದ್ದರು. ಓರ್ವ ಕೋವಿಡ್-19 ಪಾಸಿಟಿವ್ ವಿದ್ಯಾರ್ಥಿಗೆ ಪ್ರತ್ಯೇಕ ಕೋಣೆಯಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಯಿತು.
ಸರಕಾರದ ಎಲ್ಲ ನಿರ್ದೇಶಗಳನ್ನು ಪಾಲಿಸಿಕೊಂಡು ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಡ ಲಾಯಿತು. ದ.ಕ., ಉಡುಪಿ, ಕೊಡಗು ಜಿಲ್ಲೆಗಳ ಒಟ್ಟು 205 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಕೊರೊನಾ ಕಾರಣದಿಂದಾಗಿ ಈ ಜಿಲ್ಲೆಗಳಿಗೆ ಪರೀಕ್ಷೆ ಬರೆಯಲು ಆಗಮಿಸಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ತವರು ರಾಜ್ಯಗಳಲ್ಲೇ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿದ್ದು, ಮಣಿಪುರ, ಜಮ್ಮು ಮತ್ತು ಕಾಶ್ಮೀರದ ವಿದ್ಯಾರ್ಥಿಗಳು ಆಯಾ ರಾಜ್ಯಗಳಲ್ಲಿ ಪರೀಕ್ಷೆ ಬರೆದರು. ಧಾರವಾಡದ ಕರ್ನಾಟಕ ವಿ.ವಿ.ಯಲ್ಲಿಯೂ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಹೊರ ರಾಜ್ಯಗಳು ಮತ್ತು ಹೊರ ಜಿಲ್ಲೆಗಳಲ್ಲಿ ಪರೀಕ್ಷೆ ನಿರ್ವಹಣ ವ್ಯವಸ್ಥೆಯನ್ನು ಸ್ವತಃ ಅಲ್ಲಿನ ಮುಖ್ಯಸ್ಥರು ನಿರ್ವಹಿಸಿದ್ದು, ವೀಡಿಯೋಗಳನ್ನು ಹಾಗೂ ದಾಖಲೆಗಳನ್ನು ಮಂಗಳೂರು ವಿ.ವಿ.ಗೆ ಕಳುಹಿಸಿಕೊಟ್ಟಿದ್ದಾರೆ. ಭೂತಾನ್ ವಿದ್ಯಾರ್ಥಿಗಳಿಗೆ ಬುಧವಾರ ಯಾವುದೇ ಪರೀಕ್ಷೆಗಳು ಇರಲಿಲ್ಲ. ಶುಕ್ರವಾರದಂದು ಅವರು ಮೊದಲ ಪರೀಕ್ಷೆ ಬರೆಯಲಿದ್ದಾರೆ.
ವಿದ್ಯಾರ್ಥಿಗಳನ್ನು ಥರ್ಮಲ್ ಸ್ಕ್ಯಾ ನಿಂಗ್
ಮಾಡಿ ಕೊಠಡಿಯೊಳಗೆ ಕಳುಹಿಸಲಾಯಿತು. ಸ್ಯಾನಿಟೈಸರ್‌ಗಳನ್ನು ಪ್ರತಿ ವಿದ್ಯಾರ್ಥಿಗೂ ನೀಡಲಾಯಿತು. ಪರೀಕ್ಷೆ ಬರೆಯುವುದಕ್ಕೆ ಮುನ್ನ ಎಲ್ಲ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗಿತ್ತು. ಅಲ್ಲದೆ ಪರೀಕ್ಷಾ ಕೋಣೆಯಲ್ಲಿ ಪ್ರತಿ ವಿದ್ಯಾರ್ಥಿಗಳನ್ನು 6 ಅಡಿ ಅಂತರದಲ್ಲಿ ಕುಳಿತುಕೊಳ್ಳುವಂತೆ ವ್ಯವಸ್ಥೆ ಮಾಡಲಾಗಿತ್ತು ಎಂದು ಮಂಗಳೂರು ವಿ.ವಿ. ಪರೀಕ್ಷಾಂಗ ಕುಲಸಚಿವ ಡಾ| ಪಿ.ಎಲ್. ಧರ್ಮ ತಿಳಿಸಿದ್ದಾರೆ.