ಮಂಗಳೂರು: ಈಗಾಗಲೇ ನಡೆಯಬೇಕಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಬಹುನಿರೀಕ್ಷಿತ “ಕುಲಪತಿ’ ಹುದ್ದೆಯ ನೇಮಕ ಇನ್ನೂ ಅಂತಿಮಗೊಳ್ಳದಿರುವುದು ಕುತೂಹಲಕ್ಕೆ ಕಾರಣ ವಾಗಿದೆ.
ಮೂಲಗಳ ಪ್ರಕಾರ ಕುಲಪತಿ ಆಯ್ಕೆಗೆ ಸಂಬಂಧಿಸಿ ಶೋಧನಾ ಸಮಿತಿಯ ಬಹು ಮಹತ್ವದ ಸಭೆ 2 ತಿಂಗಳ ಹಿಂದೆಯೇ ನಡೆದಿದ್ದು, ಸರಕಾರಕ್ಕೆ ವರದಿ ಸಲ್ಲಿಕೆಯಾಗಿದೆ. ಆದರೂ ಹೊಸ “ವಿಸಿ’ ನೇಮಕ ಸರಕಾರದ ಹಂತದಲ್ಲೇ ಬಾಕಿಯಾಗಿದೆ.
ಮೈಸೂರು ವಿ.ವಿ.ಯ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಉಪನ್ಯಾಸಕ ಪ್ರೊ| ಮುಜಾಫರ್ ಅಸ್ಸಾದಿ, ಮಂಗಳೂರು ವಿ.ವಿ.ಯ ಮಾಜಿ ಕುಲಸಚಿವ (ಪರೀಕ್ಷಾಂಗ)ರಾಜ್ಯಶಾಸ್ತ್ರ ಉಪನ್ಯಾಸಕ ಪ್ರೊ| ಪಿ.ಎಲ್. ಧರ್ಮ ಹಾಗೂ ಮಂಗಳೂರು ವಿ.ವಿ.ಯ ಮಾಜಿ ಕುಲಸಚಿವ (ಆಡಳಿತ), ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ| ಕಿಶೋರ್ ಕುಮಾರ್ ಸಿ.ಕೆ. ಸಹಿತ ಕೆಲವರ ಹೆಸರು ಕುಲಪತಿ ಹುದ್ದೆಗೆ ಬಲವಾಗಿ ಕೇಳಿಬಂದಿತ್ತು. ಸರಕಾರದ ಹಂತದಲ್ಲಿ ಈ ಬಗ್ಗೆ ಚರ್ಚೆ ಕೂಡ ನಡೆದಿತ್ತು. ಯಾವ ಕಾರಣಕ್ಕಾಗಿ ನೇಮಕ ವಿಳಂಬವಾಗುತ್ತಿದೆ ಎಂಬುದಕ್ಕೆ ಯಾರಲ್ಲೂ ಉತ್ತರವಿಲ್ಲ. ಸರಕಾರವು “ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯ ಕಾಯ್ದೆ’ ಜಾರಿಗೊಳಿಸುವ ತರಾತುರಿಯಲ್ಲಿದ್ದು ಅದು ಪೂರ್ಣವಾದ ಬಳಿಕ ವಿಸಿ ನೇಮಕ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಕುಲಪತಿ ಹುದ್ದೆಗೆ 108 ಅರ್ಜಿಗಳು ಸಲ್ಲಿಕೆಯಾಗಿದ್ದು ಅವುಗಳನ್ನು ಪರಿಶೀಲಿಸಿದ ಶೋಧನಾ ಸಮಿತಿಯು ಪ್ರಾರಂಭಿಕವಾಗಿ 40, ಬಳಿಕ 10 ಹೆಸರುಗಳನ್ನು ಪಟ್ಟಿ ಮಾಡಿಕೊಂಡಿತ್ತು. ಮಂಗಳವಾರ ನಡೆದ ಮಹತ್ವದ ಸಭೆಯಲ್ಲಿ 3 ಹೆಸರುಗಳನ್ನು ಅಂತಿಮಗೊಳಿಸಿ ಮೊಹರು ಮಾಡಿದ ಲಕೋಟೆಯಲ್ಲಿ ಸರಕಾರಕ್ಕೆ ಸಲ್ಲಿಸಿತ್ತು.
ಜೂನ್‌ನಿಂದ ಹುದ್ದೆ ಖಾಲಿ
4 ವರ್ಷಗಳಿಂದ ಮಂಗಳೂರು ವಿ.ವಿ. ಕುಲಪತಿಯಾಗಿದ್ದ ಪ್ರೊ| ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಜೂ. 2ರಂದು ಸೇವಾ ನಿವೃತ್ತಿ ಹೊಂದಿದ್ದಾರೆ. ಅಂದಿನಿಂದ ಪ್ರಭಾರ ಕುಲಪತಿಯಾಗಿ ಮಂಗಳೂರು ವಿ.ವಿ. ರಾಜ್ಯಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ಹಾಗೂ ಕಲಾ ನಿಕಾಯದ ಡೀನ್ ಪ್ರೊ| ಜಯರಾಜ್ ಅಮೀನ್ ಅಧಿಕಾರದಲ್ಲಿದ್ದಾರೆ.