ಮಂಗಳೂರು: ಅವಿಭಜಿತ ದ.ಕ ಜಿಲ್ಲೆಯ ಹಿರಿಯ ಸಂಘಟಕ, ತುಳುಕೂಟ ಕುಡ್ಲದ ಅಧ್ಯಕ್ಷ ಬಿ.ದಾಮೋದರ ನಿಸರ್ಗ(76) ಅವರು ಆ.31ರಂದು ನಿಧನ ಹೊಂದಿದರು. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಚಲನಚಿತ್ರ ನಿರ್ದೇಶಕ ವಿಶು ಕುಮಾರ್ ಅವರ ಸಹೋದರರಾಗಿದ್ದ ದಾಮೋದರ ನಿಸರ್ಗ ಅವರು ಮಂಗಳೂರಿನ ಮರೋಳಿಯವರು. ನಾಲ್ಕು ದಶಕಗಳಿಂದ ತುಳುಕೂಟದ ಸಾರಥ್ಯ ವಹಿಸಿದ್ದರು. ತುಳು ಒಕ್ಕೂಟದಲ್ಲಿ ಉಪಾಧ್ಯಕ್ಷರಾಗಿದ್ದ ಅವರು ಸಿವಿಲ್ ಗುತ್ತಿಗೆದಾರರಾಗಿದ್ದರು. ತುಳು ಅಕಾಡೆಮಿಯ ಬೆಳವಣಿಗೆಗೂ ಶ್ರಮಿಸಿದ್ದರು. ವಿಶ್ವ ತುಳುವೆರೆ ಪರ್ಬದ ರೂವಾರಿಯಾಗಿದ್ದರು.
ಮರೋಳಿ ಸೂರ್ಯನಾರಾಯಣ ದೇವಳದ ಆಡಳಿತ ಮೊಕ್ತೇಸರರಾಗಿ, ಗೋಕರ್ಣನಾಥೇಶ್ವರ ಬ್ಯಾಂಕ್ ಅಧ್ಯಕ್ಷರಾಗಿ, ಕಂಕನಾಡಿ ಗರಡಿಯ ಆಡಳಿತ ಮಂಡಳಿ ಸದಸ್ಯರಾಗಿ, ಕಂಕನಾಡಿ ಬಿಲ್ಲವ ಸಂಘದ ಸ್ಥಾಪಕ ಅಧ್ಯಕ್ಷರಾಗಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಹಾನಗರ ಸಂಘ ಚಾಲಕರಾಗಿ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
ದೋಗ್ರ ಪೂಜಾರಿ ಅಧ್ಯಯನ ಕೇಂದ್ರವನ್ನು ಸ್ಥಾಪಿಸಿ 45 ವರ್ಷಗಳಿಂದ ಕಲಾವಿದರನ್ನು ಗುರುತಿಸಿ ಸಮ್ಮಾನಿಸಿದ್ದರು. ಹಲವಾರು ಯಕ್ಷಗಾನ ಕಾರ್ಯಕ್ರಮಗಳನ್ನು ಸಂಘಟಿಸಿದ್ದರು. ಆಯೋಜಿಸುತ್ತಿದ್ದರು.
ಸಂತಾಪ ಅವರ ನಿಧನಕ್ಕೆ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ, ಸ್ಪೀಕರ್ ಯು.ಟಿ.ಖಾದರ್, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ವಿಶ್ರಾಂತ ಕುಲಪತಿಗಳಾದ ಪ್ರೊ| ಬಿ.ಎ ವಿವೇಕ ರೈ, ಡಾ| ಕೆ.ಚಿನ್ನಪ್ಪ ಗೌಡ, ತುಳು ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಮಾಜಿ ಶಾಸಕ ಪ್ರಮುಖರಾದ ಜೆ.ಆರ್. ಲೋಬೊ ಸಹಿತ ಪ್ರಮುಖರು ಸಂತಾಪ ವ್ಯಕ್ತಪಡಿಸಿದ್ದಾರೆ.