ಮಹಾನಗರ: ಮಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಕೆಯಾಗುವ ಮುಖ್ಯ ಕೊಳವೆ ಅಲಲ್ಲಿ ಬಿರುಕು ಬಿಟ್ಟು ಸಾವಿರಾರು ಲೀ. ನೀರು ಪೋಲಾಗುವಂತಹ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು, ತಿಂಗಳ ಅವಧಿಯಲ್ಲಿ ಕನಿಷ್ಠ ಎರಡು ಮೂರು ಕಡೆಗಳಲ್ಲಿ ಇಂತಹ ಘಟನೆಗಳು ವರದಿಯಾಗುತ್ತಿವೆ.
ಬೇಸಗೆ ದಿನಗಳು ಬರುತ್ತಿರುವುದರಿಂದ ನೀರಿನ ಬೇಡಿಕೆ ನಗರದಲ್ಲಿ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕೊಳವೆ ಮಾರ್ಗದಲ್ಲಿ ಬಿರುಕು ಉಂಟಾಗುತ್ತಿರುವುದು ನೀರಿನ ಪೂರೈಕೆಯಲ್ಲಿ ವ್ಯತ್ಯಯಕ್ಕೂ ಕಾರಣವಾಗುತ್ತಿದೆ. ಪರಿಣಾಮ ನೀರು ಇದ್ದರೂ ಕೃತಕ ಅಭಾವ ಸೃಷ್ಟಿಯಾಗುತ್ತಿದ್ದು, ಇದು ಜನ ಪ್ರತಿನಿಧಿಗಳು, ಪಾಲಿಕೆ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ತುಂಬೆ ಅಣೆಕಟ್ಟಿನಿಂದ ನಗರಕ್ಕೆ ಪ್ರತಿದಿನ 160 ಎಂಎಲ್‌ಡಿ ನೀರು ಸರಬರಾಜಾಗುತ್ತದೆ. ಇದರಲ್ಲಿ ಸುಮಾರು 50 ಎಂಎಲ್‌ಡಿ ನೀರು ನಗರಕ್ಕೆ ಬರುವ ಮುನ್ನವೇ ವಿವಿಧ ಹಂತಗಳಲ್ಲಿ ಸೋರಿಕೆ ಯಾಗುತ್ತಿದೆ. 110 ಎಂಎಲ್‌ಡಿಯಷ್ಟು ಮಾತ್ರ ಬಳಕೆಗೆ ದೊರೆಯುತ್ತದೆ. ಕೆಲವು ಕಡೆಗಳಲ್ಲಿ ಪೈಪ್ ಬಿರುಕು ಬಿಟ್ಟು ನೀರು ಪೋಲಾದರೆ, ಗ್ರಾಮೀಣ ಭಾಗದಲ್ಲಿ ನೂರಾರು ಸಂಖ್ಯೆಯಲ್ಲಿ ಅಕ್ರಮ ಸಂಪರ್ಕಗಳಿವೆ. ಇದನ್ನು ಪತ್ತೆ ಹಚ್ಚುವುದು, ತಡೆಯುವುದು ಕೂಡ ಪಾಲಿಕೆ ಅಧಿಕಾರಿಗಳಿಗೆ ಸವಾಲಾಗಿದೆ.
ಪೈಪ್ ಒಡೆದ ಸ್ಥಳ ಹುಡುಕುವುದೂ ಸವಾಲು
ಬಹುತೇಕ ಕಡೆಗಳಲ್ಲಿ ಪೈಪ್ ಒಡೆದಿರುವ ಸ್ಥಳವನ್ನು ಪತ್ತೆ ಹಚ್ಚುವುದೂ ಅಧಿಕಾರಿಗಳಿಗೆ ಸವಾಲಾಗಿದೆ. ಪಂಪ್‌ಹೌಸ್ ಗಳಿಗೆ ಪೂರೈಕೆಯಾಗುವ ಪ್ರಮಾಣ ಕಡಿಮೆಯಾದಾಗ ಪೈಪ್ ಒಡೆದಿರುವ ಸಾಧ್ಯತೆ ಬಗ್ಗೆ ತಿಳಿದು ಬರುತ್ತದೆ. ಕೆಲವು ಕಡೆಗಳಲ್ಲಿ ಪೈಪ್ ಒಡೆದು ನೀರು ಮೇಲಕ್ಕೆ ಬಂದರೆ, ಹುಲ್ಲು ಪೊದೆಗಳು ಇರುವಲ್ಲಿ ಎಲ್ಲಿ ಒಡೆದಿದೆ ಎಂದು ಪತ್ತೆ ಹೆಚ್ಚುವಾಗ ದಿನಗಳು ಕಳೆದಿರುತ್ತದೆ. ಬಳಿಕ ನೆಲವನ್ನು ಅಗೆದು ಪೈಪ್ ದುರಸ್ತಿ ಮಾಡುವಾಗ ಕನಿಷ್ಠ 3-4 ದಿನ ಳು ಬೇಕಾಗುತ್ತವೆ. ಆದ್ದರಿಂದ ಎಲ್ಲಿ ಬಿರುಕು ಉಂಟಾಗಿದೆ ಎಂದು ನಿಖರವಾಗಿ ಪತ್ತೆ ಹಚ್ಚುವ ಆಧು ನಿಕ ಸಾಧನವನ್ನು ಅಳವಡಿಸುವ ಆವಶ್ಯಕತೆಯಿದೆ ಎನ್ನುವ ಸಾರ್ವಜನಿಕರ ಅಭಿಪ್ರಾಯ.
Related Articles
ಕಣ್ಣೂರು ಭಾಗದಲ್ಲಿ ಹೆಚ್ಚು
ತುಂಬೆಯಿಂದ ಮಂಗಳೂರು ನಗರಕ್ಕೆ ನೀರು ಪೂರೈಕೆಯಾಗುವ ಮುಖ್ಯ ಕೊಳವೆ ಅಡ್ಯಾರ್-ಕಣ್ಣೂರು ಭಾಗದಲ್ಲಿ ಒಡೆಯುವುದು ಸಾಮಾನ್ಯವಾಗಿದೆ. ಪ್ರತಿ ವರ್ಷ ಕನಿಷ್ಠ ಒಂದೆರಡು ಬಾರಿಯಾದರೂ ಒಡೆಯುತ್ತಲೇ ಇರುತ್ತದೆ. ಒಂದೊಂದು ವರ್ಷ ಒಂದೊಂದು ಕಡೆಯಲ್ಲಿ ಇಲ್ಲಿ ಪೈಪ್ ಬಿರುಕು ಕಂಡು ಬರುತ್ತದೆ. ಕೆಲವಾರು ವರ್ಷಗಳ ಹಿಂದೆ ಇಲ್ಲಿ ಪೈಪ್ ಮೇಲ್ಮಟ್ಟದಲ್ಲಿ ಕಾಣುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಅಭಿವೃದ್ಧಿಯ ನೆಪದಲ್ಲಿ ಗದ್ದೆಗಳಿಗೆ ಮಣ್ಣು ತುಂಬಿಸಿದ ಪರಿಣಾಮ ಪೈಪ್ ಮಣ್ಣಿನಡಿಯಲ್ಲಿ ಹುದುಗಿ ಹೋಗಿದೆ. ಇದರಿಂದ ಒತ್ತಡ ಬಿದ್ದು ಪೈಪ್‌ಗಳು ಒಡೆಯುತ್ತಿದೆ.
ನೀರಿನ ಒತಡದಿಂದಾಗಿ ¤ ಪೈಪ್ ಬಿರುಕು ನಗರದ ಅಲ್ಲಲ್ಲಿ ನೀರಿನ ಪೈಪ್ ಒಡೆಯುತ್ತಿರುವುದು ಗಮನಕ್ಕೆ ಬಂದಿದೆ. ಒಡೆದಂತಹ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಬಹುತೇಕ ಮುಖ್ಯ ಕೊಳವೆಗಳು ಹಳೆಯದಾಗಿದ್ದು, ನೀರಿನ ಒತ್ತಡದ ಕಾರಣದಿಂದ \ ಪೈಪ್ ಬಿರುಕು ಬಿಡುತ್ತಿದೆ. ಪರ್ಯಾಯ ವ್ಯವಸ್ಥೆಗೆ ಸಂಬಂಧಿಸಿದಂತೆ ಇರುವ ಅವಕಾಶಗಳ ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು.
-ಜಯಾನಂದ ಅಂಚನ್, ಮೇಯರ್
ಇತ್ತೀಚೆಗೆ ಪೈಪ್ ಒಡೆದ ಸ್ಥಳಗಳು
ಜ. 21-ಕಣ್ಣೂರು ಶೆಲ್ ಪೆಟ್ರೋಲ್ ಪಂಪ್ ಬಳಿ
ಡಿ. 12- ಕೂಳೂರು ಸೇತುವೆ ಬಳಿ
ಡಿ. 6- ಗರೋಡಿ ರೋಹನ್ ಸಿಟಿ ಬಳಿ
ಅ. 12- ಕುಂಟಿಕಾನ ಮತ್ತು ಕೂಳೂರು ಸೇತುವೆ ಬಳಿ
*ಭರತ್ ಶೆಟ್ಟಿಗಾರ್