ಮಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯಡಿ ಆನರ್ಸ್ ಪದವಿ (4 ವರ್ಷ) ಪಡೆಯಲು ನೀಡಿದ್ದ ಅವಕಾಶವನ್ನು 2024-25ರಿಂದ ರದ್ದುಪಡಿಸಿ ಹಿಂದಿನಂತೆ 3 ವರ್ಷದ ಪದವಿ ಪಡೆಯಲು ಅವಕಾಶ ನೀಡಿ ಉನ್ನತ ಶಿಕ್ಷಣ ಇಲಾಖೆ ಇತ್ತೀಚೆಗೆ ಆದೇಶಿಸಿದೆ. ಇದರಂತೆ ಪದವಿ ವಿದ್ಯಾರ್ಥಿಗಳ ಪಠ್ಯಕ್ರಮ ಬದಲಾವಣೆ ಪ್ರಕ್ರಿಯೆ ಮಂಗಳೂರು ವಿ.ವಿ. ವ್ಯಾಪ್ತಿಯಲ್ಲಿ ಆರಂಭವಾಗಿದೆ.
ಪದವಿಯ ಅವಧಿಯನ್ನು 4 ವರ್ಷದಿಂದ 3 ವರ್ಷಕ್ಕೆ ಇಳಿಸುವ ಸಂಬಂಧ ಮುಂದಿನ ಪಠ್ಯಕ್ರಮದ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಲು ಸರಕಾರ ಈಗಾಗಲೇ ಆಯಾಯ ವಿವಿಗಳಿಗೆ ಸೂಚನೆ ನೀಡಿತ್ತು. ಅದರಂತೆ ಮಂಗಳೂರು ವಿ.ವಿ.ಯಲ್ಲಿ ಸಭೆ ನಡೆಸಿ “ಬೋರ್ಡ್ ಆಫ್ ಸ್ಟಡೀಸ್’ (ಬಿಒಎಸ್) ಮಾಡಲು ಅನುಮತಿ ನೀಡಲಾಗಿದೆ. ವಿವಿಧ ವಿಷಯವಾರು “ಬಿಒಎಸ್’ ತಂಡ ಕೆಲವೇ ದಿನದಲ್ಲಿ ರಚನೆ ಆಗಿ ಪಠ್ಯಕ್ರಮ ಸಿದ್ಧಪಡಿಸಲಿದೆ.
ಹೊಸ ಪಠ್ಯಕ್ರಮ ಬರುವಾಗ ಯಾವಾಗಲೂ ಮೊದಲ ಸೆಮಿಸ್ಟರ್‌ಗೆ ಮಾತ್ರ ನಡೆಸಿ ಬಳಿಕ ಹಂತ ಹಂತವಾಗಿ ಪಠ್ಯಕ್ರಮ ರಚನೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಒಂದೇ ಬಾರಿಗೆ ಎಲ್ಲ ಸೆಮಿಸ್ಟರ್‌ಗಳ ಪಠ್ಯಕ್ರಮವನ್ನು ಸಿದ್ಧಪಡಿಸುವ ಬಗ್ಗೆ ವಿ.ವಿ. ಮಹತ್ವದ ತೀರ್ಮಾನ ಕೈಗೊಂಡಿದೆ.
ಪಠ್ಯಕ್ರಮ ರಚನೆಯ ವಿಚಾರದಲ್ಲಿ ಸರಕಾರವು ಮಂಗಳೂರು ವಿ.ವಿ.ಗೆ ಸ್ವಾತಂತ್ರ್ಯ ನೀಡಿದ ಕಾರಣ ಒಂದೊಂದು ವಿಷಯದಲ್ಲಿ ಅಗತ್ಯವಿದ್ದರೆ ಒಂದಷ್ಟು ಹೊಸ ಸಂಗತಿಗಳನ್ನು ಸೇರಿಸಿಕೊಂಡು ಪಠ್ಯಕ್ರಮ ರೂಪಿಸಲಾಗುತ್ತದೆ. ಎನ್‌ಇಪಿ ಜಾರಿಯಾಗುವ ಮುನ್ನ ಇದ್ದ ಪಠ್ಯಕ್ರಮದ ಸ್ವರೂಪದಲ್ಲಿ ಪಠ್ಯಕ್ರಮ ಇರುವ ಸಾಧ್ಯತೆ ಇದೆ. ಸಾಮಾನ್ಯವಾಗಿ ನವೆಂಬರ್‌ನಲ್ಲಿ ಪಠ್ಯಕ್ರಮದ ಬಗ್ಗೆ ಸಭೆ ನಡೆಯುತ್ತಿತ್ತು. ಆದರೆ ಈ ಬಾರಿ ಬೇಗನೆ ನಡೆಸಲಾಗುತ್ತಿದೆ ಎಂದು ಉಪನ್ಯಾಸಕರೊಬ್ಬರು ತಿಳಿಸಿದ್ದಾರೆ.
ಪದವಿ 3 ವರ್ಷ ಎಂದು ಸರಕಾರ ಈಗಾಗಲೇ ನಿರ್ದೇಶನ ನೀಡಿದೆ. ಈ ಸಂಬಂಧ ಪಠ್ಯಕ್ರಮ ರೂಪಿಸುವ ನೆಲೆಯಲ್ಲಿ ಅಕಾಡೆಮಿಕ್ ಸ್ವಾತಂತ್ರ್ಯವನ್ನು ಸರಕಾರ ವಿ.ವಿ.ಗೆ ನೀಡಿದೆ. ಅದನ್ನು ಬಳಸಿಕೊಂಡು ಅನುಭವ ಇರುವ ಅಧ್ಯಾಪಕರ ಉಪಸ್ಥಿತಿಯಲ್ಲಿ ಬೇಗನೆ ಪಠ್ಯಕ್ರಮ ರಚನೆ ಮಾಡಲು ವಿ.ವಿ. ನಿರ್ಧರಿಸಿದೆ.
– ಪ್ರೊ|ಪಿ.ಎಲ್. ಧರ್ಮ,
ಕುಲಪತಿ, ಮಂಗಳೂರು ವಿ.ವಿ.